
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರ ’ಜೇಮ್ಸ್’ ಇಂದು ವಿಶ್ವಾದ್ಯಂತ ಬಿಡಿಗಡೆಯಾಗಿದ್ದು, ಪುನೀತ್ ಇಲ್ಲದ ನೋವಿನಲ್ಲಿಯೇ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಭಾವುಕರಾಗಿ ಸಿನಿಮಾ ವೀಕ್ಷಿಸಿದ್ದಾರೆ.
ಮುಂಜಾನೆ 5 ಗಂಟೆಗೆ ಸಿನಿಮಾ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಥೀಯೆಟರ್ ಗಳಿಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ಅಭಿಮಾನಿಗಳು ಸಿನಿಮಾ ಟಿಕೆಟ್ ಸಿಗದೆ ಥಿಯೇಟರ್ ಮೇಲೆಯೇ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ರಾತ್ರಿಯಿಂದ ಬೆಳಗಿನವರೆಗೂ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಟಿಕೆಟ್ ಗಾಗಿ ಕಾದು ಕುಳಿತಿದ್ದಾರೆ. ಆದರೆ ಟಿಕೆಟ್ ಸಿಕ್ಕಿಲ್ಲ. ಇದರಿಂದ ಸಿಟ್ಟಿಗೆದ್ದ ಅಭಿಮಾನಿಗಳು ಥಿಯೇಟರ್ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಕಿಟಿಕಿ ಗಾಜುಗಳನ್ನು ಪುಡಿಗೈದಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಇನ್ನೊಂದೆಡೆ ಬಳ್ಳಾರಿ ಜಿಲ್ಲೆಯಲ್ಲಿ ಕೂಡ ಜೆಮ್ಸ್ ಚಿತ್ರದ ಜಾತ್ರೆ ನಡೆದಿದೆ. ನಗರದ ಉಮಾ ನಟರಾಜ, ಶಿವ ಗಂಗಾ ಚಿತ್ರ ಮಂದಿರಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಿದ್ದು, ಥಿಯೇಟರ್ ಗಳಲ್ಲಿ ನೂಕು ನುಗ್ಗಲು ಉಂಟಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಅನಿವಾರವಾಗಿ ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ.