*ಅಪ್ರಾಪ್ತ ಬಾಲಕಿಯ ಮದುವೆಗೆ ಹಾಜರಾಗಿದ್ದು ನಿಜ, ನಾನು ಮಾಡಿಸಿದ್ದಲ್ಲ : ಐಪಿಎಸ್ ಅಧಿಕಾರಿ ಸ್ಪಷ್ಟನೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಪ್ರಾಪ್ತ ಬಾಲಕಿಯೊಬ್ಬಳ ವಿವಾಹ ಮಾಡಿಸಿರುವ ಆರೋಪವನ್ನು ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ತಳ್ಳಿ ಹಾಕಿದ್ದಾರೆ.
ಮದುವೆಗೆ ಕುಟುಂಬ ಸಮೇತ ಹಾಜರಾಗಿದ್ದು ನಿಜ. ಆದರೆ ನಾನು ಮದುವೆ ಮಾಡಿಸಿಲ್ಲ. ಮದುವೆಗೆ ಹೋದವನು ಬಾಲಕಿಯ ವಯಸ್ಸನ್ನು ಕೇಳಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ತಾವು ಹಾಜರಾಗಿದ್ದ ಫೋಟೋಗಳನ್ನು ಸಹ ಗಡಾದಿ ಹಂಚಿಕೊಂಡಿದ್ದಾರೆ.
ತಮ್ಮ ಸಂಬಂಧಿಯೊಡನೆ ಮದುವೆ ಮಾಡಲು ಆಧಾರ್ ಕಾರ್ಡ್ ನ್ನು ತಿದ್ದುಪಡಿ ಮಾಡಿಸಿದ್ದಲ್ಲದೇ ತಾನೇ ಮುಂದೆ ನಿಂತು ಮದುವೆ ಮಾಡಿಸಿದ್ದಾಗಿ ಗಡಾದಿ ಮೇಲೆ ಆರೋಪ ಕೇಳಿ ಬಂದಿತ್ತು. ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು.
ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ವಿರುದ್ಧ ಅಪ್ರಾಪ್ತೆಯ ತಾಯಿ ಗಂಭೀರ ಆರೋಪ ಮಾಡಿದ್ದು, ಅಪ್ರಾಪ್ತೆಯ ಮೂಲ ಜನ್ಮ ದಿನಾಂಕ 1-06-2008 ಆಗಿದೆ. ಆದರೆ ರವೀಂದ್ರ ಗಡಾದಿ ತಮ್ಮ ಪ್ರಭಾವ ಬೀರಿ ಜನ್ಮ ದಿನಾಂಕವನ್ನು 1-06- 2002 ಎಂದು ತಿದ್ದುಪಡಿ ಮಾಡಿ 2022 ರಲ್ಲಿ ಸಂಬಂಧಿ ಜೊತೆಗೆ ವಿವಾಹ ಮಾಡಿಸಿದ್ದಾರೆಂದು ದೂರಿದ್ದಾರೆ.
ಅಥಣಿ ತಾಲೂಕಿನ ಐಗಳಿ ಗ್ರಾಮದ ಖಾಸಗಿ ಫಾರ್ಮ್ ಹೌಸ್‌ನಲ್ಲಿ ವಿವಾಹ ಕಾರ್ಯ ನಡೆದಿದೆ. ಮೂರು ತಿಂಗಳ ಹಿಂದಷ್ಟೇ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ರವೀಂದ್ರ ಗಡಾದಿ ಅವರು, ಈ ಪ್ರಕರಣದಲ್ಲಿ ನನ್ನದೇನು ಪಾತ್ರ ಇಲ್ಲ. ಸೂಕ್ತ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ