CrimeKannada NewsKarnataka News

*ಸ್ವರ್ಣ ನದಿಯಲ್ಲಿ ದುರಂತ: ಈಜಲು ತೆರಳಿದ್ದ ಇಬ್ಬರು ಯುವಕರ ಸಾವು*

ಪ್ರಗತಿವಾಹಿನಿ ಸುದ್ದಿ: ಈಜಾಡಲು ನದಿಗೆ ತೆರಳಿದ್ದ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಕಾರ್ಕಳ ತಾಲೂಕಿನ ಹೀರ್ಗಾನ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಹೀರ್ಗಾನ ಗ್ರಾಮದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂದು ಗುರುತಿಸಲಾಗಿದೆ.

ಮಂಗಳವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ನಾಲ್ಕೈದು ಮಂದಿ ಸ್ನೇಹಿತರು ಸ್ವರ್ಣ ನದಿ ತೀರಕ್ಕೆ ತೆರಳಿದ್ದರು. ಈ ವೇಳೆ ಭರತ್ ಹಾಗೂ ಹರ್ಷನ್ ನದಿಗೆ ಇಳಿದು ಈಜುತ್ತಿದ್ದಾಗ, ಆಳ ಹಾಗೂ ನೀರಿನ ಹರಿವಿನ ಅರಿವಿಲ್ಲದೆ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಇಬ್ಬರೂ ಮುಳುಗುತ್ತಿರುವುದನ್ನು ಗಮನಿಸಿದ ಸ್ನೇಹಿತರು ರಕ್ಷಿಸಲು ಪ್ರಯತ್ನಿಸಿದರೂ, ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಜೊತೆಯಲ್ಲಿದ್ದ ರಂಜಿತ್ (27) ಮತ್ತು ಕೇತನ್ (23) ಅಪಾಯದಿಂದ ಪಾರಾಗಿ ಸುರಕ್ಷಿತವಾಗಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ, ಕಾರ್ಕಳ ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. 

ಲೈಫ್ ಜಾಕೆಟ್, ಹಗ್ಗಗಳು ಹಾಗೂ ಡ್ರೋನ್ ಕ್ಯಾಮೆರಾ ನೆರವಿನಿಂದ ಸುಮಾರು ಮೂರು ಗಂಟೆಗಳ ಕಾಲ ಶೋಧ ನಡೆಸಲಾಯಿತು. ಕೊನೆಗೂ ಸಂಜೆ 6 ಗಂಟೆ ಸುಮಾರಿಗೆ ಇಬ್ಬರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಯಿತು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.

ಘಟನೆ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಬ್ಬರು ಯುವಕರ ದುರಂತ ಸಾವು ಹೀರ್ಗಾನ ಗ್ರಾಮದಲ್ಲಿ ದುಃಖದ ವಾತಾವರಣ ಮೂಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button