Latest

ಕಾಶಿ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳಿಗೆ ಸಹಾಯಧನ ವಿತರಿಸಿದ ಸಿಎಂ, ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:    ರಾಜ್ಯದಿಂದ ಕಾಶಿ ಯಾತ್ರೆಗೆ ತೆರಳುವವರಿಗೆ ರಾಜ್ಯ ಸರ್ಕಾರ ತಲಾ 5 ಸಾವಿರ ರೂಪಾಯಿ ಸಹಾಯಧನ ಯೋಜನೆಯನ್ನು ಘೋಷಣೆ ಮಾಡಿದೆ. ಆ ಯೋಜನೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಯೋಜಿಸಲಾಗಿದ್ದ ಸಮಾರಂಭದಲ್ಲಿ ಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಣೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

 

ಮುಜರಾಯಿ ಇಲಾಖೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೊಂದು ಹೊಸ ಕಾರ್ಯಕ್ರಮ. ಇತ್ತಿಚೇಗೆ ಕಾಶಿಯನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಪೂರ್ಣವಾಗಿ ನವೀಕರಣ ಮಾಡಿದ್ದಾರೆ. ಕಾಶಿ ಎಂದರೆ ಒಂದು ಶ್ರದ್ಧಾಸ್ಥಳ. ಬಹಳಷ್ಟು ಜನ ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ. ಮೊದಲು ಏನು ಕೂಡ ವ್ಯವಸ್ಥೆ ಇಲ್ಲದೇ ಇದ್ದಾಗ ಅಂತಿಮಯಾತ್ರೆ ಅಂತ ಹೋಗುತ್ತಿದ್ದರು. ಈಗ ಬಹಳಷ್ಟು ಬದಲಾವಣೆ ಆಗಿದೆ. ನೇರವಾಗಿ ವಾರಣಾಸಿಗೆ ವಿಮಾನ, ರೈಲು, ಬಸ್ ವ್ಯವಸ್ಥೆಯಾಗಿದೆ. ಇದರಿಂದ ಕಾಶಿ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತದೆ. ಇಂದು ಕಾಶಿ ಯಾತ್ರೆಗೆ ಹೋಗಿ ಬಂದ ಹತ್ತು ಜನರಿಗೆ ಚೆಕ್ ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನೇರವಾಗಿ ಡಿ.ಬಿ.ಟಿ ಮೂಲಕ ಆನ್ ಲೈನ್ ನಲ್ಲಿ ವರ್ಗಾವಣೆ ಆಗಲಿದೆ ಎಂದರು.

 

ಕಾಶಿಯ ಗಂಗಾ ತಟವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ. ಸುಮಾರು 23 ಘಾಟ್ ಗಳನ್ನು ನವೀಕರಣ ಮಾಡಿ, ನೇರವಾಗಿ ರಸ್ತೆಯ ಮೂಲಕ ವಿಶ್ವನಾಥನ ದೇವಸ್ಥಾನಕ್ಕೆ ಹೋಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

 

ಸುರಕ್ಷಿತ ಕಾಶಿ ಯಾತ್ರೆಗೆ ಒತ್ತು

 

ಕರ್ನಾಟಕದಿಂದ ಕಾಶಿಗೆ ತೆರಳುವ ಯಾತ್ರಾರ್ಥಿಗಳಿಗೆ ಕೇವಲ ಸಹಾಯಧನ 5 ಸಾವಿರ ರೂಪಾಯಿ ಕೊಡುವುದಷ್ಟೇ ಅಲ್ಲ. ಸುರಕ್ಷಿತವಾಗಿ ರೈಲಿನಲ್ಲಿ ಕರೆದುಕೊಂಡು ಹೋಗುವುದು. ಯಾತ್ರೆಯ ದಾರಿಯಲ್ಲಿ ಮತ್ತು ಅಲ್ಲಿರುವ ಕರ್ನಾಟಕ ಛತ್ರದಲ್ಲಿ ಎಲ್ಲ ಒಳ್ಳೆಯ ವ್ಯವಸ್ಥೆ ಇದೆ. ಯಾವುದೇ ಅವ್ಯವಹಾರ ನಡೆಯದಂತೆ ಯಾತ್ರೆಗೆ ತೆರಳಿ ಮರಳಿ ಬರುವಾಗ ರಸೀದಿ ತರುವ ವ್ಯವಸ್ಥೆ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

 

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಉಮಾ ಶಂಕರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಆಯುಕ್ತೆ ರೋಹಿಣಿ ದಾಸರಿ ಸಿಂಧೂರಿ ಹಾಗೂ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗೋವಾ ಹೆದ್ದಾರಿ ಬಂದ್, ಖಾನಾಪುರದ 30 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button