Belagavi NewsBelgaum NewsFoodsKannada NewsKarnataka NewsLatestTravel

ಜೊಲ್ಲೆ ಗ್ರುಪ್ ಹಾಸ್ಪಿಟಾಲಿಟಿಯ ITC WELCOME ಪಂಚತಾರಾ ಹೊಟೆಲ್ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರತಿಷ್ಠಿತ ಜೊಲ್ಲೆ ಗ್ರುಪ್ ಹಾಸ್ಪಿಟಾಲಿಟಿಯ ITC WELCOME ಹೊಟೆಲ್ ಶುಕ್ರವಾರ ಬೆಳಗಾವಿಯ ಕಾಕತಿಯಲ್ಲಿ ಉದ್ಘಾಟನೆಯಾಯಿತು.

ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 5 ಎಕರೆ ವಿಶಾಲ ಜಾಗದಲ್ಲಿ ವೆಲ್ ಕಮ್ ಹೊಟೆಲ್ ನಿರ್ಮಾಣವಾಗಿದ್ದು, 116 ಐಷಾರಾಮಿ ಕೊಠಡಿಗಳನ್ನು ಹೊಂದಿದೆ.

ಜೊಲ್ಲೆ ಗ್ರುಪ್ ಹಾಸ್ಪಿಟಾಲಿಟಿ ಹಾಗೂ ಐಟಿಸಿ ಹೋಟೆಲ್ಸ್ ಗ್ರುಪ್ ಸಹಭಾಗಿತ್ವದಲ್ಲಿ ವೆಲ್‌ಕಮ್ ಹೊಟೆಲ್ ನಿರ್ಮಾಣವಾಗಿದೆ. ಇದು ಭಾರತದಲ್ಲಿ ಐಟಿಸಿಯ 25ನೇ ಹೊಟೆಲ್ ಆಗಿದೆ. ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೊಲ್ಲೆ ಗ್ರೂಪ್‌ನ ಸಂಸ್ಥಾಪಕ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಹ ಸಂಸ್ಥಾಪಕಿ ಶಶಿಕಲಾ ಜೊಲ್ಲೆ ಹಾಗೂ ಜೊಲ್ಲೆ ಹಾಸ್ಪಿಟಾಲಿಟಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಅವರು ಐಟಿಸಿ ಕಂಪನಿಯ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಹೋಟೆಲ್ ಉದ್ಘಾಟಿಸಿದರು.

ಸಂಜೆ ನಡೆದ ಸಮಾರಂಭದಲ್ಲಿ ಮಾತನಾಡಿದ ಜೊಲ್ಲೆ ಗ್ರೂಪ್‌ನ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಹೈಟೆಕ್ ವ್ಯವಸ್ಥೆ ಒಳಗೊಂಡ ಈ ಹೋಟೆಲ್ ಆರಂಭಿಸಿದ್ದೇವೆ. ಯಾತ್ರಿಕರಿಗೆ ಇಲ್ಲಿ ವಿಶೇಷ ಖಾದ್ಯಗಳನ್ನು ಉಣಬಡಿಸಲಾಗುವುದು. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜನಪ್ರಿಯ ಖಾದ್ಯಗಳನ್ನು ಊಟದ ಮೆನುವಿನಲ್ಲಿ ಸೇರಿಸಲಾಗಿದೆ ’ ಎಂದು ಹೇಳಿದರು.

‘ಯಕ್ಸಂಬಾ ಊರಲ್ಲಿ ಬೀರೇಶ್ವರ ಸಹಕಾರಿ ಸೊಸೈಟಿ ಆರಂಭಿಸುವ ಮೂಲಕ ಸಾಮಾಜಿಕ ಹಾಗೂ ಸಹಕಾರಿ ರಂಗಕ್ಕೆ ಪ್ರವೇಶಿಸಿದ್ದೇನೆ. 50 ವರ್ಷದವರೆಗೂ ಸಹಕಾರಿ ರಂಗಕ್ಕೆ ಸೀಮಿತವಾಗಿದ್ದೆ. ಬಳಿಕ ವಿವಿಧೋದ್ದೇಶ ಸಹಕಾರಿ ಸಂಸ್ಥೆ, ಶಿಕ್ಷಣ ಸಂಸ್ಥೆ, ಮಲ್ಟಿಪಲ್ ಕೊ ಆಪರೇಟಿವ್ ಸೊಸೈಟಿ, ಮ್ಯಾಗ್ನಮ್ ಟಫ್ ಆರಂಭಿಸಿದೆವು. ಪರಿವಾರವು ಈ ಎಲ್ಲ ಶಾಖೆಗಳಿಂದಲೂ ಒಟ್ಟಾರೆ ೧೦-೧೫ ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ. ವ್ಯಾಪಾರ ವಹಿವಾಟಿನ ಜೊತೆಗೆ ಸಾರ್ವಜನಿಕರಿಗೆ ಉತ್ಕೃಷ್ಠ ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ಇದೀಗ ಹೋಟೆಲ್ ಉದ್ಯಮಕ್ಕೆ ಪದಾರ್ಪಣೆ ಮಾಡುವುದರ ಜೆತೆಗೆ ವ್ಯವಹಾರವನ್ನು ವಿಸ್ತರಿಸಿದ್ದೇವೆ. ಚಳಿಗಾಲದ ಅಧಿವೇಶನ ನಡೆಸುವಲ್ಲಿ ಎದುರಾಗುತ್ತಿದ್ದ ವಸತಿ ಸಮಸ್ಯೆಗೂ ಇದರಿಂದ ಪರಿಹಾರ ಸಿಗುವ ನಿರೀಕ್ಷೆ ಇದೆ’ ಎಂದರು.

ಜೊಲ್ಲೆ ಹಾಸ್ಪಿಟಾಲಿಟಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ, ‘ಬೆಟ್ಟಗಳ ನಡುವಿನ ಪ್ರಕೃತಿಯ ಮಡಿಲಲ್ಲಿ, ಪ್ರಶಸ್ತವಾದ ಪರಿಸರದ ೫ ಎಕರೆ ವಿಸ್ತೀರ್ಣದಲ್ಲಿರುವ ಹೋಟೆಲ್ ೧೧೬ ಸುಸಜ್ಜಿತ ಕೊಠಡಿ (೯ ಬಹುಮುಖ ಕೊಠಡಿ), ಹಾಲ್, ಈಜುಕೊಳ, ಕ್ಲಬ್, ಫಿಟ್ ನೆಸ್ ಸೆಂಟರ್ ಮೊದಲಾದ ಸೌಕರ್ಯ ಹೊಂದಿದೆ. ಅತಿಥಿಗಳಿಗೆ ಭಾರತದ ಶ್ರೀಮಂತ ಸಂಸ್ಕೃತಿಯ ಅನಾವರಣದ ಉತ್ತಮ ಆತಿಥ್ಯ ಸಿಗಲಿವೆ ಎಂದರು.

ಬೆಳಗಾವಿಯಲ್ಲಿ ಇಂಥದ್ದೊಂದು ಫೈವ್ ಸ್ಟಾರ್ ಹೋಟೆಲ್ ಆರಂಭಿಸಿರುವುದು ಖುಷಿ ತಂದಿದೆ. ಐಟಿಸಿ ಹೋಟೆಲ್ಸ್ ಸಹಯೋಗದಲ್ಲಿ ದೇಶದಲ್ಲಿ ಆರಂಭವಾಗುತ್ತಿರುವ ೨೫ನೇ ಹೊಟೆಲ್ ಇದಾಗಿದೆ. ವಿಮಾನ ನಿಲ್ದಾಣದಿಂದ ಅತಿ ಸಮೀಪದಲ್ಲಿರುವ ವೆಲ್‌ಕಮ್ ಹೋಟೆಲ್ ನ್ನು ಮಾನ್ಸೂನ್ ಮಳೆಯ ನೈಸರ್ಗಿಕ ಸೌಂದರ್ಯವನ್ನು ಆಹ್ಲಾದಿಸುವಂತೆ ನಿರ್ಮಿಸಲಾಗಿದ್ದು, ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಜೊಲ್ಲೆ ಗ್ರೂಪ್ ಸಹಸಂಸ್ಥಾಪಕಿ, ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ‘ಪ್ರವಾಸೋದ್ಯಮ ಬೆಳೆಯುತ್ತಿರುವ ಬೆಳಗಾವಿಯಲ್ಲಿ ವೆಲ್‌ಕಮ್ ಹೋಟೆಲ್ ಆರಂಭಿಸಿರುವುದು ಅಭಿಮಾನದ ಸಂಗತಿ. ಗೋವಾ, ಮಹಾರಾಷ್ಟ್ರದೊಂದಿಗೆ ಸಂಪರ್ಕ ಹೊಂದಿರುವ ಬೆಳಗಾವಿಗೆ ಎರಡೂ ರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಸವದತ್ತಿ ಯಲ್ಲಮ್ಮ ದೇವಸ್ಥಾನ ಹಾಗೂ ಗೋಕಾಕ್ ಹಾಗೂ ಗೊಡಚಿನಮಲ್ಕಿಗಳಿಗೆ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರಿಗೆ ಉತ್ತಮ ದರ್ಜೆಯ ಸೌಕರ್ಯ ಕಲ್ಪಿಸಲು ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಐಟಿಸಿ ಹೊಟೆಲ್ ಪ್ರಮುಖರು, ವೆಲ್‌ಕಮ್ ಹೊಟೆಲ್ ಪ್ರಧಾನ ವ್ಯವಸಾಪಕ ರಾಹುಲ ಕಾಂಗೋ ಇತರರಿದ್ದರು. ಅತ್ಯಂತ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜೊಲ್ಲೆ ಗ್ರುಪ್ ಅಭಿಮಾನಿಗಳು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button