ಸಚಿವರಿದ್ದಾಗ ಬೆಳಗಾವಿ ಎಂದರೆ ಜಗದೀಶ್ ಶೆಟ್ಟರಿಗೆ ಸಿಟ್ಟು ಬರುತ್ತಿತ್ತು – ಚನ್ನರಾಜ ಹಟ್ಟಿಹೊಳಿ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕಸಭಾ ಚುನಾವಣೆಗೆ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿ, ಬೆಳಗಾವಿ ನನ್ನ ಕರ್ಮ ಭೂಮಿ ಎನ್ನುತ್ತಿರುವ ಜಗದೀಶ್ ಶೆಟ್ಟರ್ ಅವರಿಗೆ ಅವರು ಸಚಿವರಾಗಿದ್ದಾಗ ಬೆಳಗಾವಿ ಎಂದರೆ ಸಿಟ್ಟು ಬರುತ್ತಿತ್ತು. ನಾನು ಬೆಳಗಾವಿಗೆ ಇಂಡಸ್ಟ್ರಿಯಲ್ ಕಾರಿಡಾರ್ ಮಾಡೋಣ ಎಂದು ಒತ್ತಾಯಿಸಿದ್ದಕ್ಕೆ ನನ್ನ ಮೇಲೆ ಮುನಿಸಿಕೊಂಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆರೋಪಿಸಿದ್ದಾರೆ.
ಬೆಳಗಾವಿಯ ಕಣಬರ್ಗಿಯಲ್ಲಿ ಮಂಗಳವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಅವರು ಮತಯಾಚನೆ ಮಾಡುತ್ತಿದ್ದರು. ಜಗದೀಶ್ ಶೆಟ್ಟರ್ ಕೈಗಾರಿಕೆ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಉದ್ಯಮಿಗಳ ಸಭೆ ಕರೆದಿದ್ದರು. ಆ ಸಭೆಯಲ್ಲಿ ಉದ್ಯಮಿಯಾಗಿ ನಾನು ಭಾಗವಹಿಸಿದ್ದೆ. ಯಾವುದೇ ಕೈಗಾರಿಕೆ ಸ್ಥಾಪನೆ ಮತ್ತು ಇಂಡಸ್ಟ್ರಿಯಲ್ ಕಾರಿಡಾರ್ ವಿಷಯ ಬಂದಾಗ ಹುಬ್ಬಳ್ಳಿಗೆ ಎನ್ನುತ್ತಿದ್ದರು. ಆ ಸಂದರ್ಭದಲ್ಲಿ ನಾನು, ಇಂಡಸ್ಟ್ಟಿಲ್ ಕಾರಿಡಾರ್ ಬೆಳಗಾವಿಯಲ್ಲಿ ಸ್ಥಾಪಿಸೋಣ ಎಂದು ಹೇಳಿದೆ. ಇದರಿಂದ ಅವರು ಸರಿಯಾಗಿ ಉತ್ತರವನ್ನೂ ನೀಡದೆ ನನ್ನ ಮೇಲೆ ಮುನಿಸಿಕೊಂಡರು. ಬೆಳಗಾವಿ ಎಂದರೆ ಅವರಿಗೆ ಅಸಡ್ಡೆಯಾಗಿತ್ತು. ಅಂತಹ ಶೆಟ್ಟರ್ ಇಂದು ನಿಮ್ಮಮತಕ್ಕಾಗಿ ಬೆಳಗಾವಿ ನನ್ನ ಕರ್ಮ ಭೂಮಿ ಎನ್ನುತ್ತಿದ್ದಾರೆ. ಬೆಳಗಾವಿಗೆ ಅನ್ಯಾಯ ಮಾಡಿರುವ ನಿಮಗೆ ಮತ ನೀಡಲು ಬೆಳಗಾವಿಗರೇನು ಹುಚ್ಚರಾ ಎಂದು ಚನ್ನರಾಜ ಪ್ರಶ್ನಿಸಿದರು.
ಶೆಟ್ಟರ ಅವರೇ ನೀವು ಬೆಳಗಾವಿಗೆ ಅನ್ಯಾಯ ಮಾಡಿದ್ದಕ್ಕೆ ಉತ್ತರಿಸಬೇಕು. ಮುಖ್ಯಮಂತ್ರಿಯಾಗಿದ್ದಾಗ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೆಳಗಾವಿಗೆ ಏನಾದರೂ ಯೋಜನೆ ತರಲು ನಿಮಗೆ ಅವಕಾಶವಿತ್ತು. ಕೈಗಾರಿಕೆಯಂತ ಉತ್ತಮ ಖಾತೆಯೂ ಇತ್ತು. ಆದರೆ ನಿಮಗೆ ಕೇವಲ ಹುಬ್ಬಳ್ಳಿ – ಧಾರವಾಡ ಮಾತ್ರ ಕಾಣುತ್ತಿತ್ತು. ಹುಬ್ಬಳ್ಳಿ – ಧಾರವಾಡದ ಜನರೇನು ನಮ್ಮ ವಿರೋಧಿಗಳಲ್ಲ. ಅಲ್ಲೂ ಬೆಳೆಯಲು, ಆದರೆ ಎಲ್ಲವೂ ಅಲ್ಲಿಗೆ ಹೋದರೆ ಸಮಾನತೆ ಎನ್ನುವುದಕ್ಕೆ ಬೇಲೆ ಏನು ಉಳಿಯಿತು. ಬೆಳಗಾವಿ ಅಸಮಾನತೆಯಿಂದ ಬಳಲುತ್ತಿದೆ. ಹುಬ್ಬಳ್ಳಿ – ಧಾರವಾಡದ ಮಟ್ಟದಲ್ಲಿ ಬೆಳೆಯಬೇಕೆಂದರೆ ಯುವಕ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡಿ ಆಯ್ಕೆ ಮಾಡಿ ಎಂದುಅವರು ವಿನಂತಿಸಿದರು.
ಬಡವರಿಗೆ ಸಹಾಯ ಮಾಡಿದರೆ ಬಿಜೆಪಿಗೆ ಸಹಿಸಲಾಗುತ್ತಿಲ್ಲ – ಲಕ್ಷ್ಮೀ ಹೆಬ್ಬಾಳಕರ್

ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ಸಹಾಯ ಮಾಡುವುದನ್ನು ಭಾರತೀಯ ಜನತಾ ಪಾರ್ಟಿಯವರಿಗೆ ಸಹಿಸಲು ಆಗುತ್ತಿಲ್ಲ. ಅವರಿಗೆ ಏನಿದ್ದರೂ ಶ್ರೀಮಂತರಿಗೆ ಮಾತ್ರ ಸಹಾಯ ಮಾಡುವ ರೂಢಿ. ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಅಂತವರಿಂದ ಬಡವರ ಉದ್ದಾರ ಸಾಧ್ಯವಾ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಬದ್ಧತೆ ಹೊಂದಿರುವ ಪಕ್ಷ. ಬಿಜೆಪಿಯವರಂತೆ ನಾವು ಚುನಾವಣೆ ಮೊದಲು ಆಸ್ವಾಸನೆ ನೀಡಿ ಗೆದ್ದ ನಂತರ ಜನರಿಗೆ ಮೋಸ ಮಾಡಲಿಲ್ಲ. ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ಗ್ಯಾರಂಟಿ ಯೋಜನೆಗಳು ಯಾವತ್ತೂ ನಿಲ್ಲುವುದಿಲ್ಲ. ನಮ್ಮ ಸರಕಾರಕ್ಕೆ ಶಕ್ತಿ ತುಂಬಲು ಲೋಕಸಭಾ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ ಎಂದು ವಿನಂತಿಸಿದರು.

ದಿಂಬು, ಹಾಸಿಗೆ ತಂದಿಟ್ಟು, ಬಾಡಿಗೆ ಮನೆ ಮಾಡಿರುವ ಶೆಟ್ಟರ ಅವರಿಗೆ ಬೆಳಗಾವಿ ಜನರ ಮೇಲೆ ವಿಶ್ವಾಸ ಇಲ್ಲ. ಮನೆ, ವ್ಯವಹಾರ, ಕುಟುಂಬ ಎಲ್ಲವನ್ನೂ ಹುಬ್ಬಳ್ಳಿಯಲ್ಲಿ ಹೊಂದಿರುವ ಅವರೆಂದೂ ಬೆಳಗಾವಿಗರಾಗಲು ಸಾಧ್ಯವೇ ಇಲ್ಲ. ಅವರುಹೇಳುತ್ತಿರುವುದೆಲ್ಲ ಜನರಿಗೆ ಮಂಕು ಬೂದಿ ಎರಚುವ ಮಾತುಗಳು ಎಂದು ಹೆಬ್ಬಾಳಕರ್ ಹೇಳಿದರು.
ರೈತರ ಮನೆಯಲ್ಲಿಜನಿಸಿದ ನಿಮ್ಮ ಮನೆಮಗಳು ರಾಜ್ಯದ ಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಿಮಗೆಲ್ಲ ಗೃಹ ಲಕ್ಷ್ಮೀ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ರೂ. ಕೊಡುವ ಮಹತ್ವದ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನಗೆ, ನಮ್ಮ ಸರಕಾರಕ್ಕೆ ಇನ್ನಷ್ಟು ಶಕ್ತಿ ತುಂಬಿದರೆ ನಾವೆಲ್ಲ ಸೇರಿ ನಿಮ್ಮ ಭಾಗದ ಅಭಿವೃದ್ಧಿ ಮಾಡಲು ಅವಕಾಶವಾಗುತ್ತದೆ ಎಂದು ಅವರು ತಿಳಿಸಿದರು.
ಶಾಸಕ ರಾಜು ಸೇಠ್ ಮಾತನಾಡಿ, ಈ ಹಿಂದೆ ಬೆಳಗಾವಿ ಉತ್ತರ ಶಾಸಕರಾಗಿದ್ದ ಬಿಜೆಪಿಯವರು ಏನೇನೂ ಅಭಿವೃದ್ಧಿ ಮಾಡಿಲ್ಲ. ಈಗ ನಾನು ಶಾಸಕನಾದ ನಂತರ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ. ಮುಂದೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರು ಆಯ್ಕೆಯಾದರೆ ನಾವೆಲ್ಲರೂ ಸೇರಿ ಬೆಳಗಾವಿಗೆ ಇನ್ನಷ್ಟು ಯೋಜನೆ ತರುತ್ತೇವೆ ಎಂದರು. ನಾವು ಬಿಜೆಪಿಯವರಂತೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದೂ ಅವರು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ಬೆಳಗಾವಿ ಮಗನಾಗಿ, ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುವೆ. ನಮಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಸ್ಥಳೀಯ ಮುಖಂಡರಾದ ಪರಶುರಾಮ ವಂಟಮುರಿ, ಮಹೇಶ್ ಶೀಗೆಹಳ್ಳಿ, ಯಲ್ಲಪ್ಪ ಕುರಬರ, ಸುಧೀರ್ ಗಡ್ಡಿ, ಬಾವಕಣ್ಣ ಬಂಗ್ಯಾಗೊಳ, ಭೈರಗೌಡ ಪಾಟೀಲ, ಬಾಬು ಟ್ಯಾನಗಿ, ನಾಗರಾಜ ಮೇಸಿ, ಬಸವರಾಜ ಬಡಕನ್ನವರ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
*ಬಂಟರ ಸಂಘದ ಸಭೆ*

ಇದಕ್ಕೂ ಮೊದಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ರಾಜು ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಬೆಳಗಾವಿ ಬಂಟರ ಸಂಘದ ಸಭೆ ನಡೆಸಿ, ಮತ ಯಾಚಿಸಿದರು. ಬೆಳಗಾವಿ ಅಭಿವೃದ್ಧಿಗೆ ಬಂಟರ ಕೊಡುಗೆಯನ್ನು ಶ್ಲಾಘಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡಿ ಇನ್ನಷ್ಟು ಅಭಿವೃದ್ಧಿಗೆ ಕೈ ಜೋಡಿಸುವಂತೆ ಮಾನವಿ ಮಾಡಿದರು.

ಈ ವೇಳೆ ಮಾತನಾಡಿದ ಬಂಟರ ಸಂಘದ ಪದಾದಕಾರಿಗಳು, ಬೆಂಬಲದ ಭರವಸೆ ನೀಡಿದರು. ಸಭೆಯಲ್ಲಿ ಬಂಟರ ಸಂಘದ ಗೌರವಾಧ್ಯಕ್ಷ ವಿಠ್ಠಲ ಹೆಗ್ಡೆ, ಪ್ರಮುಖರಾದ ರತ್ನಾಕರ್ ಶೆಟ್ಟಿ, ವಿಜಯ್ ಶೆಟ್ಟಿ, ರವೀಂದ್ರ ಶೆಟ್ಟಿ, ಪ್ರಣಯ್ ಶೆಟ್ಟಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಶಿವನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ