Kannada News

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಛಲ ಮತ್ತು ಶ್ರದ್ಧೆ: ರಾಷ್ಟ್ರ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಬೆಳಗಾವಿ ಹೆಸರು ; ಭಾನುವಾರ ಭವ್ಯ ಶಿವಾಜಿ ಮೂರ್ತಿ ಉದ್ಘಾಟನೆ

ಶನಿವಾರದಿಂದಲೇ ಶಾಸ್ತ್ರೋಕ್ತ ವಿಧಿವಿಧಾನಗಳು ಆರಂಭ; ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಭಾನುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಐತಿಹಾಸಿಕ ಕೇಂದ್ರ ರಾಜಹಂಸಗಡ ಕೋಟೆಯ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಲೋಕಾರ್ಪಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಜಹಂಸಗಡನಲ್ಲಿರುವ ಕ್ಷೇತ್ರಪಾಲಕ ಶ್ರೀ ಸಿದ್ಧೇಶ್ವರ ದೇವರಿಗೆ ವಿಶೇಷ ಪೂಜೆ, ಹೋಮ ಹವನ, ಅಭಿಷೇಕ ಸೇರಿದಂತೆ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ ಮಧ್ಯಾಹ್ನದವರೆಗೂ ನಡೆದವು. 

ಭಾನುವಾರ ಬೆಳಗ್ಗೆ 9 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ. ಪಾಲಕಿ ಉತ್ಸವ, ಸಾಂಪ್ರದಾಯಿಕ ಹಾಲಗಿ ಕಾರ್ಯಕ್ರಮಗಳು ನಡೆಯಲಿವೆ. 10 ಗಂಟೆಗೆ ದೇವಸ್ಥಾನ ಪ್ರವೇಶವಾಗಲಿದೆ. 10.30ರಿಂದ ಧ್ವಜಾರೋಹಣ, ಉತ್ಸವ ಮೂರ್ತಿ ಪೂಜಾ, ಡೋಲ್ ತಾಶಾದೊಂದಿಗೆ ಮೂರ್ತಿ ಉದ್ಘಾಟನೆಯಾಗಲಿದೆ. 

 ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ವಿಧಾನಸಭೆ ಪ್ರತಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ ಸತೇಜ್ (ಬಂಟಿ) ಪಾಟೀಲ, ಖ್ಯಾತ ಮರಾಠಿ ನಟ ಹಾಗೂ ಲೋಕಸಭಾ ಸದಸ್ಯ ಡಾ. ಅಮೋಲ್ ಕೋಲ್ಲೆ, ಲಾತೂರು ಗ್ರಾಮೀಣ ಶಾಸಕ ಧೀರಜ್ ದೇಶಮುಖ್, ಖ್ಯಾತ ಚಿತ್ರನಟ ರಿತೇಶ ದೇಶಮುಖ್  ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

​ ಭಾನುವಾರ ಸಂಜೆ 5.30ರಿಂದ 6.30ರ ವರೆಗೆ ಪೋವಾಡಾ, 6.30ರಿಂದ 7.30ರವರೆಗೆ ಡೋಲ್ ತಾಶಾ, 7.30ರಿಂದ ಲೇಸರ್ ಶೋ ಮತ್ತು ಕ್ರ್ಯಾಕರ್ ಶೋಗಳ ಮೂಲಕ ಮೂರ್ತಿಗೆ ಗೌರವ ಸಲ್ಲಿಸುವುದು, 8.30ರಿಂದ ಸನ್ಮಾನ ಸಮಾರಂಭ ಹಾಗೂ ಮರದಾನಿ ಖೇಳ ಮೊದಲಾದ ಪಾರಂಪರಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವಾರು ಗಣ್ಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಒಟ್ಟಾರೆ ಒಂದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ​

ನಾಳೆಯ ಕಾರ್ಯಕ್ರಮದಲ್ಲಿ ​ಜನರು ಹೆಚ್ಚಿನ ಸಂಖ್ಯೆಯಲ್ಲಿ​ ಭಾಗವಹಿಸುವ ಮೂಲಕ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗ​ಬೇಕು​ ಎಂದು ​ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದ್ದಾರೆ.

ನುಡಿದಂತೆ ನಡೆದ ಛಲಗಾರ್ತಿ

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮನೆಮಗಳಾಗಿ ಕ್ಷೇತ್ರದ ಜನರ ಸಂಕಷ್ಟಗಳಿಗೆ ಮಿಡಿಯುವುದರ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜನರ ಭಾವನೆ ಅರಿತುಕೊಂಡು ತಾಲೂಕಿನ ರಾಜಹಂಸಗಡದಲ್ಲಿ ಸುಮಾರು 3 ಕೋಟಿ ರೂ. ಸರಕಾರದ ಅನುದಾನ ಹಾಗೂ ವೈಯಕ್ತಿ ಒಂದು ಕೋಟಿ ರೂ.ಗಳಲ್ಲಿ ನಿರ್ಮಿ​ಸಿ​​ರುವ ಬೃಹತ್ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆಗೆ ಸಜ್ಜಾಗಿದ್ದು​,​  ಹೊಸ ಇತಿಹಾಸ ನಿರ್ಮಾಣವಾಗಿದೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಭಿವೃದ್ಧಿಯ ಕಾರ್ಯವನ್ನು ಸಹಿಸದ ರಾಜಕೀಯ ವಿರೋಧಿಗಳು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿವಾಜಿ ಮೂರ್ತಿ ಉದ್ಘಾಟನೆಯಲ್ಲಿ ಹಸ್ತಕ್ಷೇಪ ಮಾಡಿ ತರಾತುರಿಯಲ್ಲಿ, ಇನ್ನೂ ಬಣ್ಣ ಬಳಿಯುವ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಉದ್ಘಾಟನೆ ಮಾಡಿಸಿದ್ದು, ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಶಿವಾಜಿ ಮೂರ್ತಿ ಸ್ಥಾಪನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊನೆಯ ಗಳಿಗೆಯಲ್ಲಿ ರಾಜಕೀಯ ವಿರೋಧಿಗಳು ಮಾಡಿದ ಕುತಂತ್ರ​ವನ್ನು​ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನರು ಎಂದಿಗೂ ಮರೆಯುವುದಿಲ್ಲ.

ಲಕ್ಷ್ಮೀ  ಹೆಬ್ಬಾಳ್ಕರ್ ಗ್ರಾಮೀಣ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೊಡಮಾಡಿದ್ದಾರೆ. ಬಿಜೆಪಿ ಸರಕಾರದಲ್ಲಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರ​ ಮನವೊಲಿಸಿ​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ​ ಹಣ ಮಂಜೂರು ಮಾಡಿ​ಸಿ​ದ್ದಾರೆ. ಅಷ್ಟೆ ಅಲ್ಲ ಪ್ರವಾಸೋದ್ಯಮದ ಇಲಾಖೆಯಿಂದ ರಾಜಹಂಸಗಡ ಅಭಿವೃದ್ಧಿ​ಗೆ,​ ಬೃಹತ್ ಶಿವಾಜಿ ಮೂರ್ತಿಗೆ ಹೆಬ್ಬಾಳ್ಕರ್ ಅವರು ಹೆಚ್ಚುವರಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಕೀಯ ವಿರೋಧಿಗಳಿಗೆ ಟಕ್ಕರ್ ಕೊಡಲು ​ಗಟ್ಟಿಯಾಗಿ​ ನಿಂತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾನುವಾರ ಹಲವಾರು ನಾಯಕರನ್ನು ಆಹ್ವಾನಿಸಿ ಶಿವಾಜಿ ಮೂರ್ತಿಯನ್ನು ಉದ್ಘಾಟಿಸಲಿದ್ದಾರೆ.​ ಈ ಸಂಬ್ಧ ಶನಿವಾರವೇ ಶಾಸ್ತ್ರೋಕ್ತ ಕಾರ್ಯಕ್ರಮಗಳು ನಡೆದಿವೆ.​ ಭಾನುವಾರ ಶಿವಾಜಿ ಮೂರ್ತಿಯ ಉದ್ಘಾಟನಾ ಸಮಾರಂಭ ಕ್ಷೇತ್ರದಲ್ಲಿ ಶಾಸಕಿ ಹೆಬ್ಬಾಳ್ಕರ್ ಅವರಿಗೆ ವರದಾನವಾಗಿ ಪರಿಣಮಿಸಲಿದೆ.

​ 

ಲಕ್ಷ್ಮೀ ಗೆ ಸಹೋದರ, ಪುತ್ರನ ಸಾಥ್

ಸದ್ಯ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯವಾಗಿ ಬೆಳೆದು ನಿಂತಿದ್ದಾರೆ. ಇದಕ್ಕೆ  ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ  ಪುತ್ರ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಮತ್ತು ಕ್ಷೇತ್ರದ ಜನರ ಸಹಕಾರ​ ಕಾರಣ​ವಾಗಿದೆ. ಅಲ್ಲದೆ, ಮರಾಠಿ ಭಾಷಿಕರನ್ನು ತಮ್ಮತ್ತ ಸೆಳೆಯುವಲ್ಲಿ ಲಕ್ಷ್ಮೀ ಯಶಸ್ವಿಯಾಗಿದ್ದಾರೆ. ಇದನ್ನು ಸಹಿಸದ ಕೆಲ ರಾಜಕೀಯ ವಿರೋಧಿಗಳು ಎಲ್ಲದಕ್ಕೂ ಹೆಬ್ಬಾಳ್ಕರ್ ವಿರುದ್ಧ ಹೇಳಿಕೆ ನೀಡುವುದು ನಿರಂತರವಾಗಿದೆ. ​ 

​ 

ರಾಜ್ಯದ ಗಮನ ಸೆಳೆಯುವಂತೆ ಮಾಡಿದ ಗ್ರಾಮೀಣ ಕ್ಷೇತ್ರ

ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ​ ಸೋಲಾಗಿದ್ದರೂ ಮನೆಯಲ್ಲಿ ಕುಳಿತುಕೊಳ್ಳ​ದೆ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವುದರ ಮೂಲಕ 2018ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 52 ಸಾವಿರ ಮತಗಳಲ್ಲಿ ಭರ್ಜರಿ ಗೆಲವು ದಾಖಲಿಸಿ ವಿರೋಧಿಗಳ ಬಾಯಿ ಮುಚ್ಚಿಸಿದ್ದರು. ಅದರಂತೆ ಕಳೆದ ನಾಲ್ಕುವರೆ ವರ್ಷಗಳಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರವನ್ನು ರಾಜ್ಯದ ಜನ ನೋಡುವ ಹಾಗೆ ಅಭಿವೃದ್ಧಿ ಮಾಡಿದ್ದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಇವರ ಅಭಿವೃದ್ಧಿ ಕಾರ್ಯಗಳನ್ನು ​ಸಹಿಸದ​ ಕೆಲ ವಿರೋಧಿಗಳು​,​ ರಾಜಹಂಸಗಡ ಕೋಟೆಯಲ್ಲಿ ಬೃಹತ್ ಶಿವಾಜಿ ಮೂರ್ತಿಯ ಮೇಲೆ  ವಕ್ರದೃಷ್ಟಿ ​ಬೀರಿ, ಹೆಬ್ಬಾಳ್ಕರ್ ಒಬ್ಬ ಮಹಿಳೆ ಎನ್ನುವುದನ್ನು ಮರೆತು ವೈಯಕ್ತಿವಾಗಿ ಆರೋಪ ಮಾಡಿದ್ದು ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳು ಹಾಗೂ ಕ್ಷೇತ್ರದ ಜನರಿಗೆ ನೋವು ಉಂಟು ಮಾ​ಡಿದೆ​.

ದಶಕಗಳ ಕನಸು ನನಸು ಮಾಡಿದ ಮನೆ ಮಗಳು

ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಬರುವ ರಾಜಹಂಸಗಡದ ಕೋಟೆಯಲ್ಲಿ ಶಿವಾಜಿ ಮೂರ್ತಿ ಸ್ಥಾಪನೆ ಮಾಡಬೇಕು. ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ​ಯ​ ಇತಿಹಾಸದ ಕೋಟೆಯಲ್ಲಿಯೇ ನಿರ್ಮಿಸಬೇಕೆಂಬ ಕ್ಷೇತ್ರದ ಜನರ ಬೇಡಿಕೆಯನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸರಕಾರದ ದುಂಬಾಲು ಬಿದ್ದು 3 ಕೋಟಿ ರೂ. ಅನುದಾನ​ ತಂದು, ಜೊತೆಗೆ ವೈಯಕ್ತಿಕವಾಗಿ ಒಂದು ಕೋಟಿ ರೂ.​ ಹಾಕಿ ಬೃಹತ್ ಶಿವಾಜಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನನ್ನ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನರ ಕನಸು ನನಸಾಗುವ ಕಾಲ ಇದು. ಮಾ.5ಕ್ಕೆ ರಾಜಹಂಸಗಡದಲ್ಲಿ ಬೃಹತ್ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆಯಾಗುತ್ತಿರುವದು ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವಂಥದ್ದಾಗಿರುತ್ತದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗ​ಬೇಕೆಂದು ಎಲ್ಲರಲ್ಲೂ ವಿನಂತಿಸುತ್ತೇನೆ​.

-ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button