
ಪ್ರಗತಿವಾಹಿನಿ ಸುದ್ದಿ; ಕೋಲ್ಕತ: ಬರ್ತ್ ಡೇ ಬಾಯ್ ವಿರಾಟ್ ಕೊಹ್ಲಿ (101*ರನ್, 121 ಎಸೆತ, 10 ಬೌಂಡರಿ) ಸಿಡಿಸಿದ ಆಕರ್ಷಕ ಶತಕ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ (33ಕ್ಕೆ 5) ಸ್ಪಿನ್ ಮೋಡಿ ನೆರವಿನಿಂದ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 8ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ ಬಳಗ ದಾಖಲೆಯ 243 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅಜೇಯ ನಾಗಾಲೋಟ ಮುಂದುವರಿಸಿತು.
ಟಾಸ್ ಜಯಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ದುಕೊಂಡಿತು. ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಭಾರತ ತಂಡ 5 ವಿಕೆಟ್‌ಗೆ 326 ರನ್ ಪೇರಿಸಿತು. ಬಳಿಕ ಈ ಬೃಹತ್ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 27.1 ಓವರ್‌ಗಳಲ್ಲಿ ಕೇವಲ 83 ರನ್‌ಗಳಿಗೆ ಸರ್ವಪತನ ಕಂಡಿತು.

ಶತಕ ಸಾಧಕ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತ ತಂಡ ತನ್ನ ಲೀಗ್ ಹಂತದ 9 ಹಾಗೂ ಕಡೇ ಪಂದ್ಯವನ್ನು ಬೆಂಗಳೂರಿನಲ್ಲಿ ನವೆಂಬರ್ 12 ರಂದು ನೆದರ್ಲೆಂಡ್ಸ್ ತಂಡದ ಎದುರು ಆಡಲಿದೆ.
- ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ
ಇಂದು 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ದಾಖಲಿಸಿರುವ ದಿಗ್ಗಜ ಸಚಿನ್ ತೆಂಡುಲ್ಕರ್ (49 ಶತಕ) ದಾಖಲೆಯನ್ನು ಸರಿಗಟ್ಟಿದರು. - 2: ರವೀಂದ್ರ ಜಡೇಜಾ, ಏಕದಿನ ವಿಶ್ವಕಪ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಭಾರತದ 2ನೇ ಬೌಲರ್ ಎನಿಸಿಕೊಂಡರು. 2011ರ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಬೆಂಗಳೂರಿನಲ್ಲಿ ಐರ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.
- 243: ದಕ್ಷಿಣ ಆಫ್ರಿಕಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ಅನುಭವಿಸಿದ ಅತಿದೊಡ್ಡ ಅಂತರದ ಸೋಲು ಇದಾಗಿದೆ. 2002ರಲ್ಲಿ ಪಾಕ್ ಎದುರು 182 ರನ್‌ಗಳಿಂದ ಸೋತಿದ್ದು, ಇದುವರೆಗಿನ ಅತಿದೊಡ್ಡ ಅಂತರದ ಸೋಲಾಗಿತ್ತು. ಸಂಕ್ಷೀಪ್ತ ಸ್ಕೋರ್: ಭಾರತ: 4 ವಿಕೆಟ್‌ಗೆ 326 ( ವಿರಾಟ್ ಕೊಹ್ಲಿ 101* ಶ್ರೇಯಸ್ ಅಯ್ಯರ್ 77, ರೋಹಿತ್ ಶರ್ಮ 40, ರವೀಂದ್ರ ಜಡೇಜಾ 29*, ಲುಂಗಿ ಎನ್‌ಗಿಡಿ 63ಕ್ಕೆ 1, ಕೇಶವ್ ಮಹಾರಾಜ್ 30ಕ್ಕೆ 1), ದಕ್ಷಿಣ ಆಫ್ರಿಕಾ: 27.1 ಓವರ್‌ಗಳಲ್ಲಿ 83 (ಮಾರ್ಕೊ ಜೆನ್ಸೆನ್ 14, ರಾಸಿ ವಾನ್ ಡರ್ ಡುಸೆನ್ 13, ರವೀಂದ್ರ ಜಡೇಜಾ 33ಕ್ಕೆ 5, ಕುಲದೀಪ್ ಯಾದವ್ 7ಕ್ಕೆ 2, ಮೊಹಮದ್ ಶಮಿ 18ಕ್ಕೆ 2, ಸಿರಾಜ್ 11ಕ್ಕೆ 1).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ