LatestPragativahini Special

*ಬುದ್ದಿವಂತಿಕೆ, ಕೌಶಲ್ಯ ಮತ್ತು ವೇಗ ಇವು ಮೂರು ಇದ್ದಲ್ಲಿ ವ್ಯಕ್ತಿಗೆ ಖಂಡಿತ ಬೆಲೆಯಿದೆ*

ರವಿ ಕರಣಂ

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಈ ಮೂರು ಗುಣಗಳಿದ್ದಲ್ಲಿ ಆ ವ್ಯಕ್ತಿಯ ವ್ಯಕ್ತಿತ್ವವೇ ಅಭೂತಪೂರ್ವವಾಗಿರುತ್ತದೆ. ಅವನು ಯಾವುದೇ ರಂಗದಲ್ಲಿರಲಿ, ಎಲ್ಲೇ ಇರಲಿ ಗೌರವ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಅಂದರೆ ವ್ಯಕ್ತಿಯ ವಿಶೇಷತೆ ಎಲ್ಲರ ಗಮನ ಸೆಳೆಯುವುದಲ್ಲದೇ ಸುತ್ತ ಮುತ್ತಲಿನ ಜನತೆಗೂ ಸ್ಪೂರ್ತಿಯಾಗುವಂತಿರುತ್ತದೆ. ಇದನ್ನು ಹೇಳಲು ಕಾರಣವಿದೆ.

ಯಾವ ವ್ಯಕ್ತಿಗೆ ಈ ಸಮಾಜ ಬೆಲೆ ಕೊಡುತ್ತದೆ ?ಎಂದರೆ, ಅವನಿಂದ ಬಹಳಷ್ಟು ಕಾರ್ಯ ಸಾಧನೆಯಾದಾಗ ಎಂಬ ಮಾತಿದೆ. ಅದು ಸತ್ಯವೇ! ಅಲ್ಲಗಳೆಯಲಾಗದು. ಅದಕ್ಕೆ ಪೂರಕವಾಗಿ ಕೆಲ ಅಂಶಗಳನ್ನು ಸೇರಿಸಿ ಬಿಡುತ್ತೇನೆ. ಬುದ್ದಿವಂತಿಕೆ, ಕೌಶಲ್ಯ ಮತ್ತು ವೇಗ ಇವು ಮೂರು ಇದ್ದಲ್ಲಿ ವ್ಯಕ್ತಿಗೆ ಖಂಡಿತ ಬೆಲೆಯಿದೆ. ಅವನ ವ್ಯಕ್ತಿತ್ವದಲ್ಲಿ ಮತ್ತಷ್ಟು ಕಳೆ ತಂದು ಕೊಡುವ ಅಂಶಗಳೆಂದು ನಿಸ್ಸಂದೇಹವಾಗಿ ಪರಿಗಣಿಸಬಹುದು. ಕೇವಲ ಕಾರ್ಯ ಸಾಧನೆಯನ್ನು ಮಾತ್ರ ನೋಡಬಾರದು. ಆ ಸಾಧನೆಯು ತೆಗೆದುಕೊಂಡ ಅವಧಿಯೆಷ್ಟು ? ಎಂಬುದನ್ನು ತಿಳಿದುಕೊಳ್ಳುವುದುಚಿತ. ಮತ್ತು ಅದಕ್ಕೆ ಬಳಸಲ್ಪಟ್ಟ ಕೌಶಲಗಳನ್ನು ಸಹ. ನಮ್ಮಲ್ಲಿ ಇಂತಹದೊಂದು ಯೋಚನೆ ಹೊಳೆಯುವುದು ತೀರಾ ಕಡಿಮೆಯೇ. ಅಲ್ಲದೆ ಅದರೆಡೆಗೆ ಬಹುತೇಕರ ಮನಸು ಹೋಗಲಿಕ್ಕಿಲ್ಲ. ಅಲ್ಲೇ ಸ್ವಾರಸ್ಯ ಇರುವುದು.

ಕೆಲವು ಉದಾಹರಣೆಗಳನ್ನು ಕೊಡುತ್ತೇನೆ. ಒಬ್ಬ ಸಂಗೀತಗಾರ ಹಲವು ರಾಗಗಳನ್ನು ಕಲಿತು, ಕರಗತ ಮಾಡಿಕೊಂಡು, ಬೆಳಕಿಗೆ ಬರಲು ಶತಾಯ ಗತಾಯ ಪ್ರಯತ್ನದಲ್ಲೇ ಮುಳುಗುತ್ತಾನೆ. ಅವನು ಎಲ್ಲ ಪಾಂಡಿತ್ಯ ಹೊಂದಿದ್ದರೂ ಜನರು ಗುರುತಿಸದೇ ಹೋಗಬಹುದು. ಆದರೆ ಪ್ರತಿಭೆ ಪ್ರತಿಭೆಯೇ!


ಪ್ರಚಾರಕ್ಕೆ ಬರಬೇಕೆಂಬ ನಿಯಮವೇನೂ ಇಲ್ಲ. ಆದರೆ ಸಂಗೀತ ಗೊತ್ತಿಲ್ಲದೆಯೇ ಒಮ್ಮಿಂದೊಮ್ಮೆಲೇ ಉತ್ತಮ ಗಾಯಕರೆನಿಸಿಕೊಂಡು ಬಿಡುತ್ತಾರೆ. ಅಷ್ಟೇ ಬೇಗನೇ ಜನರ ಮನಸ್ಸಿಂದ ದೂರವಾಗಿಯೂ ಬಿಡುತ್ತಾರೆ. ಅದರ ಬಗ್ಗೆ ಪ್ರಶ್ನೆ ಅಲ್ಲ. ಅದೊತ್ತಟ್ಟಿಗಿರಲಿ. ಅತ್ಯಲ್ಪ ಕಾಲದಲ್ಲಿ ಬೆಳಕಿಗೆ ಬರುತ್ತಾರಲ್ಲ ಅದೇ ಮುಖ್ಯ. ಅಲ್ಲಿ ಬುದ್ದಿವಂತಿಕೆ, ವೇಗ, ಕೌಶಲ್ಯಗಳು ಸಹಜವಾಗಿಯೇ ಒಲಿದಿರುವುದರ ಪರಿಣಾಮವದು.

ಹಾಗೆ ಒಬ್ಬ ಕವಿ ತನ್ನಿಡೀ ಜೀವನ ಪರ್ಯಂತ ಕಾವ್ಯ ರಚಿಸಿ, ಪ್ರಸಿದ್ದಿಗೆ ಬರಲು ಕಾಲಾವಕಾಶ ಹಿಡಿಯುತ್ತದೆ. ಆದರೆ ಆ ಕವಿಯು ತೆಗೆದುಕೊಂಡ ಕಾಲ ಸರಿ ಸುಮಾರು ಐವತ್ತರಿಂದ ರಿಂದ ಅರವತ್ತು ವರ್ಷಗಳಲ್ಲಿ ಕವಿತೆಗಳ ಸಂಖ್ಯೆ ಹದಿನೈದು ನೂರು ಎರಡು, ಮೂರು, ನಾಲ್ಕು, ಐದು ಸಾವಿರ ಎಂದಿಟ್ಟುಕೊಳ್ಳೋಣ. ಅದೇನು ಮಹತ್ವದ ಸಂಗತಿಯೇ ಅಲ್ಲ. ಇದೇನು ಹೀಗೆಂದಿರಿ ? ಎಂದು ಉದ್ಗಾರವೆಳೆಯಲೇಬೇಡಿ. ಪ್ರತಿಭೆಗೆ ಎಲ್ಲೆ ಎಂಬುದಿಲ್ಲ ನೋಡಿ. ಒಬ್ಬನ ಕಲ್ಪನಾ ಶಕ್ತಿಯ ಸಾಮ್ರಾಜ್ಯ, ಶಬ್ದ ಭಂಡಾರ ಮತ್ತು ಬಳಕೆ, ಕಾವ್ಯ ಹೆಣೆಯುವ ಬಗೆ ವಿಭಿನ್ನದಲ್ಲಿ ವಿಭಿನ್ನವಾಗಿದ್ದು, ಕೆಲವೇ ತಿಂಗಳುಗಳಲ್ಲಿ ಸಾವಿರ ಕವಿತೆಗಳನ್ನು ಬರೆಯಬಲ್ಲನು. ನೀವು ಸಂಖ್ಯೆ ಮುಖ್ಯವಲ್ಲ. ತಿರುಳು ಮುಖ್ಯ ಎನ್ನಬಹುದು. ನನ್ನ ಮಟ್ಟಿಗೆ ಆ ತಿರುಳು ಎಷ್ಟು ಸಮಯದಲ್ಲಿ ಹೊರಬಂತು ಎಂಬುದೇ ಮುಖ್ಯ. ಅಲ್ಲವೇ ? ವಿಚಾರ ಮಾಡಿ ನೋಡಿ. ಆದರೆ ಅದಕ್ಕೆ ಪ್ರಚಾರ ಸಿಗದೇ, ಮತ್ತಿತರ ಕಾರಣಗಳಿಂದ ಬೆಳಕಿಗೆ ಅವನು ಬಾರದಿರಬಹುದು. ಆದರೆ ಪ್ರತಿಭೆ ಪ್ರತಿಭೆಯೇ ! ಎಂಬುದನ್ನು ಒತ್ತು ಕೊಟ್ಟು ಹೇಳಿದ್ದೇನೆ.

ಒಬ್ಬ ರೈತ ಕಡಿಮೆ ಭೂಮಿಯಲ್ಲಿ ಅಧಿಕ ಇಳುವರಿ ತೆಗೆಯುವುದಿದೆಯಲ್ಲ ಅದು ಕಠಿಣ. ಹಾಗಿದ್ದಾಗ್ಯೂ ಸಾಧನೆ ತೋರಿದವರಿದ್ದಾರಲ್ಲ ನಮ್ಮ ಕಣ್ಣ ಮುಂದೆಯೇ ! ಪತ್ರಿಕೆಗಳಲ್ಲಿ ಪ್ರಖಟವಾದದ್ದೂ ಇದೆ. ನನ್ನ ಆಪ್ತರಲ್ಲೊಬ್ಬರು ಮೂರು ಎಕರೆಗಳಲ್ಲಿ ಬೆಳೆಯಬಹುದಾದ ಕಬ್ಬನ್ನು ಎರಡೇ ಎಕರೆಗಳಲ್ಲಿ ಬೆಳೆದಿದ್ದರು. ಅದು ಮಹಾರಾಷ್ಟ್ರದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ತೋರಿಸಿದ್ದರು. ಅದೇನು ಮಹಾ? ಎನ್ನಬೇಡಿ. ಅದರ ಹಿಂದಿನ ಶ್ರಮ ಕಡಿಮೆಯಂತೂ ಇರಲಿಕ್ಕಿಲ್ಲ. ಹೀಗೆ ಕಾರ್ಯ ಸಾಧನೆಗೆ ವೇಗ ದೊರೆಯಬೇಕು.

ಹೀಗಂದಾಗೆಲ್ಲ “ಆತುರಗಾರನಿಗೆ ಬುದ್ದಿಮಟ್ಟು” ಮತ್ತೊಂದು “ಅಪಘಾತಕ್ಕೆ ಅವಸರವೇ ಕಾರಣ” ವೆಂದು ಹೋಲಿಕೆ ಮಾಡಬೇಡಿ. ಕೆಲವೇ ಸಂಗತಿಗಳಿಗೆ ಅವಸರವಿದೆ. ಕಾರಣ, ಮಾನವನ ಜೀವಿತದ ಅವಧಿ ಬರುಬರುತ್ತಾ ಕುಸಿಯ ತೊಡಗಿದೆಯೇನೋ ಎನಿಸುತ್ತಿದೆ. ಇನ್ನೂ ಮಧ್ಯ ವಯಸ್ಸು ಮುಟ್ಟದೇನೇ ಯೌವನದಲ್ಲಿಯೇ ಜಗತ್ತಿನಿಂದ ದೂರವಾಗುತ್ತಿರುವುದರ ಬಗ್ಗೆ ನಿಮಗೆ ಗೊತ್ತಿದೆ.

ಅದಿರಲಿ ಬಿಡಿ. ಅದರ ನಡುವೇ ಅವಸರ, ತುರ್ತು ಸಂದರ್ಭಗಳಿವೆ. ಶತ್ರು ಸೈನ್ಯ ಗಡಿಯತ್ತ ಬಂದು ಗುಡು ಮದ್ದು ಸಿಡಿಸುತ್ತಾ, ನಮ್ಮ ಪ್ರದೇಶವನ್ನು ಕಬಳಿಸುತ್ತಿದ್ದಾಗ, “ನಿಧಾನವೇ ಪ್ರಧಾನ” ಎಂದರಾಗುತ್ತದೆಯೇ ? ಹಾವು ಕಚ್ಚಿದ್ದೆಯೆಂದಾಕ್ಷಣ ತುರ್ತು ಸೇವೆಗೆ ಮುಂದಾಗದೇ ಇದ್ದರಾಗುತ್ತದೆಯೇ ? ಮನೆಗೆ ಬೆಂಕಿ ಬಿದ್ದಿದೆ, ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದೆ, ವ್ಯಕ್ತಿಯೋರ್ವ ಹೃದಯಾಘಾತಕ್ಕೆ ಒಳಗಾಗಿದ್ದಾನೆ ಎಂದಾಗ, ಬುದ್ದಿ ಬಲ ನೀಡಬೇಕು. ದೇಹ ವೇಗಕ್ಕೆ ಹೊಂದಿಕೊಳ್ಳಬೇಕು. ಸನ್ನಿವೇಶವನ್ನು ನಿಭಾಯಿಸುವ ಚಾಣಾಕ್ಷತನವಿರಬೇಕು. ಹಾಗಿದ್ದಾಗ ಕಾರ್ಯ ಸುಸೂತ್ರವಾಗಿ ನಡೆಯುತ್ತದೆ. ಹಾಗಾಗಿ ಯಾವುದೇ ಮಾತಿನ ಅರ್ಥವನ್ನು ಅದರ ಹಿಂದಿನ ಸಮಯ, ಸಂದರ್ಭ, ವಸ್ತು ಸ್ಥಿತಿಗೆ ಮಾತ್ರ ಅನ್ವಯಿಸಬೇಕು.

ಹಾಗಾಗಿ ವ್ಯಕ್ತಿಗಳಲ್ಲಿ ಹುಟ್ಟಿನಿಂದಲೇ ನಾನಾ ಬಗೆಯ ಕೌಶಲ್ಯಗಳು ಒಡ ಮೂಡಿದ್ದರಂತೂ ಒಳಿತು. ಅದು ಅನುವಂಶೀಯವಾಗಿದ್ದರೆ ಸಹಜ ಕೌಶಲಗಳು. ಕಲಿತು ಕೊಂಡಿದ್ದರೆ, ಅಭ್ಯಾಸ ಬಲದಿಂದಾಗಿದ್ದರೆ ಪರಿಸರದ ಪ್ರಭಾವದಿಂದ ಬಂದ ಕೌಶಲ್ಯಗಳು ಎನ್ನೋಣ. ಅಂತೂ ಒಬ್ಬರಿಗೆ ಒಂದಲ್ಲ ಒಂದಂತೂ ಇರಲೇ ಬೇಕಲ್ಲ. ಒಂದೊಂದು ಜೀವಿಗಳ ಬದುಕು ಹಲವು ವೈಚಿತ್ರ್ಯಗಳಿಂದ ಕೂಡಿರುತ್ತದೆ. ವಿಲಕ್ಷಣಗಳಿಂದ ಕೂಡಿರುತ್ತದೆ. ಅದರಿಂದ ಒಳಿತಾದರಷ್ಟೇ ಸಾಕು.

ಕೆಲವೊಮ್ಮೆ ಕಾರ್ಯ ಮುಗಿಸಲು ತರಾತುರಿಯಲ್ಲಿರುವ ವ್ಯಕ್ತಿಯನ್ನು ಕಂಡಾಗ ನಿಮಗೆ ಕಿರಿಕಿರಿಯೆನಿಸಬಹುದು. ಮನಸ್ಸನ್ನು ಹಿಂಜಿದಂತೆನಿಸಬಹುದು. ಕಡೆಗೆ “ಇವನೇಕೆ ಏಳು ತಿಂಗಳಿಗೆ ಹುಟ್ಟಿದವರಂತೆ ಆಡುತ್ತಾನೆ” ಎಂದು ನಕ್ಕು ಅಪಹಾಸ್ಯ ಮಾಡಿ ಬಿಡಬಹುದು. ಏನೆಲ್ಲಾ… ಆದರೆ ಗೊತ್ತಾ ನಿಮಗೆ ಅಂಥವರ ಒಳ ತುಡಿತ ? ಇಂತಿಷ್ಟೇ ಸಮಯದಲ್ಲಿ ಅದನ್ನು ಮಾಡಿ ಮುಗಿಸುವ ಮನೋಭಾವ ಅವರದ್ದಾಗಿರುತ್ತದೆ. ಅದು ಅವಸರವೆಂದಾಗಲೀ, ಹಣಕ್ಕಾಗಿ ಎಂದಾಗಲೀ ಭಾವಿಸಿಕೊಳ್ಳಬಾರದು. ಅದು ಸ್ಭಾಭಾವ. ಅವರ ಬುದ್ದಿ ಚಾತುರ್ಯ, ಕೌಶಲ್ಯ ಹಾಗೂ ವೇಗದ ಮೇಲಿನ ನಂಬಿಕೆ. ಅದಕ್ಕೆ ಮನಸು ಎಷ್ಟು ವೇಗವಾಗಿ ತೊಡಗಿಕೊಳ್ಳುತ್ತದೆಯೋ ಅಷ್ಟೇ ದೇಹವೂ ಸಹ ಸಹಕರಿಸಬೇಕು. ಅಂದಾಗ ಅದಕ್ಕೊಂದು ಸ್ಪಷ್ಟ ರೂಪ ದೊರೆಯುತ್ತದೆ.

ನೈಜ ಕೌಶಲ್ಯಗಳು ಯಾವತ್ತೂ ಸ್ವಾವಲಂಬಿಯನ್ನಾಗಿಸುತ್ತವೆ ಎಂಬುದನ್ನು ಮರೆಯಬಾರದು. ಅವು ಜೀವನವನ್ನು ಕಟ್ಟಿ ಕೊಳ್ಳುವುದಕ್ಕೆ ಸಹಕಾರಿಯೂ ಕೂಡಾ. ಬರವಣಿಗೆ, ಹಾಸ್ಯ, ನಟನೆ, ಅಡುಗೆ, ನಾಟ್ಯ, ಚಿತ್ರ ಕಲೆ,ಉಪನ್ಯಾಸ, ಭಾಷಣ,ಅಣುಕು, ಗಾಯನ, ದುಂಡಾಗಿ ಬರೆಯುವುದು, ಚೆಂದವಾಗಿ ಓದುವುದು, ವಿಷಯ ಪ್ರಸ್ತುತ ಪಡಿಸುವುದು, ಚರ್ಚೆ, ವಿಮರ್ಶೆ, ಹರಟೆ ಇತ್ಯಾದಿಗಳೆಲ್ಲ ಕೆಲವರಿಗೆ ಜನ್ಮತಃ ಬಂದಿರುತ್ತವೆ. ಅದೇ ಪರಿಸರದಿಂದ ಬಂದ ಕೌಶಲ್ಯಗಳು ಹಂಗಿನಲ್ಲಿ, ಮುಲಾಜಿನಲ್ಲಿ, ವಿಧೇಯತೆಯ ನಟನೆಯಲ್ಲಿ ಬಿದ್ದಿರುತ್ತವೆ. ಅದೇನಿದ್ದರೂ ನಮ್ಮದೊಂದು ಗುರುತಿಗೆ ಏನಾದರೂ ಇರಲೇ ಬೇಕು. ಅದು ಅಸ್ತಿತ್ವಕ್ಕೆ ಹಿಡಿದ ಕನ್ನಡಿಯೂ ಸಹ.

ಆ ದೃಷ್ಟಿಕೋನದಿಂದ ವ್ಯಕ್ತಿಯೊಬ್ಬ ಜಗತ್ತಿನಲ್ಲಿ ಚಲಾವಣೆಗೊಳ್ಳುವುದು ಬುದ್ದಿವಂತಿಕೆ, ಕೌಶಲ್ಯ ಮತ್ತು ವೇಗದಿಂದ ಮಾತ್ರ ಸಾಧ್ಯವಾಗುತ್ತದೆ ಎಂಬುದನ್ನು ಇಂದಿನ ಪೀಳಿಗೆ ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಇದನ್ನು ಅರ್ಥ ಮಾಡಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂಬುದನ್ನು ಮರೆಯಲೇ ಬಾರದು. ಯಾವ ವ್ಯಕ್ತಿಯಲ್ಲಿ ವಿಶೇಷ ಸಾಮರ್ಥ್ಯಗಳು ಇರುವುದಿಲ್ಲವೊ ಅವನನ್ನು ವ್ಯವಸ್ಥೆ ತಿರಸ್ಕರಿಸಿ, ಅಯೋಗ್ಯನೆಂದು ಹೀಗಳೆಯುತ್ತದೆ. ಇದ್ದವನನ್ನು ಪುರಸ್ಕರಿಸಿ, ಎತ್ತಿ ಮೆರೆಸುತ್ತದೆ. ಇದನ್ನೇ ಸ್ವಾಮಿ ವಿವೇಕಾನಂದರು ಉಚ್ಚರಿದ್ದು. “ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ” ಎಂದರು. ಅದಕ್ಕಾಗಿ ನಮ್ಮೊಳಗೆ ಬದಲಾವಣೆ ತಂದುಕೊಳ್ಳಲು ಪ್ರಯತ್ನಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button