
ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಗೆ ಕನ್ನಡಿಗರು ಸೇರಿ 28 ಜನರು ಬಲಿಯಾಗಿದ್ದು, ಮೃತ ಕನ್ನಡಿಗರ ಮೃತದೇಹ ರಾಜ್ಯಕ್ಕೆ ಆಗಮಿಸಿದೆ.
ಮೃತ ಮಂಜುನಾಥ್ ಮೃತದೇಹವನ್ನು ಶಿವಮೊಗ್ಗಕ್ಕೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ರವಾನಿಸಲಾಗಿದೆ. ಭರತ್ ಭೂಷಣ್ ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ. ಉಗ್ರರ ಗುಂಡೇಟಿಗೆ ಬಲಿಯಾಗಿರುವ ಬೆಂಗಳೂರಿನ ನಿವಾಸಿ ಭರತ್ ಭೂಷಣ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಪಡೆದಿದ್ದಾರೆ.

ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ನಿವಾಸದಲ್ಲಿ ಭರತ್ ಭೂಷಣ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭರತ್ ಭೂಷಣ್ ಅವರ ನಿವಾಸಕ್ಕೆ ತೆರಳಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಈ ವೇಳೆ ಭರತ್ ಪತ್ನಿ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಭರತ್ ನಿವಾಸಕ್ಕೆ ತೆರಳಿ ಭರತ್ ಭೂಷಣ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ ಸಮಾಧಾನಪಡಿಸಿದರು.