`ಕಾಮಸೂತ್ರ: ಇದ್ದದ್ದು ಇದ್ದ ಹಾಗೆ’ ಸೋಮವಾರ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕಾಮಸೂತ್ರ – ವಾತ್ಸ್ಯಾಯನ ಮಹರ್ಷಿಗಳು ಬರೆದ ಒಂದು ಶಾಸ್ತ್ರಗ್ರಂಥ. ಇದರ ಯಥಾರೂಪ ಅನುವಾದ ಇದೀಗ ಕನ್ನಡಕ್ಕೆ ಬರುತ್ತಿದೆ. ವಿಶೇಷವೆಂದರೆ ಇದು ವಾತ್ಸ್ಯಾಯನ ಕೃತಿಯಿಂದ ಏನನ್ನೂ ಕೈಬಿಡದ, ಹಾಗೆಯೇ ಏನನ್ನೂ ಹೊಸದಾಗಿ ಸೇರಿಸದೆ, “ಇದ್ದದ್ದು ಇದ್ದ ಹಾಗೆ” ಎಂದು ಹೇಳಬಹುದಾದ ಪ್ರಥಮ ಕನ್ನಡ ಅನುವಾದ!

ಈ ಕೃತಿಯು ಇದೇ ಸೋಮವಾರ, ಡಿಸೆಂಬರ್ 6ರಂದು ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ಸಂಜೆ 5:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ. ಕಾರ್ಯಕ್ರಮದ ಮುಖ್ಯ ಆಮಂತ್ರಿತರಾಗಿ ಉಪಸ್ಥಿತರಿರುವವರು. ಶತಾವಧಾನಿ ಡಾ. ಆರ್. ಗಣೇಶ್, ರಂಗಕರ್ಮಿ – ಕಥೆಗಾರ ಎಸ್. ಎನ್. ಸೇತುರಾಮ್, ಚಿಂತಕಿ – ಲೇಖಕಿ ವೀಣಾ ಬನ್ನಂಜೆ ಹಾಗೂ ಕಾಮಸೂತ್ರ ಕೃತಿಯ ಅನುವಾದ ಡಾ. ವಿಶ್ವನಾಥ ಹಂಪಿಹೊಳಿ. ಈ ವಿಶಿಷ್ಟ ಕೃತಿಯನ್ನು ಪ್ರಕಟಿಸುತ್ತಿರುವುದು ಬೆಂಗಳೂರಿನ ಅಯೋಧ್ಯಾ ಪ್ರಕಾಶನ.

ಕೃತಿಯ ವಿಶೇಷ: ಕನ್ನಡದಲ್ಲಿ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಕೃತಿಗಳು ಪ್ರಕಟವಾಗಿದ್ದರೂ ಈಗ ಬರುತ್ತಿರುವ “ವಾತ್ಸ್ಯಾಯನ ಕಾಮಸೂತ್ರ” ಮೂಲಕ್ಕೆ ನೂರಕ್ಕೆ ನೂರರಷ್ಟು ನಿಷ್ಠವಾಗಿರುವ ಕೃತಿ. ವಾತ್ಸ್ಯಾಯನರ ಮೂಲಕೃತಿಯಲ್ಲಿರದ ಯಾವ ಹೊಸ ಅಂಶವನ್ನೂ ಇಲ್ಲಿ ಸೇರಿಸಿಲ್ಲ; ಹಾಗೆಯೇ ಇದ್ದ ಯಾವೊಂದನ್ನೂ ಇಲ್ಲಿ ಬಿಟ್ಟಿಲ್ಲ. ಸ್ವತಃ ಸಂಸ್ಕೃತ ವಿದ್ವಾಂಸ ಮತ್ತು ಕಾಮಶಾಸ್ತ್ರ ವಿಷಯತಜ್ಞರಾದ ಡಾ. ವಿಶ್ವನಾಥ ಹಂಪಿಹೊಳಿ ಕೃತಿಯ ಪ್ರಾರಂಭದಲ್ಲಿ ಒಂದು ಸುದೀರ್ಘ ಪ್ರಸ್ತಾವನೆಯನ್ನು ಬರೆದಿದ್ದಾರೆ. ಇದರಲ್ಲಿ ಅವರು ಇದುವರೆಗೆ ಕನ್ನಡದಲ್ಲಿ ಬಂದಿರುವ ಕಾಮಶಾಸ್ತ್ರ ಕೃತಿಗಳ ಸ್ಥೂಲ ವಿಮರ್ಶೆಯನ್ನೂ ಮಾಡಿದ್ದಾರೆ. ಕೃತಿಗೆ ಶತಾವಧಾನಿ ಡಾ. ಆರ್. ಗಣೇಶರ ಮುನ್ನುಡಿಯಿದೆ. ಮರಳು ಕಲಾವಿದರಾಗಿ ಹೆಸರು ಮಾಡಿರುವ ರಾಘವೇಂದ್ರ ಹೆಗಡೆಯವರು ಕೃತಿಯ ಹೂರಣಕ್ಕೆ ಸೂಕ್ತವಾದ ಹಲವು ಆಕರ್ಷಕ ಚಿತ್ರಗಳನ್ನು ಬರೆದಿದ್ದಾರೆ. ಯುವಕಲಾವಿದ ಶಾಶ್ವತ್ ಹೆಗಡೆಯವರು ಕೃತಿಗೆ  ಮುಖಪುಟವನ್ನು ರಚಿಸಿಕೊಟ್ಟಿದ್ದಾರೆ.

“ಕಾಮಶಾಸ್ತ್ರದ ಬಗ್ಗೆ, ಹಾಗೆಯೇ ವಾತ್ಸ್ಯಾಯನಮಹರ್ಷಿ ವಿರಚಿತ ಕಾಮಸೂತ್ರದ ಬಗ್ಗೆ ಈಗಾಗಲೇ ಜನರಲ್ಲಿ ಹಲವು ತಪ್ಪು ಕಲ್ಪನೆಗಳಿವೆ. ಹಾಗೆ ಪೂರ್ವಗ್ರಹಗಳನ್ನೂ ತಪ್ಪು ಅಭಿಪ್ರಾಯಗಳನ್ನೂ ಬೆಳೆಸಿಕೊಂಡವರಲ್ಲಿ ಹೆಚ್ಚಿನವರು ಕೃತಿಗಳನ್ನು ತೆರೆದುನೋಡಿಲ್ಲ. ಅವರಿವರು ಹೇಳಿದ ಮಾತುಗಳಿಂದಲೇ ಕಾಮಸೂತ್ರಕ್ಕೆ ಒಂದು ಅಶ್ಲೀಲತೆಯ ಚೌಕಟ್ಟು ಬಿದ್ದುಬಿಟ್ಟಿದೆ. ಆದರೆ ವಾಸ್ತವ ಸ್ಥಿತಿ ಹಾಗಿಲ್ಲ. ಕಾಮಸೂತ್ರದಲ್ಲಿ ಕೃತಿಕಾರರು ಕಾಮದ ಹೊರತಾಗಿ ಸಮಾಜವ್ಯವಸ್ಥೆಯ ಹಲವುಹತ್ತು ಸಂಗತಿಗಳನ್ನು ಚರ್ಚಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಮತ್ತೆ ಮತ್ತೆ ಉಲ್ಲೇಖಿಸಲ್ಪಡುವ “ಅರವತ್ತನಾಲ್ಕು ಕಲೆ”ಗಳ ಮೊದಲ ಪ್ರಸ್ತಾಪ ಬರುವುದೇ ಕಾಮಸೂತ್ರದಲ್ಲಿ. ವಾತ್ಸ್ಯಾಯನರು ಆ 64 ಕಲೆಗಳನ್ನು ಕಾಮಸೂತ್ರದಲ್ಲಿ ಪಟ್ಟಿಮಾಡಿಕೊಟ್ಟಿದ್ದಾರೆ. ಹೀಗೆ ಇದು ಕಾಮಶಾಸ್ತ್ರವನ್ನು ಬೋಧಿಸುವ ಕೃತಿ ಆಗಿರುವಂತೆಯೇ ಸಮಾಜದಲ್ಲಿ ಓರ್ವ ವ್ಯಕ್ತಿ ಘನತೆಯಿಂದ ಬದುಕುವುದು ಹೇಗೆ ಎಂಬುದನ್ನೂ ತಿಳಿಸುವ ಕೃತಿ. ಇಂಥ ಅಮೂಲ್ಯ ಕೃತಿಯನ್ನು ಕನ್ನಡಿಗರು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಬೇಕು – ಎಂದು ಅಯೋಧ್ಯಾ ಪ್ರಕಾಶನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button