ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಕವಿ ಕೆ ಎಸ್ ನಿಸಾರ್ ಅಹ್ಮದ್ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದ ನಿಸಾರ್ ಅಹ್ಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಅದರಂತೆ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. 15 ದಿನಗಳ ಹಿಂದೆ ಅಮೆರಿಕಾದಲ್ಲಿ ಮಗ ಸಾವನ್ನಪ್ಪಿದ್ದ. ಕೊರೊನಾ ಕಾರಣದಿಂದಾಗಿ ಮಗನ ಪಾರ್ಥೀವ ಶರೀರವನ್ನು ತಾಯ್ನಾಡಿಗೆ ತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮಗನ ಸಾವಿನಿಂದಲೂ ಹಿರಿಯ ಕವಿ ಆಘಾತಕ್ಕೊಳಗಾಗಿದ್ದರು.
ನಿಸಾರ್ ಅಹ್ಮದ್ 5 ಫೆಬ್ರುವರಿ 1936ರಂದು ದೇವನಹಳ್ಳಿಯಲ್ಲಿ ಜನಿಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಕೆ.ಎಸ್ ನಿರಾಸ್ ಅಹಮ್ಮದ್ ಅವರ ನಿತ್ಯೋತ್ಸವ ಹಾಡು ಸಾಕಷ್ಟು ಜನಪ್ರಿಯವಾಗಿದೆ. ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನ.
ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು ಮೊದಲಾದವು ಅವರ ಇತರ ಕವನ ಸಂಕಲನ.
‘ಅಚ್ಚುಮೆಚ್ಚು’, ‘ಇದು ಬರಿ ಬೆಡಗಲ್ಲೊ ಅಣ್ಣ’, ಷೇಕ್ಸ್ ಪಿಯರ್‍ನ ಒಥೆಲ್ಲೊದ ಕನ್ನಡಾನುವಾದ- ಇವು ಅವರ ಗದ್ಯ ಸಾಹಿತ್ಯ
ಕುರಿಗಳು ಸಾರ್ ಕುರಿಗಳು-ರಾಜಕೀಯ ವಿಡಂಬನೆ ಕವನ, ಭಾರತವು ನಮ್ಮ ದೇಶ (ಸರ್ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ), ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
1981 ರಾಜ್ಯೋತ್ಸವ ಪ್ರಶಸ್ತಿ , 2008 ರಲ್ಲಿ ಪ್ರದ್ಮಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2003 ರಲ್ಲಿ ನಾಡೋಜ ಪ್ರಶಸ್ತಿ, 2006 ರಲ್ಲಿ ಮಾಸ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ನಿತ್ಯೋತ್ಸವ ಕವಿಯನ್ನು ಅರಸಿ ಬಂದಿವೆ. ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿಯ ನಿಧನಕ್ಕೆ ಕವಿಗಳು, ಬರಹಗಾರರು ಕಂಬನಿ ಮಿಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ