IFS ಪತಿ-IPS ಪತ್ನಿ ಜಗಳ; ಐಎಎಸ್ ಅಧಿಕಾರಿ ಕೊಲೆ ಹಿಂದೆ ಪತ್ನಿ ಕೈವಾಡ; ಚಾರಿತ್ರ್ಯವನ್ನೇ ಪ್ರಶ್ನಿಸಿದ ನಿತಿನ್

ನಿತಿನ್ ವಿರುದ್ಧ ಮಾನನಷ್ಟ ಮೊಕದ್ದಮೆಗೆ ವರ್ತಿಕಾ ನಿರ್ಧಾರ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಹಾಗೂ ಪತಿ ಐಎಫ್ ಎಸ್ ಅಧಿಕಾರಿ ನಿತಿನ್ ಜಗಳ ತಾರಕಕ್ಕೇರಿದೆ.
ನಾಲ್ಕು ವರ್ಷಗಳ ಹಿಂದೆ ಉತ್ತರ ಪ್ರದೇಶದ ಲಕ್ನೋ ದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಸಾವಿನ ಹಿಂದೆ ತನ್ನ ಪತ್ನಿ ಐಪಿಎಸ್ ಅಧಿಕಾರಿ ವರ್ತಿಕಾ ಪಾತ್ರವಿದೆ ಎಂದು ಆರೋಪಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಐಎಫ್ ಎಸ್ ಅಧಿಕಾರಿ ನಿತಿನ್ ಯೆಯೋಲಾ ದೂರು ನೀಡಿದ್ದಾರೆ.
ಸರ್ಕಾರದ ಅನುಮತಿ ಪಡೆಯದೇ ವಿದೇಶ ಪ್ರವಾಸ ಕೈಗೊಂಡು ವರ್ತಿಕಾ ಸೇವಾ ನಿಯಮ ಉಲ್ಲಂಘಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ನನ್ನ ಪತ್ನಿ ವರ್ತಿಕಾ ಕಟಿಯಾರ್ ಚಾರಿತ್ರ್ಯ ಹಾಗೂ ಪ್ರಾಮಾಣಿಕತೆ ಪ್ರಶ್ನಾರ್ಹವಾಗಿದೆ. 2017ರಲ್ಲಿ ಉತ್ತರ ಪ್ರದೇಶದಲ್ಲಿ ಮೃತಪಟ್ಟ ಕರ್ನಾಟಕ ಕೇಡರ್ ಐಎ ಎಸ್ ಅಧಿಕಾರಿ ಅನುರಾಗ್ ತಿವಾರಿ ಜೊತೆ ವರ್ತಿಕಾ ಆತ್ಮೀಯ ಸಂಬಂಧ ಹೊಂದಿದ್ದರು. ಮನೆಗೂ ಆಗಾಗ ಭೇಟಿ ನೀಡುತ್ತಿದ್ದರು. ತಿವಾರಿ ಸಾವಿನ ಬಗ್ಗೆ ವರ್ತಿಕಾ ಅವರನ್ನು ಸಿಬಿಐ ಎರಡು ಬಾರಿ ವಿಚಾರಣೆ ನಡೆಸಿತ್ತು. ವರ್ತಿಕಾ ತವರು ಕೂಡ ಲಕ್ನೋ ಆಗಿದೆ. ಹೀಗಾಗಿ ತಿವಾರಿ ಸಾವಿನ ಪ್ರಕರಣದಲ್ಲಿ ವರ್ತಿಕಾ ಪಾತ್ರದ ಬಗ್ಗೆ ಶಂಕೆ ಮೂಡುತ್ತಿದೆ. ವರ್ತಿಕಾ ಹಾಗೂ ತಿವಾರಿ ಮೊಬೈಲ್ ಪರಿಶೀಲಿಸಿದರೆ ಈ ಬಗ್ಗೆ ಸತ್ಯ ಗೊತ್ತಾಗಲಿದೆ ಎಂದಿದ್ದಾರೆ.
ಇನ್ನು ತಿವಾರಿ ಸಾವಿನ ಬಳಿಕ ಆಯಾಜ್ ಖಾನ್ ಎಂಬಾತನ ಜೊತೆ ವರ್ತಿಕಾ ಸ್ನೇಹವಿದೆ. ಧಾರವಾಡದಲ್ಲಿ 2019-20ರ ಅವಧಿಯಲ್ಲಿ ಎಸ್ ಪಿ ಆಗಿದ್ದಾಗ ಖಾನ್ ವರ್ತಿಕಾ ಪರಿಚಯವಾಗಿದೆ. ಗೋವಾದ ಕ್ಯಾಸಿನೋಗಳಿಗೂ ವರ್ತಿಕಾ, ಖಾನ್ ಜೊತೆ ಹೋಗಿದ್ದು, ಇಬ್ಬರ ನಡುವೆ ಹಣಕಾಸು ವ್ಯವಹಾರ ಕೂಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ನಡುವೆ ಪತಿಯ ಆರೋಪಗಳನ್ನು ನಿರಾಕರಿಸಿರುವ ವರ್ತಿಕಾ ಕಟಿಯಾರ್, ನಿತಿನ್ ವಿರುದ್ಧ ನಾನು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದು, ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಹೀಗಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆಸಿಡ್ ದಾಳಿ ಸಹ ನಡೆಸಲು ಯತ್ನಿಸಿದ್ದರು. ನಾನು ಪತಿಯಿಂದ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದು, ನಿತಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.
ಮಹಿಳಾ ಪೊಲೀಸ್ ಪ್ರೀತಿಗಾಗಿ ಹೆಂಡತಿ ಮಕ್ಕಳನ್ನೇ ಕೊಂದು ಹೂತ; ಸತ್ತು ಹೋಗಿದ್ದ ವ್ಯಕ್ತಿ ಎದ್ದುಬಂದಿದ್ದು ಹೇಗೆ..?