ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು, ಬಾಗಲಕೋಟೆ ಸೇರಿದಂತೆ 50ಕ್ಕೂ ಹೆಚ್ಚು ಕಡೆಗಳಲ್ಲಿ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಐಟಿ ದಾಳಿಗೆ ನೀರಾವರಿ ಇಲಾಖೆಯಲ್ಲಿನ ಗೋಲ್ ಮಾಲ್ ಕಾರಣ ಎನ್ನಲಾಗಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದ ಎಂ.ಆರ್.ಉಮೇಶ್ ಸೇರಿದಂತೆ ರಾಜಕೀಯ ನಾಯಕರ ಆಪ್ತರು ಹಾಗೂ ಉದ್ಯಮಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಲ್ಲದೇ ಚಾರ್ಟಡ್ ಅಕೌಂಟೆಂಟ್ ಅಮಲಾ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆ, ಹಣ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಹಾಗೂ ಗೋವಾ ವಿಭಾಗದ ಐಟಿ ಅಧಿಕಾರಿಗಳ 300 ಅಧಿಕಾರಿಗಳಿಂದ ಈ ದಾಳಿ ನಡೆದಿದ್ದು, ನೀರಾವರಿ ಯೋಜನೆಯಲ್ಲಿನ ಸಾವಿರಾರು ಕೋಟಿ ರೂಪಾಯಿ ಹಗರಣದ ಮೂಲವೇ ಕಾರಣ ಎನ್ನಲಾಗಿದೆ. ಕರ್ನಾಟಕ ನೀರಾವರಿ ನಿಗಮದ ಯೋಜನೆಯಲ್ಲಿ 2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿತ್ತು.
ಅಲ್ಲದೇ ರಾಜ್ಯದ ನೀರಾವರಿ ಯೋಜನೆಗಳ ಕಾಂಟ್ರಾಕ್ಟ್ ಆಂಧ್ರ ಕಾಂಟ್ರಾಕ್ಟರ್ ಗಳ ಪಾಲಾಗುತ್ತಿದೆ ಎಂಬ ವಿಚಾರವಾಗಿ ರಾಜ್ಯದ 8ಕ್ಕೂ ಹೆಚ್ಚು ಕಾಂಟ್ರಾಕ್ಟರ್ ಗಳು ಐಟಿ ಇಲಾಖೆಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಭ್ರಷ್ಟರ ಚಳಿ ಬಿಡಿಸಿದ್ದಾರೆ.
ಬಿಎಸ್ ವೈ ಆಪ್ತನ ನಿವಾಸ ಸೇರಿ 50 ಕಡೆಗಳಲ್ಲಿ ಐಟಿ ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ