
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕೆಲವೇ ಹೊತ್ತಿನಲ್ಲಿ ರಾಜಿನಾಮೆ ನೀಡುವ ಸಾಧ್ಯತೆ ಇದೆ.
ಮೈಸೂರಿನಿಂದ ಬೆಳಗ್ಗೆ ಬೆಂಗಳೂರಿಗೆ ಹೊರಟಿದ್ದ ಈಶ್ವರಪ್ಪ, ನಂತರ ಮಾರ್ಗ ಬದಲಿಸಿ ಶಿವಮೊಗ್ಗಕ್ಕೆ ತೆರಳಿದರು. ರಾಜಿನಾಮೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದ್ದು ಈ ಹಿನ್ನೆಲೆಯಲ್ಲಿ ಅವರು ಸ್ವಂತ ಜಿಲ್ಲೆ ಶಿವಮೊಗ್ಗದಲ್ಲೇ ಸುದ್ದಿಗೋಷ್ಠಿ ಕರೆದು ರಾಜಿನಾಮೆ ಘೋಷಿಸುವ ಉದ್ದೇಶದಿಂದ ಅಲ್ಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಈ ಪ್ರಕರಣದಿಂದ ಬಿಜೆಪಿ ರಾಷ್ಟ್ರಮಟ್ಟದಲ್ಲಿ ತೀವ್ರ ಮುಜುಗರ ಅನುಭವಿಸುತ್ತಿದ್ದು, ಈಶ್ವರಪ್ಪ ರಾಜಿನಾಮೆ ಪಡೆಯುವುದು ಅನಿವಾರ್ಯ ಎನ್ನುವ ತೀರ್ಮಾನಕ್ಕೆ ಹೈಕಮಾಂಡ ಬಂದಿದೆ. ಹಾಗಾಗಿ ರಾಜಿನಾಮೆಗೆ ಸೂಚನೆ ನೀಡಲಾಗಿದೆ ಎಂದು ಗೊತ್ತಾಗಿದೆ. ಇಂದು ಬೆಳಗ್ಗೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ಕುರಿತಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿ, ಸಂತೋಷ ಆತ್ಮಹತ್ಯೆ ಮಾಡಿಕೊಂಡಿರುವುದು ಬಳಹ ದುಃಖದ ಸಂಗತಿ. ಇದರ ಹಿಂದೆ ಯಾರ ಷಡ್ಯಂತ್ರ ಇದೆ ಎನ್ನುವುದು ಸಮಗ್ರ ತನಿಖೆಯ ಬಳಿಕ ತಿಳಿದು ಬರಲಿದೆ ಎಂದರು.
ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಣ್ಣದಲ್ಲ. ಎಲ್ಲಾ ಆಯಾನದಲ್ಲಿ ರಾಜ್ಯ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರು.
ಆತ್ಮಹತ್ಯೆಯ ಹಿಂದೆ ಯಾರ ಷಡ್ಯಂತ್ರ ಇದೆ ಎಂಬುದು ಶೀಘ್ರದಲ್ಲೇ ತಿಳಿದು ಬರಲಿದೆ. ಅಲ್ಲದೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ವಿಚಾರವನ್ನು ಸಹ ಶೀಘ್ರದಲ್ಲೇ ತಿರ್ಮಾನಿಸಲಾಗುವುದು ಎಂದರು.
ಈಶ್ವರಪ್ಪ ವಜಾಗೊಳಿಸುವಂತೆ ಹಾಗೂ ಬಂಧಿಸುವಂತೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಈಶ್ವರಪ್ಪ ವಜಾ ಮಾಡಿದರೆ ಸಮಾಧಾನವಿಲ್ಲ – ಲಕ್ಷ್ಮಿ ಹೆಬ್ಬಾಳಕರ್