ಭಾರತದ ಶಿಕ್ಷಣ ಪದ್ಧತಿ ಜಗತ್ತಿನಲ್ಲೇ ಶ್ರೇಷ್ಠ: ಸಚಿವೆ ಲಕ್ಷ್ಮಿ ಹೆಬ್ಬಾಳಕರ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐದು ಸಾವಿರಕ್ಕೂ ಅಧಿಕ ವರ್ಷಗಳ ಶ್ರೀಮಂತ ಇತಿಹಾಸ ಹೊಂದಿರುವ ಭಾರತದ ಶಿಕ್ಷಣ ಪದ್ಧತಿ ಜಗತ್ತಿನಲ್ಲೇ ಶ್ರೇಷ್ಠವಾದುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು, ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಅವರು ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಬೆಳಗಾವಿ (ದ) ಉಪ ನಿರ್ದೇಶಕರ ಕಾರ್ಯಾಲಯ, ಹಾಗೂ ಕ್ಷೇತ್ರ ನಗರ ವಲಯ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳಗಾವಿ (ದ) ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-2023 ಹಾಗೂ ಬೆಳಗಾವಿ ಜಿಲ್ಲಾ (ದ) ಮತ್ತು ನಗರ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಂಗಳವಾರ ಮಾತನಾಡಿದರು.

“ನಮ್ಮ ದೇಶದಲ್ಲಿ ಕಲಿತ ವೈದ್ಯರು, ಎಂಜಿನಿಯರ್ ಗಳು, ವಿಜ್ಞಾನಿಗಳು ಜಗತ್ತಿನಲ್ಲಿ ಬಹು ಬೇಡಿಕೆಯಲ್ಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಕರು. ಪ್ರತಿ ಪಾಲಕರೂ ತಮ್ಮ ಮಗು ಉನ್ನತ ಶಿಕ್ಷಣ ಪಡೆಯುವ ಆಸೆ ಹೊಂದಿರುತ್ತಾರೆ. ಒಬ್ಬ ಶಿಕ್ಷಕ ಕೂಡ ತಮ್ಮ ತರಗತಿಯಲ್ಲಿರುವ ಎಲ್ಲ ಮಕ್ಕಳೂ ಶೈಕ್ಷಣಿಕ ಸಾಧಕರಾಗಬೇಕೆಂಬ ಆಶಯ ಹೊತ್ತಿರುತ್ತಾರೆ. ಅದಕ್ಕಾಗಿಯೇ ನಮ್ಮ ಸಂಸ್ಕೃತಿಯಲ್ಲಿ ‘ಗುರು ಸಾಕ್ಷಾತ್ ಪರಬ್ರಹ್ಮ’ ಎನ್ನುವ ಮೂಲಕ ಶಿಕ್ಷಕರಿಗೆ ಸ್ಥಾನಮಾನ ನೀಡಲಾಗಿದೆ” ಎಂದು ಅವರು ಹೇಳಿದರು.
ಶಿಕ್ಷಣ ನಿರಂತರ ಹರಿವ ನೀರಾಗಬೇಕು. ನಿಂತ ನೀರಾಗಬೇಕು. ಸರಕಾರ ಯಾವತ್ತೂ ಶಿಕ್ಷಕರ ಪರವಾಗಿದೆ. ಸ್ವಾತಂತ್ರ್ಯಾ ನಂತರ ದೇಶದ ಶಿಕ್ಷಣ ಅಭಿವೃದ್ಧಿ ಹೊಂದುತ್ತಲೇ ಸಾಗಿದೆ. ಜನರ ಆಶಯಗಳಂತೆ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಬದ್ಧವಾಗಿದೆ” ಎಂದರು.

ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅಸೀಫ್ ಸೇಠ್, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಸಾಧಕ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ