ಜೈನಮುನಿ ಹತ್ಯೆ ಪ್ರಕರಣ; ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಆರೋಪಿಗಳನ್ನು ಜು.21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಚಿಕ್ಕೋಡಿ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ. ಹೀಗಾಗಿ ಇಂದು ಇಬ್ಬರೂ ಆರೋಪಿಗಳನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.
ಜೈನ್ ಮುನಿ ಹತ್ಯೆ ಪ್ರಕರಣದ ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹಸನ್ ಢಾಲಾಯತ್ ಕಳೆದ ಏಳು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದರು.
ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಮುಗಿಯುತ್ತಿದ್ದಂತೆ ಚಿಕ್ಕೋಡಿ ಪೊಲೀಸರು ಸೋಮವಾರ ಸಂಜೆ 4 ಗಂಟೆಯ ವೇಳೆಗೆ ಚಿಕ್ಕೋಡಿ ನಗರದ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಚಿದಾನಂದ್ ಬಡಿಗೇರ ಅವರ ಮುಂದೆ ಹಾಜರುಪಡಿಸಿದರು. ಇಬ್ಬರನ್ನೂ ನ್ಯಾಯಾಧೀಶ ಬಡಿಗೇರ್ ಜುಲೈ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೀಗಾಗಿ ಆರೋಪಿಗಳಿಬ್ಬರಿಗೂ ಬೆಳಗಾವಿಯ ಹಿಂಡಲಗಾ ಜೈಲಿಗೆ ಬಿಗಿ ಭದ್ರತೆಯಲಿ ಸ್ಥಳಾಂತರಿಸಲಾಯಿತು. ಈ ವೇಳೆ ಚಿಕ್ಕೋಡಿ ನ್ಯಾಯಾಲಯ ಪರಿಸರದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಹೀಗಾಗಿ ಚಿಕ್ಕೋಡಿ ಡಿವೈಎಸ್ಪಿ ಬಸವರಾಜ ಯಲಿಗಾರ, ಸಿಪಿಐ ಆರ್.ಆರ್.ಪಾಟೀಲ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ