*ಗಣೇಶ ವಿಸರ್ಜನೆಗೆ ಸಕಲ ಸಿದ್ಧತೆ ಕೈಗೊಂಡಿದೆ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶ ವಿಸರ್ಜನೆಗೆ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆಯಿಂದ ಸಕಲ ಸಿದ್ಧತೆ ಕೈಗೊಂಡಿದ್ದು, ಗಣೇಶ ವಿಸರ್ಜನೆ ಸುಗಮವಾಗಿ ಸಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ನಗರದ ಕುಮಾರ ಗಂಧರ್ವ ಕಲಾ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬದ ನಿಮಿತ್ತ ಆಯಾ ಮಂಡಳದವರು ಮಹಾ ಪ್ರಸಾದ ಮಾಡಿದ್ದಾರೆ, ಜಿಲ್ಲಾಡಳಿತ ಕೂಡ ಸಹಾಯ ಮಾಡಿದ್ದು, ನಾವು ಸಹಕಾರ ನೀಡಿದ್ದೇವೆಂದರು.
ಇನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಪ್ರಕರಣದಲ್ಲಿ ಯಾರು ಪತ್ರ ಬರೆದರೂ ಪ್ರಯೋಜನವಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಎಸ್ಐಟಿ ರಚಿಸಲಾಗಿದ್ದು ತನಿಖೆ ಪೂರ್ಣಗೊಳ್ಳುವತನಕ ಕಾಯಬೇಕು ಅಷ್ಟೇ, ಎಸ್ ಐಟಿ ಮೇಲೆ ಯಾವುದೇ, ಯಾರದೇ ಒತ್ತಡವಿಲ್ಲ ಎಂದು ಸ್ಪಷ್ಟ ಪಡಿಸಿದರು.
ರಾಹುಲ್ ಜಾರಕಿಹೊಳಿ ಬಿಡಿಸಿಸಿ ಬ್ಯಾಂಕ್ ನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನಿಸಿಲ್ಲ. ಇನ್ನು ಚುನಾವಣೆಗೆ ಒಂದು ತಿಂಗಳು ಕಾಲಾವಕಾಶವಿದೆ ಎಂದ ಸಚಿವರು, ಬೆಳಗಾವಿ ತಾಲೂಕಿನ ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಗಣೇಶ ಚತುರ್ಥಿ ಮುಗಿದ ನಂತರ ಸಭೆ, ಸಮಾರಂಭ ಪ್ರಾರಂಭಿಸುತ್ತಾರೆಂದು ಮಾಹಿತಿ ನೀಡಿದರು.
ಹುಕ್ಕೇರಿ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಆಣೆ, ಪ್ರಮಾಣ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಆಣೆ, ಪ್ರಮಾಣ ಮಾಡುವುದು ಸಾಮಾನ್ಯ. ಯಾರ ಮೇಲೆ ವಿಶ್ವಾಸ, ಪ್ರೀತಿ ಇರುತ್ತದೆ ಅವರನ್ನು ಮತದಾರರು ಬೆಂಬಲಿಸುತ್ತಾರೆ ಎಂದು ತಿಳಿಸಿದರು.
ಇನ್ನು ಬೆಳಗಾವಿ ಜನತೆಯ ಬಹುದಿನಗಳ ಬೇಡಿಕೆಯಾದ ಪೈಒವರ್ ಯೋಜನೆಯ ನೀಲ ನಕ್ಷೆ, ವಿಡಿಯೋವನ್ನು ಗಣೇಶ ವಿಸರ್ಜನೆ ವೇಳೆ ಸ್ಕ್ರೀನ್ ನಲ್ಲಿ ನೋಡಲು ಅನುವು ಮಾಡಕಾಗುತ್ತಿದೆ. ವಾರಗಳ ಹಿಂದೆ ಬಿಡುಗಡೆಯಾದ ವಿಡಿಯೋ ಅಧಿಕೃತವಲ್ಲ, ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆಂದರು.