ಪ್ರಗತಿವಾಹಿನಿ ಸುದ್ದಿ; ಉಡುಪಿ: ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ (57) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಉಡುಪಿಯ ಮನೆಯಲ್ಲಿದ್ದಾಗ ಶಶಿಧರ್ ಹೆಮ್ಮಣ್ಣ ಅವರಿಗೆ ನಿನ್ನೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದರು.
ಮಣಿಪಾಲ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾಗಲೇ ಮಾರ್ಗ ಮಧ್ಯೆಯೇ ಹೆಮ್ಮಣ್ಣ ತೀವ್ರ ಅಸ್ವಸ್ಥಗೊಂಡಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರ್ರಾತ್ರಿ ಕೊನೆಯುಸಿರೆಳೆದಿದ್ದಾರೆ.
1991ರಲ್ಲಿ ಕುಂದಪ್ರಭ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಶಶಿಧರ್ ಹೆಮ್ಮಣ್ಣೆ ಕ್ಷಿತಿಜ ಎಂಬ ಸ್ವಂತ ವಾರ ಪತ್ರಿಕೆ ಆರ್ಂಭಿಸಿದ್ದರು. ಈ ಟಿವಿ ಕನ್ನಡ, ಡಿಡಿ ನ್ಯೂಸ್ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಕನೆಕ್ಟ್ ಇಂಡಿಯಾ ಸಂಸ್ಥೆಯನ್ನು ಇತ್ತೀಚೆಗೆ ಹುಟ್ಟುಹಾಕಿದ್ದರು.
ಪರಿಸರ ಪ್ರೇಮಿ, ಕೃಷಿ ಪ್ರೇಮಿ ಆಗಿದ್ದ ಶಶಿಧರ್, ಕರಾವಳಿಯಲ್ಲಿ ಕಾಂಡ್ಲಮನೆ ಯೋಜನೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕರಾವಳಿಯಲ್ಲಿ ಪ್ರಾಕೃತಿಕ ವಿಕೋಪದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರು.
ಮೃತರು ತಂದೆ-ತಾಯಿ, ಪತ್ನಿ ಹಾಗೂ ಪುತ್ರ, ನಾಲ್ವರು ಸಹೋದರರನ್ನು ಅಗಲಿದ್ದಾರೆ. ಹಿರಿಯ ಪತ್ರಕರ್ತನ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಶಶಿಧರ್ ಹೆಮ್ಮಣ್ಣ ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ಕಮಲಶಿಲೆಯ ಎಡಮೊಗೆಯ ಸ್ವಗೃಹದಲ್ಲಿ ನೆರವೇರಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ