ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸುಳ್ಳು ಹೇಳಲು ಒಂದು ಮಿತಿ ಬೇಡವೇ? ನುಡಿದಂತೆ ನಡೆದ ಸರ್ಕಾರ ಎಂದು ಕನ್ನಡಿಗರಿಗೆ ಇನ್ನೆಷ್ಟು ದಿನೇ ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳಿ ವಂಚನೆ ಮಾಡುತ್ತೀರಿ? ಸಿಎಂ ಸಿದ್ದರಾಮಯ್ಯನವರೇ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ಹೇಳಿದ್ದೀರಿ. ಅಸಲಿಗೆ ನಿಮ್ಮ ಪ್ರಣಾಳಿಕೆಯಲ್ಲಿದ್ದ ಘೋಷಣೆಗಳು 165 ಅಲ್ಲ 173. ಅದರಲ್ಲಿ ಐದು ವರ್ಷಗಳಲ್ಲಿ ತಾವು ಈಡೆರಿಸಿದ್ದು ಕೇವಲ 38%, ಅಂದರೆ 67 ಮಾತ್ರ.
ಇನ್ನು ಕಳೆದ 10 ತಿಂಗಳುಗಳಲ್ಲಿ ತಮ್ಮ ಸಾಧನೆ ದೊಡ್ಡ ಶೂನ್ಯ. ಗ್ಯಾರೆಂಟಿಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿ ರಾಜ್ಯವನ್ನ 1 ಲಕ್ಷ ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿಸಿದ್ದೇ ನಿಮ್ಮ ಸಾಧನೆ.
ಕೊರೋನಾದಂತಹ ಪರಿಸ್ಥಿತಿಯಲ್ಲೂ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಕರ್ನಾಟಕವನ್ನ 4ನೇ ಸ್ಥಾನಕ್ಕೆ ಇಳಿಸಿದ್ದೇ ನಿಮ್ಮ ಸಾಧನೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಿರಬೇಕಾಗಿದ್ದ 11,000 ಕೋಟಿ ರೂಪಾಯಿಗಳನ್ನು ಗ್ಯಾರೆಂಟಿಗಳ ಹೆಸರಿನಲ್ಲಿ ಗುಳುಂ ಮಾಡಿದ್ದೇ ನಿಮ್ಮ ಸಾಧನೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲು, ಬೆಂಗಳೂರಲ್ಲಿ ಬಾಂಬ್ ಸ್ಫೋಟ ಆಗಲು ಬಿಟ್ಟಿದ್ದೇ ನಿಮ್ಮ ಸಾಧನೆ.
ರೈತರಿಗೆ ಬರ ಪರಿಹಾರ ಕೊಡದೆ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ತಂದಿದ್ದು, ಲಕ್ಷಾಂತರ ಕೃಷಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಗುಳೆ ಹೋಗುವಂತೆ ಮಾಡಿದ್ದೇ ನಿಮ್ಮ ಸಾಧನೆ.
ಬೆಂಗಳೂರಿನ ಜನರು ಕುಡಿಯುವ ನೀರಿಗೂ ಪರದಾಡುವ ದುಸ್ಥಿತಿ ತಂದು ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಜನ ಬೆಂಗಳೂರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೇ ನಿಮ್ಮ ಸಾಧನೆ.
ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳು ಓದಲು ಕರೆಂಟ್ ಇಲ್ಲದೆ, ಪರೀಕ್ಷಾ ಕೇಂದ್ರಕ್ಕೆ ಹೋಗಲು ಬಸ್ಸಿಲ್ಲದೆ ಪರದಾಡುವ ಪರಿಸ್ಥಿತಿ ತಂದಿದ್ದೇ ನಿಮ್ಮ ಸಾಧನೆ.
ನೀರು, ಹಾಲು, ಕರೆಂಟು, ಆಸ್ತಿ ತೆರಿಗೆ, ಆಸ್ತಿ ನೋಂದಣಿ ಶುಲ್ಕ, ಸ್ಟಾಂಪ್ ದರ, ಕಡೆಗೆ ಜನನ ಮತ್ತು ಮರಣ ಪ್ರಮಾಣ ಪತ್ರದ ಶುಲ್ಕವನ್ನೂ ಹೆಚ್ಚಿಸಿ ಜನರನ್ನು ಸುಲಿಗೆ ಮಾಡಿದ್ದೇ ನಿಮ್ಮ ಸಾಧನೆ.
ತಾವು ಎಷ್ಟು ದುರ್ಬಲ ಮುಖ್ಯಮಂತ್ರಿ ಎಂದರೆ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ, 90ಕ್ಕೂ ಹೆಚ್ಚು ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ, ಗೂಟದ ಕಾರು ನೀಡಿ ಅವರನ್ನು ಸಮಾಧಾನಪಡಿಸಬೇಕಾದ ದಯನೀಯ ಸ್ಥಿತಿ ನಿಮ್ಮದು.
ಇಷ್ಟೆಲ್ಲಾ ಸಾಲು ಸಾಲು ವೈಫಲ್ಯಗಳ ನಡುವೆಯೂ ಅದ್ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದೀರೋ ನಾ ಕಾಣೆ. ಕೇವಲ ಹತ್ತು ತಿಂಗಳಲ್ಲಿ ಜನಮನ್ನಣೆ ಕಳೆದುಕೊಂಡಿರುವ ನಿಮ್ಮ @INCKarnataka ಸರ್ಕಾರಕ್ಕೆ ಜನ ದಿನನಿತ್ಯ ಶಾಪ ಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಕನ್ನಡಿಗರು ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ