Belagavi NewsBelgaum NewsKannada NewsLatest

ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿ ದೂರು ನೀಡಿದ್ದು ನಿಜ: ಸಚಿವ ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವ್ಯಾಕ್ಸಿನ್ ಡಿಪೋದಲ್ಲಿ ಅಕ್ರಮವಾಗಿ ಸ್ಮಾಟ್೯ ಸಿಟಿ ಕಾಮಗಾರಿ ಮಾಡಿರುವ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿಗಳ ವಿರುದ್ಧ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ದೂರು ದಾಖಲು‌ ಮಾಡಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ದೃಢಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ಎರಡು- ಮೂರು ವರ್ಷಗಳಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಅಕ್ರಮವಾಗಿ ನಡೆಯುತ್ತಿದೆ. ಇದರಲ್ಲಿ ಎರಡು- ಮೂರು ಸ್ಮಾರ್ಟ್ ಸಿಟಿ ಎಂ.ಡಿ.ಗಳು ಬರುತ್ತಾರೆ. ಆರೋಗ್ಯ‌ ಇಲಾಖೆ ಅನುಮತಿ ಪಡೆಯದೆ ಗಿಡ ಕಡಿದು ಔಷಧೀಯ ಸಸ್ಯಗಳುಳ್ಳ ಪ್ರದೇಶವನ್ನು ಹಾಳು ಮಾಡಿ ಸ್ಮಾರ್ಟ್ ಸಿಟಿ ಕಾಮಗಾರಿ ಮಾಡಿದ್ದಾರೆ. ಹೀಗಾಗಿ ಅದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ” ಎಂದರು.

Home add -Advt

“ಮೂರು ವರ್ಷಗಳಿಂದ ಈ ವಿಷಯ ಸಂಬಂಧಿಸಿದವರ ಗಮನಕ್ಕೆ‌ ಬಂದಿದ್ದರೂ ರಾಜಕೀಯ ಒತ್ತಡದಿಂದ ಏನೂ ಮಾಡಲು ಆಗಿರಲಿಲ್ಲ. ಸದ್ಯ ವಾತಾವರಣ ಬೇರೆ ಇದೆ. ಹೀಗಾಗಿ ಪ್ರಕರಣ ದಾಖಲಿಸಿದ್ದಾರೆ. ಇದರ ತನಿಖೆಯನ್ನು ಮುಕ್ತವಾಗಿ ನಡೆಸಲಾಗುವುದು” ಎಂದರು.

ಕಾಂಗ್ರೆಸ್ ನೀಡಿದ ಗ್ಯಾರಂಟಿ ಪ್ರಕಾರ ಅಕ್ಕಿ ವಿತರಣೆ ಕುರಿತು ಮಾತನಾಡಿದ ಅವರು, “ಕೇಂದ್ರದಲ್ಲಿ ಏಳು ಲಕ್ಷ ಟನ್ ಅಕ್ಕಿ ದಾಸ್ತಾನಿದೆ. ರಾಜ್ಯದ ನಮ್ಮ ಬೇಡಿಕೆ ಇರುವುದು ಕೇವಲ 2 ಲಕ್ಷ‌ ಟನ್ ಮಾತ್ರ. ಮೊದಲು ಕೇಂದ್ರ ಆಹಾರ ಸಮಿತಿ ಕೊಡುವುದಾಗಿ ಹೇಳಿ‌ ಈಗ ಇಲ್ಲ ಎನ್ನುತ್ತಿದೆ. ಆದ್ದರಿಂದ ಕೇಂದ್ರ ಸರಕಾರದ ದ್ವಂದ್ವ ‌ನಿಲುವಿನ‌ ಬಗ್ಗೆ ಜನತೆಗೆ ಮನವರಿಕೆ ಮಾಡಲು ಪ್ರತಿಭಟನೆ ನಡೆಸಲಾಗುವುದು” ಎಂದರು.

“ರಾಜ್ಯದ ಜನರಿಗೆ ಅಕ್ಕಿ‌ ಲಭ್ಯವಾಗಲು ಒಂದು ತಿಂಗಳು ತಡವಾಗಬಹುದು. ಆದರೆ ನಾವು ಭರವಸೆ ನೀಡಿದ ಹಾಗೆ ಕೊಟ್ಟೇ ಕೊಡುತ್ತೇವೆ. ನಮ್ಮ‌ ಗ್ಯಾರಂಟಿ ಯೋಜನೆ ಬಿಜೆಪಿಗೆ ಭಯ ಹುಟ್ಟಿಸಿದೆ. ಲೋಕಸಭೆ ‌ಚುನಾವಣೆವರೆಗೆ ಹೊಸ ಬೆಳವಣಿಗೆಗಳನ್ನು ಕಾದು ನೋಡಬೇಕು” ಎಂದರು.

“ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗುವ ಮನ್ಸೂಚನೆ ಇದೆ. ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅಲ್ಲಿ ಟ್ಯಾಂಕರ್ ಮೂಲಕ ಸರಬರಾಜು ‌ಮಾಡಲು ಸೂಚಿಸಲಾಗಿದೆ” ಎಂದು ಸತೀಶ ಜಾರಕಿಹೊಳಿ ಹೇಳಿದರು.

Related Articles

Back to top button