CrimeKannada NewsKarnataka NewsLatest

*ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ*: *ಗಂಭೀರ ಗಾಯಗೊಂಡಿದ್ದ ಚಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಆಟೋರಿಕ್ಷಾ, ನ್ಯಾಯಾಧೀಶರ ಕಾರು ಹಾಗೂ ಸ್ಕೂಟರ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಗೂಡ್ಸ್ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಂಗಳೂರಿನ ಬಾವುಟಗುಡ್ಡೆಯ ಜಿಲ್ಲಾ ನ್ಯಾಯಾಲಯದ ಸಮೀಪದ ಕೋರ್ಟ್ ಕ್ರಾಸ್ ರಸ್ತೆಯಲ್ಲಿ ಗೂಡ್ಸ್ ವಾಹನ, ನ್ಯಾಯಾಧೀಶರ ಕಾರು ಹಾಗೂ ಸ್ಕೂಟರ್ ನಡುವೆ ಸರಣಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಕಾಸರಗೋಡಿನ ಮೊಗ್ರಾಲಿನ ಪುತ್ತೋರಿ ಪೆರಾಲ್ ಲಕ್ಷ್ಮೀ ನಿಲಯದ ನಿವಾಸಿ ಚಂದ್ರ ಕೆ ಗಂಭೀರವಾಗಿ ಗಾಯಗೊಂಡಿದ್ದರು. ಚಂದ್ರ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿನಯ್ ಡಿ ಹ್ಯಾಟ್‌ಹಿಲ್ ಜಡ್ಜಸ್ ಕ್ವಾರ್ಟರ್ಸ್‌ನಿಂದ ಕಾರಿನಲ್ಲಿ ನ್ಯಾಯಾಲಯದ ಸಂಕೀರ್ಣಕ್ಕೆ ತೆರಳುತ್ತಿದ್ದರು. ರಾಧಾ ಮೆಡಿಕಲ್ಸ್ ಎದುರಿನ ತಿರುವಿನಲ್ಲಿ ಕಾರು ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ನ್ಯಾಯಾಲಯದ ಕಡೆಯಿಂದ ಇಳಿಜಾರು ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಗೂಡ್ಸ್ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆಯ ಬಲಭಾಗಕ್ಕೆ ನುಗ್ಗಿದ ಆಟೋ ನೇರವಾಗಿ ನ್ಯಾಯಾಧೀಶರ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಗೂಡ್ಸ್ ಆಟೋರಿಕ್ಷಾ ರಸ್ತೆಯಲ್ಲೇ ಪಲ್ಟಿಯಾಗಿದೆ. ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಹೋಂಡಾ ಆಕ್ಟಿವಾ ಸ್ಕೂಟರ್‌ಗೂ ಆಟೋ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂರೂ ವಾಹನಗಳು ಭಾಗಶಃ ಜಖಂಗೊಂಡಿವೆ.

ಅಪಘಾತದಲ್ಲಿ ನ್ಯಾಯಾಧೀಶ ವಿನಯ್ ಡಿ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಕೂಟರ್ ಸವಾರ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಮಂಗಳೂರು ಕದ್ರಿ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಕ್ರಮಾಂಕ 130/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125(a), 125(b) ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಪಘಾತದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button