ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾರಾಷ್ಟ್ರದ ಔರಂಗಾಬಾದ್ ನ ಮಿಲಿಟರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಭಾರತೀಯ ಸೇನಾಪಡೆಯ ಯೋಧ ಶಂಕರ ಬಾಳಪ್ಪ ಯಲಿಗಾರ (33) ಅವರ ಪಾರ್ಥಿವ ಶರೀರವನ್ನು ಇಂದು (ಬುಧವಾರ) ಬೆಳಗ್ಗೆ ಅವರ ಸ್ವಗ್ರಾಮವಾದ ಮೇಲ್ಮಟ್ಟಿ ಗ್ರಾಮಕ್ಕೆ ತರಲಾಯಿತು.
ಗ್ರಾಮದಲ್ಲಿ ನಡೆಸಲಾದ ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಸೇರಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಯೋಧನ ಸಾವಿಗೆ ಇಡೀ ಗ್ರಾಮವೇ ಕಣ್ಣಿರಿಟ್ಟಿದೆ. ಮಕ್ಕಳು, ಮಹಿಳೆಯರು ಕೂಡ ಅಂತಿಮಯಾತ್ರೆಯಲ್ಲಿ ಭಾಗಿಯಾಗಿದ್ದರು. ಯೋಧನ ಕುಟುಂಬದವರ ಆಕ್ರಂದನ ಕರುಳು ಹಿಂಡುವಂತಿತ್ತು.
ಬೆಳಗಾವಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾವಿ ಹಾಗೂ ಡಿಎಆರ್ ಎಸ್ಪಿ ವೈ.ಕೆ. ಕಾಶಪ್ಪನವರ ಅವರು ಸರಕಾರದ ವತಿಯಿಂದ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚ ಹಾಕಿ ಅಂತಿಮ ನಮನಗಳನ್ನು ಸಲ್ಲಿಸಿದರು. ಹಲವು ಗಣ್ಯರು, ರಾಜಕೀಯ ಧುರೀಣರು ಸಹ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು.
ಸಕಲ ಸರಕಾರಿ ಗೌರವಗಳೊಂದಿಗೆ ಅಗಲಿದ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ