
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ ಎಷ್ಟೇ ವಿಡೀಯೋ ಬಿಡುಗಡೆ ಮಾಡಿದರೂ, ಇನ್ನು 10 ಜನ್ಮ ಎತ್ತಿ ಬಂದರೂ ಮತ್ತೆ ಮುಖ್ಯಮಂತ್ರಿಯಾಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಿಡಿಗಡೆ ಮಾಡಿರುವ ವಿಡೀಯೋ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಜೆಡಿಎಸ್ ಶಾಸಕರು ಸದ್ಯದಲ್ಲೇ ಬಿಜೆಪಿಗೆ ಬರಲಿದ್ದಾರೆ. ಅವರ ಪಕ್ಷ ಜೀವಂತವಾಗಿದೆ ಎಂದು ತೋರಿಸಿಕೊಳ್ಳಲು ವಿಡಿಯೋ ಬಿಡುಗಡೆ ಮಾಡಿ, ಸಾರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಈಗಾಗಾಲೇ ಪೊಲೀಸರು ಎಲ್ಲಾ ವೀಡಿಯೋ ಸಾಕ್ಷ್ಯಗಳನ್ನು ರಾಜ್ಯದ ಮುಂದಿಟ್ಟಿದ್ದಾರೆ. ಗಲಾಟೆ ಹೇಗೆ ನಡೆಯಿತು, ಕಲ್ಲುಗಳನ್ನು ಮೂಟೆಗಳಲ್ಲಿ ಯಾವ ರೀತಿಯಾಗಿ ತಂದಿಟ್ಟುಕೊಂಡು ಸಂಗ್ರಹಿಸಿದ್ದರು. ಯಾವ ರೀತಿ ವ್ಯವಸ್ಥಿತವಾಗಿ ಸಂಚು ನಡೆಸಿ ಗೂಂಡಾಗಿರಿ ನಡೆಸಿದರು ಎಂಬುದನ್ನು ಎಲ್ಲಾ ಪತ್ರಿಕೆ, ಟೀವಿ ವಾಹಿನಿಗಳಲ್ಲಿ ಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಹೀಗಿರುವಾಗ ಕುಮಾರಸ್ವಾಮಿ ಅನಗತ್ಯವಾಗಿ ಬೆಂಕಿ ಹಚ್ಚುವ ಕೆಲಸ ಮಾಡಲು ಹೊರಟಿದ್ದಾರೆ ಎಂದರು.
ಇನ್ನು ಪ್ರಕರಣ ಸಂಬಂಧ ಅವರೇ ಹೇಳಿದಂತೆ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದ್ದು, ಅದರ ವರದಿಯೂ ಶೀಘ್ರವೇ ಬರಲಿದೆ. ಆಗ ಗಲಭೆ ಹಿಂದೆ ಇನ್ನೂ ಯಾರು ಯಾರಿದ್ದಾರೆಂಬುದು ಗೊತ್ತಾಗಲಿದೆ. ಈಗಾಗಲೇ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್ ನ್ನು ಮನೆಗೆ ಕಳಿಸಿದ್ದಾರೆ. ಜೆಡಿಎಸ್ ನ ಮೊಮ್ಮಗನಿಂದ ಹಿಡಿದು, ಅಪ್ಪ ಮಕ್ಕಳನ್ನು ಜನರು ಸೋಲಿಸಿ ಕಳುಹಿಸಿದ್ದಾರೆ ಆದರೂ ಅವರಿಗೆ ಬುದ್ಧಿ ಬಂದಿಲ್ಲ ಎಂದು ಗುಡುಗಿದರು.
ಕುಮಾರಸ್ವಾಮಿಯವರಲ್ಲಿ ನಾನೊಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ದಯವಿಟ್ಟು ರಾಜ್ಯ ಶಾಂತಿಯುತವಾಗಿರಲು ಬಿಡಿ. ಜನರಿಗೆ ನೆಮ್ಮದಿಯಾಗಿ ಬದುಕಲು ಬಿಡಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ