Latest

ಕಾಶಿ ಯಾತ್ರಾರ್ಥಿಗಳಿಗೆ ವಿಶೇಷ ರೈಲು ವ್ಯವಸ್ಥೆ; 5,000 ಸಹಾಯಧನ; ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಿಂದ ಕಾಶಿ ಯಾತ್ರೆಗೆ ತೆರಳುವ ಯತ್ರಾರ್ಥಿಗಳಿಗಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗುತ್ತಿದ್ದು, ಶ್ರಾವಣ ಮಾಸದ ಕೊನೆಯ ವಾರದಲ್ಲಿ ಭಾರತ್‌ ಗೌರವ್‌ ರೈಲು ಯೋಜನೆ ಆರಂಭವಾಗಲಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಇಂದು ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿರುವ ಸರ್‌ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಕಾಶಿ ಯಾತ್ರೆಗೆ ಕಾಯ್ದಿರಿಸಲಾಗಿರುವ ರೈಲಿನ ಪರಿಶಿಲನೆ ಹಾಗೂ ರೈಲ್ವೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಜೀವನದಲ್ಲಿ ಒಮ್ಮೆಯಾದರೂ ಕಾಶಿ ಯಾತ್ರೆ ಮಾಡಬೇಕು ಎನ್ನುವುದು ಬಹುತೇಕ ಹಿಂದೂಗಳ ಆಸೆ. ಅಂತಹ ಪವಿತ್ರ ಭಾವನೆಯನ್ನು ಗೌರವಿಸಿ, ಅದನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಕ್ರ ಹಮ್ಮಿಕೊಳ್ಳಲಾಗಿದ್ದು, ಕಾಶಿಯಾತ್ರೆಗೆ ಯಾತ್ರಾರ್ಥಿಗಳನ್ನು ಕೊಂಡೊಯ್ಯುವ ಭಾರತ್‌ ಗೌರವ್‌ ರೈಲನ್ನು ಸಿದ್ದಪಡಿಸಲು ಅನುಮತಿ ನೀಡಲಾಗಿದೆ ಎಂದರು.

Related Articles

ಶ್ರಾವಣ ಮಾಸದ ಕೊನೆಯ ವಾರದಲ್ಲಿ ಯಾತ್ರೆ ಪ್ರಾರಂಭವಾಗಲಿದೆ. ಈ ಮೂಲಕ ಭಾರತ್‌ ಗೌರವ್‌ ರೈಲು ಸೇವೆಯನ್ನು ಆರಂಭಿಸುತ್ತಿರುವ ದೇಶದ ಮೊದಲ ರಾಜ್ಯ ಹಾಗೂ ಇಲಾಖೆ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ. ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಪ್ಯಾಕೇಜ್ ಗಳನ್ನು ರೂಪಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಹೇಳಿದರು.

ರಾಜ್ಯ ಮುಜರಾಯಿ ಇಲಾಖೆಯ ವತಿಯಿಂದ ರೈಲನ್ನು ಬಾಡಿಗೆಗೆ ಪಡೆದು ಭಾರತ್ ಗೌರವ್ ರೈಲು ಸೇವೆ ಆರಂಭಿಸಲಾಗುತ್ತಿದೆ. ರಿಯಾಯಿತಿ ದರದಲ್ಲಿ 7 ದಿನಗಳ ಕಾಶಿ ಯಾತ್ರೆ ಪ್ರವಾಸ ಏರ್ಪಡಿಸಲಾಗಿದೆ. ಇದಕ್ಕಾಗಿ 1 ಕೋಟಿ ರೂಪಾಯಿಗಳ ಬ್ಯಾಂಕ್‌ ಗ್ಯಾರಂಟಿಯನ್ನು ನೀಡಿ ರೈಲನ್ನು ಬಾಡಿಗೆಗೆ ತಗೆದುಕೊಳ್ಳಲಾಗಿದೆ. 7 ದಿನಗಳ ಪ್ರವಾಸಕ್ಕೆ ಅಂದಾಜು 15 ಸಾವಿರ ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ 5 ಸಾವಿರ ರೂಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು ಎಂದು ಹೇಳಿದರು.

ರೈಲಿನ ವಿಶೇಷತೆ:

ಬೆಂಗಳೂರು-ವಾರಣಾಸಿ-ಅಯೋಧ್ಯೆ-ಪ್ರಯಾಗರಾಜ್‌-ಬೆಂಗಳೂರು ಮಾರ್ಗದಲ್ಲಿ ರೈಲು 7 ದಿನಗಳ ಕಾಲ ಒಟ್ಟು 4,161 ಕಿಲೋಮೀಟರ್‌ಗಳಷ್ಟು ಸಂಚರಿಸಲಿದೆ. ರೈಲಿನಲ್ಲಿ 14 ಬೋಗಿಗಳಿದ್ದು, 11 ಬೋಗಿಗಳನ್ನು ಪ್ರಯಾಣಿಕರ ಪ್ರವಾಸಕ್ಕೆ ಅಣಿ ಮಾಡಲಾಗುತ್ತಿದೆ. 3 ಟಯರ್‌ ಎಸಿಯ ವ್ಯವಸ್ಥೆ ಇರಲಿದೆ. ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಯಾತ್ರಾರ್ಥಿಗಳ ಭಜನೆಗೆ ಅವಕಾಶ ನೀಡಲಾಗುವುದು. ಅಲ್ಲದೇ, ನಮ್ಮ ರಾಜ್ಯದ ಪ್ರಮುಖ ದೇವಸ್ಥಾನಗಳ ಬ್ರಾಂಡಿಂಗ್‌ ಮಾಡುವ ಉದ್ದೇಶದಿಂದ 11 ಬೋಗಿಗಳ ಮೇಲೆ ರಾಜ್ಯದ ಪ್ರಮುಖ 11 ದೇವಸ್ಥಾನಗಳ ಮಾಹಿತಿಯನ್ನು ಅಳವಡಿಸಲಾಗುವುದು.

ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ರೈಲ್ವೇಯ ಅಧೀನ ಸಂಸ್ಥೆಯ ಜೊತೆ ಐಆರ್‌ಸಿಟಿಸಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಮುಜರಾಯಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ, ಸೌತ್‌ ವೆಸ್ಟರ್ನ್‌ ರೈಲ್ವೇಯ ಚೀಪ್‌ ಕಮರ್ಷಿಯಲ್‌ ಮ್ಯಾನೇಜರ್‌ ಡಾ ಅನೂಪ್‌ ದಯಾನಂದ್‌ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿರಾಡಿ ಘಾಟ್ ರಸ್ತೆ ಬಂದ್ ಆಗುತ್ತಾ? ಏನಂದ್ರು ಸಚಿವ ಸಿ.ಸಿ.ಪಾಟೀಲ್?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button