ಜೀವನದ ಯಶಸ್ಸಿಗೆ ಪರಿಶ್ರಮ, ಪ್ರಾಮಾಣಿಕತೆಯ ಕಾರ್ಯ ಬೇಕು: ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ
ಪ್ರಗತಿವಾಹಿನಿ ಸುದ್ದಿ, ಯಕ್ಸಂಬಾ: ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ಮಾಡಬೇಕಾಗುತ್ತದೆ ಎಂದು ಚಿಕ್ಕೋಡಿ ಉಪನಿರ್ದೇಶಕರ ಕಾರ್ಯಾಲಯದ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಹೇಳಿದರು.
ಜೊಲ್ಲೆ ಎಜ್ಯುಕೇಶನ್ ಸೊಸೈಟಿಯ ಅಂಗ ಸಂಸ್ಥೆಯಾದ ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದದೇ ಇಷ್ಟಪಟ್ಟು ಪ್ರಾಮಾಣಿಕತೆಯಿಂದ ಅಧ್ಯಯನದಲ್ಲಿ ತೊಡಗಿ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಹಾಗೂ ಮ್ಯಾಗ್ನಂ ಟಫ್ ಇಂಡಿಯಾ ಪ್ರೈ. ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಮಾತನಾಡಿ, ನಮ್ಮ ಸಂಸ್ಥೆಯು ಗ್ರಾಮೀಣ ಮಟ್ಟದಲ್ಲಿ ಸ್ಥಾಪನೆಗೊಂಡು ವಿದ್ಯಾರ್ಥಿಗಳಿಗೆ ಬೇಕಾದಎಲ್ಲ ಮೂಲ ಸೌಕರ್ಯಗಳೊಂದಿಗೆ ಕಲಿಕೆಗೆ ಬೇಕಾದ ವಾತಾವರಣವನ್ನು ನಿರ್ಮಿಸಿದ್ದು ಇದರ ಪ್ರತಿಫಲವಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅತ್ಯುತ್ತಮವಾಗುವುದರೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿರುವುದು ಸಂತಸವನ್ನಂಟು ಮಾಡಿದೆ ಎಂದರು.
ಜೊಲ್ಲೆ ಉದ್ಯೋಗ ಸಮೂಹದ ಇವೆಂಟ್ ಮ್ಯಾನೇಜ್ ಮೆಂಟ್‌ನ ನಿರ್ದೇಶಕ ವಿಜಯ ರಾವುತ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ಶಾಲಾ ಚಟುವಟಿಕೆಗಳೊಂದಿಗೆ ಅಂತರ್ ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆ, ರಾಜ್ಯ ಮಟ್ಟದವರೆಗೆ ಹೆಸರನ್ನು ಗುರುತಿಸುವಂತಾಗಬೇಕೆಂದು ಹೇಳಿದರು.
ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿ, ವಿದ್ಯಾರ್ಥಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಫೇಮಿದಾ ದಾಡಿವಾಲೆ, ಸುಜಾತಾ ಕಬಾಡೆ, ಲತಾ ವಾಳಕೆ, ಶಾಲೆಯ ಮುಖ್ಯೋಪಾಧ್ಯಾಯ ವಿ.ಆರ್.ಭಿವಸೆ, ಎಸ್.ಜಿ. ಕಾಮತ್, ಎಲ್ಲ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ವಿ.ಆರ್. ಭಿವಸೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸೂರಜ ನಿಡಗುಂದೆ ವಂದಿಸಿದರು. ಮಂಜುಳಾ ಕಾಂಡಗಾವೆ ನಿರೂಪಿಸಿದರು.
ನಬಾರ್ಡ್ ನಲ್ಲಿ ಉದ್ಯೋಗಾವಕಾಶ; ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ