ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮಹೇಶ ಕುಮಟಳ್ಳಿಗೆ ಟಿಕೆಟ್ ಕೊಡದಿದ್ದರೆ ನಾನು ಸಹ ಚುನಾವಣೆಗೆ ನಿಲ್ಲುವುದಿಲ್ಲ – ರಮೇಶ ಜಾರಕಿಹೊಳಿ
ಅಥಣಿ ಟಿಕೆಟ್ ನನಗೇ ಕೊಡಬೇಕು. ಈ ವಿಷಯದಲ್ಲಿ ಪಕ್ಷ ಕೈಗೊಳ್ಳುವ ನಿರ್ಧಾರದ ಮೇಲೆ ನನ್ನ ಮುಂದಿನ ನಿರ್ಧಾರಗಳಿವೆ – ಲಕ್ಷ್ಮಣ ಸವದಿ
ಹೆಚ್ಚು ಕಡಿಮೆ ಇಬ್ಬರ ಎಚ್ಚರಿಕೆಯೂ ಒಂದೇ, ಇಬ್ಬರೊಳಗೆ ಯಾರಿಗೇ ಟಿಕೆಟ್ ಸಿಗದಿದ್ದರೂ ಪಕ್ಷದಿಂದ ಹೊರನಡೆಯುವ ರೀತಿಯಲ್ಲಿದೆ ಇವರಿಬ್ಬರ ಬೆದರಿಕೆ.
ಇಂತಹ ಸಂದರ್ಭದಲ್ಲಿ ಪಕ್ಷ ಏನು ಮಾಡಬೇಕು? ಇಬ್ಬರೊಳಗೆ ಒಬ್ಬರನ್ನು ಬಿಟ್ಟುಕೊಡಬೇಕು, ಇಲ್ಲವೇ ಒಬ್ಬರಿಗೆ ಟಿಕೆಟ್ ಕೊಟ್ಟು ಮತ್ತೊಬ್ಬರನ್ನು ಸಮಾಧಾನಪಡಿಸಬೇಕು. ಈ ಕ್ಷಣದವರೆಗಿನ ಅವರಿಬ್ಬರ ರೋಷಾವೇಶ ನೋಡಿದರೆ ಇಬ್ಬರೂ ಸಮಾಧಾನಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ತಮ್ಮ ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವ ಸಾಧ್ಯತೆ ಇಲ್ಲ.
ಮಹೇಶ ಕುಮಟಳ್ಳಿ ಬಿಟ್ಟುಕೊಡುವ ಸ್ಥಿತಿಯಲ್ಲಿ ರಮೇಶ ಜಾರಕಿಹೊಳಿ ಇಲ್ಲ, ಮಹೇಶ ಕುಮಟಳ್ಳಿಗೆ ಟಿಕೆಟ್ ಬಿಟ್ಟುಕೊಡುವ ಸ್ಥಿತಿಯಲ್ಲಿ ಲಕ್ಷ್ಮಣ ಸವದಿ ಇಲ್ಲ. ಹಾಗಾದಲ್ಲಿ ಪಕ್ಷ ಏನು ಮಾಡಬೇಕು? ಯಾರನ್ನು ಕೈಬಿಡಬೇಕು? ಪಕ್ಷಕ್ಕೆ ರಮೇಶ ಜಾರಕಿಹೊಳಿ ಮುಖ್ಯವೋ? ಲಕ್ಷ್ಮಣ ಸವದಿ ಮುಖ್ಯವೋ?
ನಾನು 20 ವರ್ಷದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಲಕ್ಷ್ಮಣ ಸವದಿ ಹೇಳಿದರೆ, ಪ್ರಸ್ತುತ ಬಿಜೆಪಿ ಸರಕಾರ ಬಂದಿದ್ದೇ ನನ್ನಿಂದ, ನೀವು ಉಪಮುಖ್ಯಮಂತ್ರಿ ಸ್ಥಾನ ಅನುಭವಿಸಲು ನಾನೇ ಕಾರಣ ಎಂದು ರಮೇಶ ಜಾರಕಿಹೊಳಿ ಹೇಳುತ್ತಾರೆ.
ಇನ್ನು ಎರಡು ದಿನಗಳೊಳಗೆ ಅಥಣಿ ಟಿಕೆಟ್ ಘೋಷಣೆಯಾಗಬೇಕಿದೆ. ಬಿಜೆಪಿಗೆ ಇದು ತಂತಿಯ ಮೇಲಿನ ನಡಿಗೆ. ಹಾವು ಸಾಯಬೇಕು, ಕೋಲು ಮುರಿಯಬಾರದು ಎನ್ನುವ ರೀತಿಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕಿದೆ. ನಮ್ಮದು ರಾಷ್ಟ್ರೀಯ ಪಕ್ಷ, ನಿಮ್ಮ ಹಿತಕ್ಕಿಂತ ಪಕ್ಷದ ಹಿತದ ದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳಲಾಗುವುದು. ನೀವು ಏನಾದರೂ ಮಾಡಿಕೊಳ್ಳಿ ಎಂದು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದೋ?
ಇಬ್ಬರಲ್ಲಿ ಒಬ್ಬರನ್ನು ಸಮಾಧಾನಪಡಿಸಲು ಸಾಧ್ಯವಾಗದಿದ್ದಲ್ಲಿ, ಬಿಜೆಪಿ ತೆಗೆದುಕೊಳ್ಳುವ ಯಾವುದೇ ನಿರ್ಣಯ ಪಕ್ಷದ ಮೇಲೆ ಒಂದಿಷ್ಟು ಪರಿಣಾಮಗಳನ್ನು ಉಂಟು ಮಾಡುವುದು ನಿಶ್ಚಿತ. ಚುನಾವಣೆ ಹೊತ್ತಿನಲ್ಲಿ ಇಂತಹ ಇಕ್ಕಟ್ಟಿನ ಸನ್ನಿವೇಶವನ್ನು ಪಕ್ಷ ಹೇಗೆ ಬಗೆಹರಿಸಲಿದೆ ಎನ್ನುವುದೇ ಕುತೂಹಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ