Belagavi NewsBelgaum NewsKannada NewsKarnataka NewsLatest

*ಚುರುಕುಗೊಂಡ ತನಿಖೆ: ಓರ್ವ ರೈತನ ಬಂಧನ, ಮತ್ತೋರ್ವ ನಾಪತ್ತೆ*

ಕಾಡಾನೆ ಸಾವು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಖಂಡ್ರೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಸುಳ್ಳೆಗಾಳಿ ಬಳಿ ಭಾನುವಾರ ವಿದ್ಯುತ್ ತಗುಲಿ ಮೃತಪಟ್ಟ ಕಾಡಾನೆಗಳ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಖಾನಾಪುರ ತಾಲ್ಲೂಕಿನಲ್ಲಿ ಆನೆಗಳು ಓಡಾಡುತ್ತಿರುವ ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪವಿದ್ದು, ಬೇಲಿಗೆ ವಿದ್ಯುತ್ ಸಂಪರ್ಕ ನೀಡಿ ಆನೆಗಳ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಬೇಕು. ಹೀಗಾಗಿ ಈ ಪ್ರಕರಣವನ್ನು ಕಾನೂನು ರೀತ್ಯಾ ದಾಖಲಿಸಿಕೊಂಡು ಆನೆಗಳ ಸಾವಿನ ಸಮಗ್ರ ತನಿಖೆ ನಡೆಸಬೇಕು ಮತ್ತು ಐದು ದಿನದಲ್ಲಿ ವರದಿ ನೀಡಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ಚುರುಕುಗೊಂಡ ತನಿಖೆ

Home add -Advt

ಕಾಡಾನೆಗಳ ಸಾವಿನ ತನಿಖೆ ಚುರುಕುಗೊಳಿಸಿರುವ ಅರಣ್ಯ ಇಲಾಖೆ, ಆನೆಗಳ ಸಾವಿಗೆ ಕಾರಣರಾದ ಇಬ್ಬರು ರೈತರ ವಿರುದ್ಧ ನಾಗರಗಾಳಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

ಕೃಷಿ ಜಮೀನಿನಲ್ಲಿ ವಿದ್ಯುತ್ ತಂತಿಗಳು ಹರಿದುಬಿದ್ದ ಹಿನ್ನೆಲೆಯಲ್ಲಿ ಹೆಸ್ಕಾಂ ಇಲಾಖೆಗೆ ನೋಟೀಸ್ ಜಾರಿಮಾಡಿದೆ. ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆಯ ಕಾನೂನಿನಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕೆ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಸೋಲಾರ ತಂತಿಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಎರಡು ಕಾಡಾನೆಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಮೀನಿನ ಮಾಲೀಕ ಗಣಪತಿ ಸಾತೇರಿ ಗುರವ ಅವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ಬಂಧಿಸಿದ್ದು, ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇದೇ ಜಮೀನಿನ ಮತ್ತೋರ್ವ ರೈತ ಶಿವಾಜಿ ಗಣಪತಿ ಗುರವ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ಘಟನಾ ಸ್ಥಳಕ್ಕೆ ಹೆಸ್ಕಾಂ ವಿಜಿಲೆನ್ಸ್ ತಂಡ ಭೇಟಿ

ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾವನ್ನಪ್ಪಿದ ಸುಳ್ಳೆಗಾಳಿಯ ಕೃಷಿ ಜಮೀನುಗಳಿಗೆ ಬೆಳಗಾವಿಯ ಹೆಸ್ಕಾಂ ವಿಜಿಲೆನ್ಸ್ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದೆ.

ಘಟನೆ ನಡೆದ ಹೊಲದಲ್ಲಿ ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದವು ಎಂಬ ರೈತರ ಆರೋಪದ ಹಿನ್ನೆಲೆಯಲ್ಲಿ ಸುಳ್ಳೆಗಾಳಿಯ ಎಲ್ಲ ವಿದ್ಯುತ್ ಲೈನ್ ಗಳನ್ನು ವಿಜಿಲೆನ್ಸ್ ತಂಡ ಪರಿಶೀಲಿಸಿ ದಾಖಲೆಗಳನ್ನು ಸಂಗ್ರಹಿಸಿದೆ. ಸುಳ್ಳೆಗಾಳಿಯ ಜಮೀನಿನಲ್ಲಿ ವಿದ್ಯುತ್ ತಂತಿಗಳು ತಾವಾಗಿಯೇ ಹರಿದುಬಿದ್ದ ಬಗ್ಗೆ ಕುರುಹುಗಳು ಲಭ್ಯವಾಗಿಲ್ಲ. ಆನೆಗಳು ಸಾವನ್ನಪ್ಪಿದ ಬಳಿಕ ವಿದ್ಯುತ್ ತಂತಿಗಳನ್ನು ಕಿತ್ತು ಎಸೆಯಲಾಗಿದ್ದು, ಆನೆಗಳ ಸಾವಿಗೆ ಹೆಸ್ಕಾಂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲು ರೈತರು ಈ ತಂತ್ರ ಅನುಸರಿಸಿದ್ದಾರೆ ಎಂಬ ಸಂದೇಹವನ್ನು ಹೆಸ್ಕಾಂ ವಿಜಿಲೆನ್ಸ್ ತಂಡ ವ್ಯಕ್ತಪಡಿಸಿದೆ.

ಐಬಾಕ್ಸ್ ಸೋಲಾರ್ ತಂತಿ ಬೇಲಿಗೆ ಹೆಸ್ಕಾಂ ಕರೆಂಟ್ ಬಳಕೆ

ಸುಳ್ಳೆಗಾಳಿಯ ಗಣಪತಿ ಸಾತೇರಿ ಗುರವ ಅವರ ಹೊಲಕ್ಕೆ ಐಬಾಕ್ಸ್ ಸೋಲಾರ್ ತಂತಿಬೇಲಿಯನ್ನು ಅಳವಡಿಸಲಾಗಿದೆ. ಕಳೆದ ಹಲವು ದಿನಗಳಿಂದ ಸುಳ್ಳೆಗಾಳಿ ಭಾಗದಲ್ಲಿ ಸೂರ್ಯನ ಶಾಖದ ಪ್ರಖರತೆ ಇಲ್ಲದ್ದರಿಂದ ಸೋಲಾರ್ ತಂತಿಗಳಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಸರಬರಾಜು ಆಗುತ್ತಿರಲಿಲ್ಲ. ಈ ಕಾರಣಕ್ಕೆ ಅವರು ಹೊಲದಲ್ಲಿದ್ದ ಹೆಸ್ಕಾಂನ ವಿದ್ಯುತ್ ಸಂಪರ್ಕವನ್ನು ವೈರ್ ಗಳ ಮೂಲಕ ತಂದು ಸೋಲಾರ್ ತಂತಿಬೇಲಿಗೆ ನೀಡಿದ್ದರು. ಈ ತಂತಿಬೇಲಿ ಸಂಪರ್ಕಿಸಿದ್ದ ಆನೆಗಳು ಮೃತಪಟ್ಟಿದ್ದವು ಎಂಬ ಪ್ರಾಥಮಿಕ ಅಂಶವನ್ನು ಹೆಸ್ಕಾಂ ಮತ್ತು ಅರಣ್ಯಾಧಿಕಾರಿಗಳ ಜಂಟಿ ತನಿಖಾ ತಂಡ ಬಯಲಿಗೆ ಎಳೆದಿದೆ.

ಕಾಡಾನೆಗಳ ಮೃತದೇಹಗಳ ಅಂತ್ಯಕ್ರಿಯೆ

ಅರಣ್ಯ ಇಲಾಖೆಯ ಕಾನೂನಿನಂತೆ ಸೋಮವಾರ ನಾಗರಗಾಳಿ ಅರಣ್ಯದಲ್ಲಿ ಪಶುವೈದ್ಯರಾದ ಡಾ.ಅಯಾಜ್, ಡಾ.ನಾಗರಾಜ ಹುಯಿಲಗೋಳ ಮತ್ತು ಡಾ.ಮಧುಸೂದನ್ ಅವರ ತಂಡ ಎರಡೂ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಿತು.

ನಂತರ ಸಿಸಿಎಫ್ ಮಂಜುನಾಥ ಚವಾಣ, ಡಿಸಿಎಫ್ ಎನ್.ಇ ಕ್ರಾಂತಿ, ಎಸಿಎಫ್ ಗಳಾದ ಶಿವಾನಂದ ಮಗದುಮ್, ನಾಗರಾಜ ಬಾಳೆಹೊಸೂರ, ಸುನೀತಾ ನಿಂಬರಗಿ ಸೇರಿದಂತೆ ವನ್ಯಜೀವಿ ಪರಿಪಾಲಕರು, ಕಾಳಿ ಹುಲಿ ಅಭಯಾರಣ್ಯದ ವನ್ಯಜೀವಿ ತಜ್ಞರು, ಪರಿಸರವಾದಿಗಳು, ಗ್ರಾಪಂ ಪಿಡಿಒ, ಸದಸ್ಯರು, ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಕಾಡಾನೆಗಳನ್ನು ಹೂಳುವ ಮೂಲಕ ಮೃತದೇಹಗಳ ಅಂತ್ಯಕ್ರಿಯೆ ನಡೆಯಿತು.

ಖಾನಾಪುರ ತಾಲ್ಲೂಕಿನ ಸುಳ್ಳೆಗಾಳಿ ಬಳಿ ಎರಡು ಆನೆಗಳ ಸಾವಿನ ಪ್ರಕರಣದಲ್ಲಿ ಅರಣ್ಯ ಇಲಾಖೆ ತನ್ನ ತಪ್ಪು ಮುಚ್ಚಿಹಾಕಲು ಅಮಾಯಕ ರೈತರ ಮೇಲೆ ದೂರು ದಾಖಲಿಸಿಕೊಂಡು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದೆ. ಆನೆಗಳ ಸಾವಿಗೆ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೂ ಅರಣ್ಯ ಇಲಾಖೆ ಇದನ್ನು ಮುಚ್ಚಿಹಾಕಿದೆ. ಕೂಡಲೇ ಹೆಸ್ಕಾಂ ಮತ್ತು ಸಂಬಂಧಪಟ್ಟ ಅರಣ್ಯ ಇಲಾಖೆಯವರ ಮೇಲೆ ದೂರು ದಾಖಲಿಸದಿದ್ದರೆ ಕಾಂಗ್ರೆಸ್ ಪಕ್ಷ ಉಗ್ರ ಹೋರಾಟ ನಡೆಸಲಿದೆ.
-ಈಶ್ವರ ಘಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಖಾನಾಪುರ.

Related Articles

Back to top button