Kannada NewsLatest

*ರೇಣುಕಾಸ್ವಾಮಿ ಸಾವಿನ ಸುದ್ದಿ ಕೇಳಿ ದರ್ಶನ್ ಶಾಕ್*: *‘ನಾನು ಕೂಡ ಶೂಟ್ ಮಾಡಿಕೊಳ್ಳುತ್ತೇನೆ’ ಎಂದಿದ್ದರಂತೆ ಚಾಲೆಂಜಿಂಗ್‌ ಸ್ಟಾರ್*!

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಮಂಗಳವಾರ ನ್ಯಾಯಾಲಯದ ಮುಂದೆ ಹಲವು ಮಹತ್ವದ ಹೇಳಿಕೆಗಳನ್ನು ದಾಖಲಿಸಿದ್ದಾರೆ. ರೇಣುಕಾಸ್ವಾಮಿ ಮೃತಪಟ್ಟಿರುವ ವಿಚಾರವನ್ನು ತಾನೇ ದರ್ಶನ್‌ಗೆ ತಿಳಿಸಿದ್ದಾಗಿ ಪ್ರದೋಷ್ ಹೇಳಿದ್ದಾರೆ. ಸುದ್ದಿ ಕೇಳಿದ ದರ್ಶನ್ ತೀವ್ರ ಆಘಾತಕ್ಕೊಳಗಾಗಿ ‘ನಾನು ಕೂಡ ಶೂಟ್ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಸಾವಿನ ಸುದ್ದಿ ತಿಳಿದ ಬಳಿಕ ದರ್ಶನ್ ಮತ್ತೆ ಮತ್ತೆ ‘ಯಾರು ಯಾರು?’ ಎಂದು ಪ್ರಶ್ನಿಸಿದ್ದರು. ಬಳಿಕ ನನ್ನ ಕೈಹಿಡಿದುಕೊಂಡು ‘ಏನಾಯ್ತು ನೋಡಿ, ನಾನು ಕೂಡ ಶೂಟ್ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾಗಿ ಪ್ರದೋಷ್ ಸಾಕ್ಷ್ಯ ನೀಡಿದ್ದಾರೆ. ತಾವು ಶೆಡ್‌ನಿಂದ ಹೊರಡುವಾಗ ರೇಣುಕಾಸ್ವಾಮಿ ಬದುಕಿದ್ದ, ಈಗ ಏನಾಯಿತು ಎಂದು ದರ್ಶನ್ ಪ್ರಶ್ನಿಸಿದ್ದರು ಎಂದು ಹೇಳಿದ್ದಾರೆ.

ಈ ಬಳಿಕ ದರ್ಶನ್ ಮ್ಯಾನೇಜರ್ ನಾಗರಾಜ್‌ಗೆ ಕರೆ ಮಾಡಿ ಪಟ್ಟಣಗೆರೆ ಶೆಡ್‌ಗೆ ತೆರಳಿದ್ದಾಗಿ ಪ್ರದೋಷ್ ತಿಳಿಸಿದ್ದಾರೆ. ಶೆಡ್ ಗೇಟ್ ಬಳಿ ನಾಗರಾಜ್, ವಿನಯ್, ಲಕ್ಷ್ಮಣ್, ಅನುಕುಮಾರ್, ಜಗದೀಶ್, ರವಿ ಹಾಗೂ ಪವನ್ ಇದ್ದರು. ಘಟನೆ ಬಗ್ಗೆ ವಿಚಾರಿಸಿದಾಗ, ತಾನು ಹೊರಟ ಬಳಿಕ ರೇಣುಕಾಸ್ವಾಮಿಯನ್ನು ರೂಮಿಗೆ ಕರೆದುಕೊಂಡು ಹೋಗಲಾಗಿತ್ತು. ಐದು ನಿಮಿಷದಲ್ಲೇ ಮೃತಪಟ್ಟಿದ್ದ ಎಂದು ಜಗದೀಶ್ ತಿಳಿಸಿದ್ದಾಗಿ ಪ್ರದೋಷ್ ಹೇಳಿದ್ದಾರೆ.

ರೇಣುಕಾಸ್ವಾಮಿಯನ್ನು ರೂಮಿಗೆ ಕರೆದುಕೊಂಡು ಹೋಗಿದ್ದು ಯಾರು ಎಂದು ಪ್ರಶ್ನಿಸಿದಾಗ ನಂದೀಶ್ ಮತ್ತು ರಾಘವೇಂದ್ರ ಎಂದು ತಿಳಿಸಲಾಗಿತ್ತು. ಬಳಿಕ ಚಿತ್ರದುರ್ಗದಿಂದ ಬಂದಿದ್ದ ಅನುಕುಮಾರ್, ಜಗದೀಶ್, ರವಿ ಹಾಗೂ ರಾಘವೇಂದ್ರಗೆ ಪೊಲೀಸರ ಮುಂದೆ ಶರಣಾಗುವಂತೆ ಪ್ರದೋಷ್ ಮತ್ತು ವಿನಯ್ ಸೂಚಿಸಿದ್ದರು. ಆದರೆ ಅನುಕುಮಾರ್ ಸೇರಿದಂತೆ ಕೆಲವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ಶರಣಾಗಲು ನಿರಾಕರಿಸಿದ್ದರು. ಆಗ ನಾನು ಆತನಿಗೆ ಹೆದರಿಸಲು ‘ಆರ್.ಆರ್. ನಗರ ಪೊಲೀಸರಿಗೆ ಫೋನ್ ಮಾಡುತ್ತೇನೆ’ ಎಂದು ಮೊಬೈಲ್ ತೆಗೆದುಕೊಂಡೆ ಎಂದು ಪ್ರದೋಷ್‌ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಅವರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ.

ಶೆಡ್ ಮಾಲೀಕ ವಿನಯ್ ಕೂಡ ಸ್ಥಳಕ್ಕೆ ಬಂದು ಶೆಡ್‌ಗೆ ಕೆಟ್ಟ ಹೆಸರು ಬರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಪ್ರದೋಷ್ ಹೇಳಿದ್ದಾರೆ. ಬಳಿಕ ರಾಘವೇಂದ್ರ, ಅನುಕುಮಾರ್, ಜಗದೀಶ್ ಹಾಗೂ ರವಿಗೆ ಮೃತದೇಹವನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗುವಂತೆ ಸೂಚಿಸಲಾಗಿತ್ತು. ಆದರೆ ರವಿ ತಾನು ಬಾಡಿಗೆಗೆ ಬಂದಿದ್ದು, ಮೃತದೇಹ ತೆಗೆದುಕೊಂಡು ಹೋಗುವುದಿಲ್ಲ ಎಂದು ನಿರಾಕರಿಸಿದ್ದಾಗಿ ಪ್ರದೋಷ್ ತಿಳಿಸಿದ್ದಾರೆ.

ಈ ವೇಳೆ ಏನು ಮಾಡಬೇಕು ಎಂಬುದು ತಿಳಿಯದೆ ಪರಿಚಿತ ಪಿಎಸ್‌ಐ ವಿನಯ್‌ಗೆ ಕರೆ ಮಾಡಿದ್ದಾಗಿ ಪ್ರದೋಷ್ ಹೇಳಿದ್ದಾರೆ. ಹಣಕಾಸಿನ ವಿಚಾರದಲ್ಲಿ ಗಲಾಟೆಯಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿ ಸಲಹೆ ಕೇಳಿದ್ದಾಗಿ ತಿಳಿಸಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ ಶರಣಾಗುವಂತೆ ಪಿಎಸ್‌ಐ ಸೂಚಿಸಿದ್ದರು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಬಳಿಕ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನ ಮನವೊಲಿಸಿ ಶರಣಾಗಲು ಸಿದ್ಧಪಡಿಸಲಾಯಿತು ಎಂದು ಪ್ರದೋಷ್ ಹೇಳಿದ್ದಾರೆ. ಕುಟುಂಬದ ಖರ್ಚು ಹಾಗೂ ಜಾಮೀನು ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಲಾಗಿತ್ತು. ನಂತರ ಹಣಕಾಸಿನ ವಿಚಾರದಲ್ಲಿ ಗಲಾಟೆಯಾಗಿ ಕೊಲೆ ನಡೆದಿದೆ ಎಂಬ ಸುಳ್ಳು ಕಥೆ ಸಿದ್ಧಪಡಿಸಿ ಪೊಲೀಸರ ಮುಂದೆ ಶರಣಾಗುವ ಯೋಜನೆ ರೂಪಿಸಲಾಗಿತ್ತು ಎಂದು ಸಾಕ್ಷ್ಯ ನೀಡಿದ್ದಾರೆ.

ಈ ವ್ಯವಸ್ಥೆಯ ಬಳಿಕ ದರ್ಶನ್ ಮನೆಗೆ ತೆರಳಿದಾಗ, ಮೈಸೂರಿಗೆ ಹೊರಟಿದ್ದೆ. ಸುದ್ದಿ ತಿಳಿದು ವಾಪಸ್ ಬಂದೆ ಎಂದು ದರ್ಶನ್ ಹೇಳಿದ್ದಾಗಿ ಪ್ರದೋಷ್ ತಿಳಿಸಿದ್ದಾರೆ. ಆರೋಪಿಗಳ ಮನೆ ಖರ್ಚು, ಜೈಲು ಖರ್ಚು ಹಾಗೂ ಜಾಮೀನು ಪ್ರಕ್ರಿಯೆಗೆ ಕನಿಷ್ಠ ₹30 ಲಕ್ಷ ಬೇಕಾಗುತ್ತದೆ ಎಂಬ ವಿಚಾರವನ್ನೂ ದರ್ಶನ್ ಬಳಿ ತಿಳಿಸಿದ್ದಾಗಿ ಹೇಳಿದ್ದಾರೆ.

ಪ್ರದೋಷ್ ನೀಡಿದ ಹೇಳಿಕೆಗಳನ್ನು ನ್ಯಾಯಾಧೀಶೆ ಸುಜಾತಾ ಸಾಂಬ್ರಾಣಿ ದಾಖಲಿಸಿಕೊಂಡಿದ್ದಾರೆ. ಮಾಫಿ ಸಾಕ್ಷಿಯ ವಿಚಾರಣೆ ಮುಂದುವರಿಯಲಿದ್ದು, ಮುಂದಿನ ವಿಚಾರಣೆಯನ್ನು ಇಂದು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ.

*ರೇಣುಕಾಸ್ವಾಮಿ ಕೇಸ್‌ಗೆ ಬಿಗ್‌ ಟ್ವಿಸ್ಟ್‌*: *3 ಗಂಟೆ ಪ್ರದೋಷ್‌ ಸಾಕ್ಷ್ಯ, ಇಂದು ಮತ್ತೆ ವಿಚಾರಣೆ*! – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button