Karnataka NewsLatestPolitics

*ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ: ಲೋಕಭವನದ ಸುತ್ತ 2 ಸಾವಿರಕ್ಕೂ ಅಧಿಕ ಪೊಲೀಸರಿಂದ ಭದ್ರತೆ*

ಪ್ರಗತಿವಾಹಿನಿ ಸುದ್ದಿ: ಸಿದ್ದರಾಮಯ್ಯ ರಾಜೀನಾಮೆ ಬಳಿಕ ಡಿ.ಕೆ.ಶಿವಕುಮಾರ್ ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಂಜೆ 4.5ಕ್ಕೆ ಲೋಕಭವನದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡಿ.ಕೆ.ಶಿವಕುಮಾರ್ ಪಟ್ತಾಭಿಷೇಕ ಹಿನ್ನೆಲೆಯಲ್ಲಿ ಲೋಕಭವನ ಹಾಗೂ ವಿಧಾನಸೌಧ ಸುತ್ತಮುತ್ತ ಪೊಲಿಸ್ ಸರ್ಪಗಾವಲು ಹಾಕಲಾಗಿದೆ. ಎಲ್ಲೆಡೆ ಹೈ-ಅಲರ್ಟ್ ಘೋಷಿಸಲಾಗಿದೆ.

Home add -Advt

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ನೇತೃತ್ವದಲ್ಲಿ 3 ಜಂಟಿ ಆಯುಕ್ತರು, 20 ಡಿಸಿಪಿಗಳು, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 2,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಇಡೀ ಜಾಗವನ್ನು ವಿವಿಧ ಸೆಕ್ಟರ್‌ಗಳಾಗಿ ವಿಂಗಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬೆಂಗಳೂರು ನಗರದ ಪೊಲೀಸರ ಜೊತೆಗೆ ಬೇರೆ ಜಿಲ್ಲೆಗಳಿಂದಲೂ ಕೆಲವು ದಕ್ಷ ಅಧಿಕಾರಿಗಳನ್ನು ಕಮಿಷನರ್ ಕರೆಸಿಕೊಳ್ಳಲಾಗಿದೆ. ಬಂದೋಬಸ್ತ್‌ಗಾಗಿ 3 ಮಂದಿ ಜಂಟಿ ಪೊಲೀಸ್ ಆಯುಕ್ತರು, 20ಕ್ಕೂ ಹೆಚ್ಚು ಡಿಸಿಪಿಗಳು , 50ಕ್ಕೂ ಹೆಚ್ಚು ಎಸಿಪಿಗಳು , 100ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, 300ಕ್ಕೂ ಹೆಚ್ಚು ಪಿಎಸ್‌ಐಗಳು , 700ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ಗಳು ಹಾಗೂ ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತೆಯ ಉಸ್ತುವಾರಿಗಾಗಿ ಪ್ರತಿ ಸೆಕ್ಟರ್‌ಗೂ ಓರ್ವ ಡಿಸಿಪಿ ದರ್ಜೆಯ ಅಧಿಕಾರಿಗೆ ನೇತೃತ್ವದ ಜವಾಬ್ದಾರಿ ನೀಡಲಾಗಿದೆ.

ಲೋಕಭವನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕೇವಲ ವೆಹಿಕಲ್ ಪಾಸ್ ಹೊಂದಿರುವ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರವೇ ನೇರವಾಗಿ ಆವರಣದ ಒಳಗಡೆ ವಾಹನ ಚಾಲನೆ ಮಾಡಲು ಅನುಮತಿ ನೀಡಲಾಗಿದೆ. ಗಣ್ಯರೆಲ್ಲರೂ ಕಾರ್ಯಕ್ರಮ ಆರಂಭವಾಗುವ ಕನಿಷ್ಠ ಒಂದು ಗಂಟೆ ಮುಂಚಿತವಾಗಿಯೇ ಆಸನಗಳನ್ನು ಅಲಂಕರಿಸುವಂತೆ ಸೂಚಿಸಲಾಗಿದೆ.

Related Articles

Back to top button