ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಜನರ ಓಡಾಟ, ಬೇಜವಾಬ್ದಾರಿ ತನದಿಂದಾಗಿ ಕೊರೊನಾ ಸೋಂಕು ಹೆಚ್ಚುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಷ್ಟೇ ಮುಂಜಾಗೃತಾ ಕ್ರಮ, ಎಚ್ಚರಿಕೆ ವಹಿಸಿದರೂ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಜನರ ಬೇಜವಾಬ್ದಾರಿತನ ಸಹ ಕಾರಣ. ಕೊರೊನಾ ಬಂದ ಆರಂಭದ ದಿನದಿಂದಲೂ ಜನತೆಗೆ ಜಾಗೃತೆಯಿಂದಿರಿ, ಎಚ್ಚರಿಕೆ ವಹಿಸಿ ಎಂದು ಹಲವು ಬಾರಿ ಹೇಳಿದರೂ ಗಮನಿಸಿಲ್ಲ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಜನರಿಗೆ ನಾನು ಮತ್ತೊಮ್ಮೆ ಪ್ರಾರ್ಥನೆ ಮಾಡುತ್ತೇನೆ. ನಿಮ್ಮ ಬೇಜವಾಬ್ದಾರಿತನ ನಿಮಗೆ ವೈಯಕ್ತಿಕವಾಗಿ ತೊಂದರೆ ಆಗುತ್ತೆ. ಕುಟುಂಬಕ್ಕೆ ಹಾಗೂ ಸಮಾಜಕ್ಕೆ ತೊಂದರೆ ಆಗುತ್ತೆ. ಆದಷ್ಟು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಎಂದರು.
ಇದೇ ವೇಳೆ ಮಲೆನಾಡಿನಲ್ಲಿ ಜನ್ಮತಾಳುವ ಶರಾವತಿ ನೀರನ್ನು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ತೆಗೆದುಕೊಂಡು ಹೋಗುವುದಕ್ಕೆ ಬಿಡುವುದಿಲ್ಲ. ಈ ಬಗ್ಗೆ ಯಾವ ಮಹಾನುಭಾವ ಪ್ರಸ್ತಾವನೆ ಸಲ್ಲಿಸಿದರೋ ನನಗಂತೂ ಗೊತ್ತಿಲ್ಲ. ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು ಹುಚ್ಚು ದರ್ಬಾರ ಆಗುತ್ತೆ ಎಂದರು.
ಈ ಕಾಮಗಾರಿಗೆ ಸಂಬಂಧಿಸಿದಂತೆ ಶರಾವತಿ ಭಾಗದಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಮಲೆನಾಡಿನ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಯಾರೋ ಒಬ್ಬರು ಬಂದು ಹೆಲಿಕ್ಯಾಪ್ಟರ್ ನಲ್ಲಿ ಹಾರಾಟ ನಡೆಸಿದರೆ, ಯಾರೋ ಒಬ್ಬರು ಸ್ಥಳಕ್ಕೆ ಬಂದು ನೋಡಿಕೊಂಡು ಹೋದರೆ ಅದಕ್ಕೆ ಸರ್ವೇ ಎನ್ನಲು ಸಾಧ್ಯವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನಾವು ಸದ್ಯದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ