*ವಿರೋಧಿಗಳು ಕೇಳಿದರೂ ಸಹಾಯ ಮಾಡುವ ಸ್ವಭಾವ ನನ್ನದು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

** *ನೀಲಕಂಠೇಶ್ವರ ದೇವಾಲಯದ ನೂತನ ಕಟ್ಟಡದ ವಾಸ್ತು ಶಾಂತಿ, ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ*
*ಬೆಳಗಾವಿ:* ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ದೇವಾಲಯಗಳ ನಿರ್ಮಾಣ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ನಾನು ದೇವರಲ್ಲಿ ಶ್ರದ್ಧೆ, ಬೇರೆ ಧರ್ಮಗಳ ಬಗ್ಗೆ ಗೌರವ ಹೊಂದಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಸಾವಗಾಂವ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ದೇವಾಲಯದ ನೂತನ ಕಟ್ಟಡದ ವಾಸ್ತು ಶಾಂತಿ, ಕಳಸಾರೋಹಣ, ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಇಲ್ಲಿಗೆ ಬಂದಿರುವುದು ತವರು ಮನೆಗೆ ಬಂದಷ್ಟೇ ಸಂತೋಷ ತಂದಿದೆ. ಭಾರತೀಯ ಸಂಸ್ಕೃತಿಯ ಅನಾವರಣ ಇಲ್ಲಿ ಆಗಿದೆ ಎಂದರು.
ಕ್ಷೇತ್ರದ ಅಭಿವೃದ್ಧಿಯೇ ನನ್ನ ದೊಡ್ಡ ಕನಸು. ಗೆದ್ದ ತಕ್ಷಣ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜನರ ಹೃದಯ ಗೆಲ್ಲುವ ನಿರ್ಧಾರ ಮಾಡಿದೆ. ಇಂದು ಶ್ರಾವಣ ಸೋಮವಾರ ಶಿವಾಲಯ ಉದ್ಘಾಟನೆಯೊಂದಿಗೆ ಆರಂಭಿಸಿರುವೆ. ಒಂದೇ ದಿನ 5 ದೇವಾಲಯಗಳ ಉದ್ಘಾಟನೆ, ಭೂಮಿ ಪೂಜೆಗಳಲ್ಲಿ ಭಾಗವಹಿಸುತ್ತಿರುವೆ. ಚುನಾವಣೆ ಬಂದಾಗಷ್ಟೆ ಬರುವವರು, ದೊಡ್ಡ ದೊಡ್ಡ ಮಾತುಗಳನ್ನಾಡಿ ಹೋಗುತ್ತಾರೆ. ನಾನು ಕೆಲಸ ಮಾಡುವವಳು, ಜನರ ಭಾವನೆಗೆ ಗೌರವ ಕೊಡುವವಳು. ವೈರಿ ಕೂಡ ಸಹಾಯ ಕೇಳಿದರೆ ಸಹಾಯ ಮಾಡಿಕೊಡುತ್ತೇನೆ. ಆದರೆ ನನ್ನನ್ನು ಕೆಣಕಲು ಬಂದರೆ ಮಾತ್ರ ಸುಮ್ಮನಿರುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಾನು ನೇರ ನುಡಿಯವಳು, ಮಾತು ಕೊಟ್ಟ ಮೇಲೆ ಕೆಲಸ ಮಾಡಿಕೊಡುವೆ. ಆಗದಿದ್ದರೆ ಆಗುವುದಿಲ್ಲ ಎನ್ನುವೆ. ಸಮಗ್ರವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂಬುದೇ ನನ್ನ ಜೀವನದ ದೊಡ್ಡ ಗುರಿಯಾಗಿದೆ ಎಂದರು.
ದುಷ್ಟ ಶಕ್ತಿಗಳನ್ನು ಹೋಗಲಾಡಿಸುವುದಕ್ಕಾಗಿ ವಾಸ್ತು ಶಾಂತಿ ಮಾಡಲಾಗುತ್ತದೆ. ವಾಸ್ತು ಶಾಂತಿ ಸಮಾರಂಭವು ನಮ್ಮ ದೇವಾಲಯವನ್ನು ಶುದ್ಧೀಕರಿಸಲು ಮತ್ತು ಶಕ್ತಿಯನ್ನು ತುಂಬಲು ಪ್ರಬಲ ಮಾರ್ಗವಾಗಿದೆ. 5 ಶಕ್ತಿಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಆಧ್ಯಾತ್ಮಿಕ ಯೋಗಕ್ಷೇಮವನ್ನು ಉತ್ತೇಜಿಸಿ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಭಕ್ತಿಯ ದಾಸೋಹ ಇಲ್ಲಿ ನಡೆಯುತ್ತಿದೆ, ಭಗವಂತನ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಕ್ಕಿದೆ. ತವರು ಮನೆಯಂತೆ ಎಲ್ಲರೂ ಸೇರಿ ಸೀರೆ ಕೊಟ್ಟಿದ್ದೀರಿ. ಮುಂದೆ ನಿಮ್ಮ ಸಹಾಯ ಕೇಳಿದಾಗ ಉಡಿ ತುಂಬಿ ಅಶೀರ್ವದಿಸಿ, ಈ ಪ್ರದೇಶವನ್ನು ಬೆಳೆಸೋಣ, ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಚಂದ್ರಶೇಖರ್ ಶಿರಹಟ್ಟಿ, ಮಾರುತಿ ಪಾಟೀಲ್, ಮಹಾದೇವ ಪೋದಾರ, ಸಿಳಕೆ ಸಾಬಾ ಅಪ್ಪಾ ಸಾಹೇಬ್ ಸಿಳತೆ, ಯುನೂಸ್ ಅಹ್ಮದ್, ಸೂರಜ್ ಪಾಟೀಲ್, ಕುಲಗೂಡ ಸಾಬ್, ರಾಜೇಶ್ವರಿ ಶಿಳಕೆ, ಚಾಯಾ ಪಾಟೀಲ್, ಮೋಹನ್ ಸುಂಬ್ರೆಕರ್, ಮಹಾದೇವ ನೂಲಿ, ಮರೀಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
*