*ಐ.ಟಿ.ಬಿ.ಪಿ. ತರಬೇತಿ ಕೇಂದ್ರಕ್ಕೆ ಅಗತ್ಯ ಸಹಕಾರ ನೀಡಿ: ಜಿಪಂ ಸಿಇಓ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಹಾಲಬಾವಿ ಗ್ರಾಮದ ಹೊರವಲಯದಲ್ಲಿರುವ ಐ.ಟಿ.ಬಿ.ಪಿ. (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ತರಬೇತಿ ಕೇಂದ್ರಕ್ಕೆ ವಂಟಮುರಿ ಗ್ರಾಮ ಪಂಚಾಯತ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.
ಐ.ಟಿ.ಬಿ.ಪಿ. ತರಬೇತಿ ಕೇಂದ್ರದ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕೇಂದ್ರದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾಲಬಾವಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಕುಡಿಯುವ ನೀರಿನ ಪೈಪಲೈನ್ ಅಳವಡಿಕೆ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ತರಬೇತಿ ಕೇಂದ್ರಕ್ಕೆ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಸಿಇಓ ರಾಹುಲ್ ಶಿಂಧೆ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತರಬೇತಿ ಕೇಂದ್ರದ ಡೆಪ್ಯೂಟಿ ಜನರಲ್ ಬ್ರಿಗೇಡಿಯರ್ ಸಂದೀಪ ಜುಂಜಾ ಅವರು ಮಾತನಾಡಿ, ಫೆಬ್ರುವರಿ ಯಿಂದ ಜೂನ್ ತಿಂಗಳವರೆಗೆ ತರಬೇತಿ ಕೇಂದ್ರದಲ್ಲಿ ಕುಡಿಯುವ ನೀರಿನ ತೊಂದರೆಯಾಗುತ್ತಿದೆ. ಹೀಗಾಗಿ, ವಿಶೇಷವಾಗಿ ಈ ಸಂದರ್ಭದಲ್ಲಿ ನಿರಂತರವಾಗಿ ನೀರಿನ ಪೂರೈಕೆಯಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಿಇಓ ಅವರು ಈ ಬಗ್ಗೆ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಘನ ತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸಿ
ಐಟಿಬಿಪಿ ತರಬೇತಿ ಕೇಂದ್ರಕ್ಕೆ ದೇಶದ ವಿವಿಧ ರಾಜ್ಯಗಳಿಂದ ತರಬೇತಿ ಪಡೆಯಲು ಶಿಬಿರಾರ್ಥಿಗಳು ಆಗಮಿಸುತ್ತಾರೆ. ಹೀಗಾಗಿ, ಹಾಲಬಾವಿ ಗ್ರಾಮ ಹಾಗೂ ತರಬೇತಿ ಕೇಂದ್ರದ ಸುತ್ತಲೂ ಘನ ತ್ಯಾಜ್ಯ ನಿರ್ವಹಣೆಗೆ ವಂಟಮುರಿ ಗ್ರಾಮ ಪಂಚಾಯತಿಯಿಂದ ಅಗತ್ಯ ಕ್ರಮವಹಿಸಬೇಕು. ಪ್ರತಿದಿನ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಸಿಇಓ ಅವರು ನಿರ್ದೇಶನ ನೀಡಿದರು.
ಬೀದಿನಾಯಿ ಹಾವಳಿ ಎದುರಾಗದಂತೆ ಯಾವ ಕ್ರಮಕೈಗೊಳ್ಳಬಹುದೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಐಟಿಬಿಪಿ ತರಬೇತಿ ಕೇಂದ್ರದ ಕಮಾಂಡೆಂಟ್ ಸಿದ್ದಿಕ್ ಪಿ.ಪಿ., ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್, ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಘೋರ್ಪಡೆ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಆನಂದ ಪಾಟೀಲ, ಬೆಳಗಾವಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.



