
ಪ್ರಗತಿವಾಹಿನಿ ಸುದ್ದಿ: ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ಬಿಸಿನೆಸ್ ಜೆಟ್ ವಿಮಾನವೊಂದು ಜನವಸತಿ ಪ್ರದೇಶದ ಸಮೀಪ ರಸ್ತೆಗೆ ಅಪ್ಪಳಿಸಿ ಪತನಗೊಂಡಿರುವ ಘಟನೆ ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ನಡೆದಿದೆ.
ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 9 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಟೆಕ್ಸಾಸ್ನ ಆಸ್ಟಿನ್ನಿಂದ ಬಹಾಮಾಸ್ಗೆ ತೆರಳುತ್ತಿದ್ದ ಬಿಸಿನೆಸ್ ಜೆಟ್ ವಿಮಾನವು ಹಾರಾಟದ ವೇಳೆ ನಿಯಂತ್ರಣ ಕಳೆದುಕೊಂಡು ಪಾಮ್ ಬೀಚ್ ಕೌಂಟಿಯ ಕ್ರೆಸ್ಟ್ ಹ್ಯಾವೆನ್ ಸಮೀಪ ಪತನಗೊಂಡಿದೆ. ವಿಮಾನ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಭಾರೀ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ವಿಮಾನದಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮನೆಗಳು, ವಾಹನಗಳ ಸಮೀಪದಲ್ಲೇ ಪತನ
ಜನನಿಬಿಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಮನೆಗಳು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಸಮೀಪದಲ್ಲೇ ವಿಮಾನ ಅಪ್ಪಳಿಸಿದೆ. ವಿಮಾನ ಬಿದ್ದ ರಭಸಕ್ಕೆ ರಸ್ತೆಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದ್ದು, ಸುತ್ತಮುತ್ತ ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿತ್ತು. ಅದೃಷ್ಟವಶಾತ್ ವಿಮಾನವು ಮನೆಗಳ ಮೇಲೆ ಬೀಳದ ಕಾರಣ ಅಕ್ಕಪಕ್ಕದ ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ಯಾಮೆರಾಗಳಲ್ಲಿ ಸೆರೆಯಾದ ಭೀಕರ ದೃಶ್ಯ
ವಿಮಾನ ಪತನಗೊಂಡ ಭೀಕರ ದೃಶ್ಯಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಆಕಾಶದಿಂದ ವೇಗವಾಗಿ ಕೆಳಕ್ಕೆ ಧಾವಿಸಿದ ವಿಮಾನ ರಸ್ತೆ ಮೇಲೆ ಅಪ್ಪಳಿಸುತ್ತಿದ್ದಂತೆ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ದಟ್ಟ ಕಪ್ಪು ಹೊಗೆ ಆಕಾಶದೆತ್ತರಕ್ಕೆ ವ್ಯಾಪಿಸಿದ್ದು, ಘಟನೆಯ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ.
ಅಪಘಾತದ ಬಗ್ಗೆ ಸಮಗ್ರ ತನಿಖೆ
ಅಮೆರಿಕದ ಸಾರಿಗೆ ಕಾರ್ಯದರ್ಶಿ ಶಾನ್ ಡಫಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಘಟನೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಮಧ್ಯಾಹ್ನ ಸುಮಾರು 12:50ರ ವೇಳೆಗೆ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದು, ವಿಮಾನವು ಟೆಕ್ಸಾಸ್ನ ಆಸ್ಟಿನ್ನಿಂದ ಬಹಾಮಾಸ್ಗೆ ತೆರಳುತ್ತಿತ್ತು ಎಂದು ಹೇಳಿದ್ದಾರೆ.
ಘಟನೆಯ ಬೆನ್ನಲ್ಲೇ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಇತರ ಯಾವುದೇ ಅಂಶಗಳಿವೆಯೇ ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.




