Latest

ಸದೃಢ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯಕ: ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಂದು ಅಂತರಾಷ್ಟ್ರೀಯ ಯೋಗ ದಿನ. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ಯೋಗ ದಿನಾಚರಣೆ ಆಚರಿಸುವ ಬದಲು ತಮ್ಮ ತಮ್ಮ ಮನೆಯಲ್ಲಿಯೇ ಯೋಗದಿನ ಆಚರಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ.

ದೇಶದ್ಯಾಂತ ಬೆಳಗ್ಗೆ ಏಳು ಗಂಟೆಗೆ ಮನೆಯಲ್ಲಿ ಯೋಗ ದಿನ ಆಚರಿಸಲು ಕರೆ ನೀಡಿರುವ ಪ್ರಧಾನಿ ಮೋದಿ ಸ್ವತಃ ತಾವು ಮನೆಯಲ್ಲಿ ಯೋಗ ಮಾಡಿದರು. ದೆಹಲಿಯ ಲೋಕ ಕಲ್ಯಾಣ ಮಾರ್ಗ್ ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಅವರು 45 ನಿಮಿಷಗಳ ಕಾಲ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಅಕಾಡೆಮಿ ಜೊತೆಗೆ ಯೋಗ ಮಾಡಿ ಗಮನ ಸೆಳೆದರು.

ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ನಿಮ್ಮ ಮನೆ ಹಾಗೂ ಕುಟುಂಬದೊಂದಿಗೆ ಯೋಗ ಆಚರಿಸಿ. ಯೋಗದಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಕೊರೊನಾ ವಿರುದ್ಧ ಹೋರಾಟ ಮಾಡಬಹುದು. ಆದ್ದರಿಂದ ಆರೋಗ್ಯ ವೃದ್ಧಿಗೆ ಯೋಗ ಬಹು ಮುಖ್ಯ. ದೈಹಿಕ ಹಾಗೂ ಮಾನಸಿಕ ಸದೃಢತೆಯ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯವಾಗಿದೆ. ಅಲ್ಲದೇ ಈ ಮಾರಕ ಕೊರೊನಾ ವೈರಸ್ ಹೋಗಲಾಡಿಸಲು ಯೋಗ ಖಂಡಿತವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದರು.

ಉಸಿರಾಟ ವ್ಯವಸ್ಥೆಗೆ ಬಲ ನೀಡುವುದೇ ಯೋಗವಾಗಿದೆ. ದಿನನಿತ್ಯ ಯೋಗ ಮಾಡಿ ಎಂದು ನಾನು ಈ ವೇಳೆ ಆಗ್ರಹಿಸುತ್ತೇನೆ ಎಂದರು. ಅಲ್ಲದೇ ಯೋಗದಿಂದ ಜೀವನದಲ್ಲಿ ಯೋಗ್ಯತೆ ಹೆಚ್ಚುತ್ತೆ. ಕೆಲಸಗಳನ್ನ ಶಿಸ್ತುಬದ್ಧವಾಗಿ, ನಿಯಮಬದ್ಧವಾಗಿ ಮಾಡುವುದು ಕೂಡ ಯೋಗ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Home add -Advt

ಯೋಗ ಕೇವಲ ದೈಹಿಕ ಶಕ್ತಿಗಾಗಿ ಮಾತ್ರವಲ್ಲದೇ ಮಾನಸಿಕ ಆರೋಗ್ಯದ ಬೆಳವಣಿಗೆಗೂ ಸಹಾಯಕಾರಿ. ಹೀಗಾಗಿ ಯೋಗದ ಮಹತ್ವವನ್ನು ಇಡೀ ವಿಶ್ವ ಅರಿತಿರುವುದು ನನಗೆ ಸಂತಸದ ವಿಷಯವಾಗಿದೆ ಎಂದರು.

Related Articles

Back to top button