Kannada NewsKarnataka NewsLatest

ಡೋಲು ಭಾರಿಸಿದ ಶಾಸಕ ದ್ವಯರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-  ಭಾರತದ ಮಹಾನ್ ಚೇತನಗಳಲ್ಲಿ ಒಬ್ಬರು ಕನಕದಾಸರು. ಅವರನ್ನು ದೈವಿಕ ನೆಲೆಯಲ್ಲಿ ನೋಡದೆ, ವೈಚಾರಿಕವಾಗಿ ನೋಡುವುದು ಇಂದಿನ ದಿನಮಾನಗಳಲ್ಲಿ ಬಹು ಮುಖ್ಯವಾಗಿದೆ ಎಂದು ಮುಗಳಖೋಡದ ಬ.ನಿ. ಕುಲಿಗೋಡ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಡಾ.ಮದುಸೂದನ ಬೀಳಗಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕುಮಾರ ಗಂಧರ್ವ ಕಲಾಮಂದಿರದಲ್ಲಿ( ನ.15) ರಂದು ಏರ್ಪಡಿಸಲಾಗಿದ್ದ ಶ್ರೀ ಭಕ್ತ ಕನಕದಾಸರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶ್ರೀ ಭಕ್ತ ಕನಕದಾಸರ ಹುಟ್ಟು, ಅವರ  ವೈರಾಗ್ಯ ಜೀವನ, ಆದರ್ಶಗಳ ಬಗ್ಗೆ ಪರಿಚಯಿಸಿದರು.
ಕನಕದಾಸರನ್ನು ಭಾವನಾತ್ಮಕವಾಗಿ ನೋಡದೇ ಅವರ ಸಾಮಾಜಿಕ ಚಿಂತನೆಗಳ ಬಗ್ಗೆ ಅವರ ಆಚಾರ, ವಿಚಾರಗಳ ಬಗ್ಗೆ ಚಿಂತಿಸುವ ಅಗತ್ಯವಿದ್ದು, ಒಂದು ವರ್ಗಕ್ಕೆ ಅವರ ಆದರ್ಶಗಳನ್ನು ಮೀಸಲಿಡದೇ ಎಲ್ಲರೂ ಅಳವಡಿಸಿಕೊಳ್ಳವ ಅಗತ್ಯವಿದೆ ಎಂದರು.
 ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯುವ ಪೀಳಿಗೆ ಸಮಾಜಿಕ ಜಾಲತಾಣಗಳಿಗೆ ಜೊತು ಬೀಳದೇ ಕನಕದಾಸರಂತಹ ಮಹಾನ್ ವ್ಯಕ್ತಿಗಳ ಆದರ್ಶವನ್ನು ಅಳವಡಿಸಿಕೊಂಡು, ಅವರ ವಿಚಾರಗಳ ಬಗ್ಗೆ ಚಿಂತಿಸುವುದು ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಹೇಳಿದರು.
ಈ ಸಂದರ್ಭದಲ್ಲಿ  ಕೆ.ಎಸ್ ಆರ್.ಟಿ.ಸಿಯ ಸಿಬ್ಬಂದಿ ಕನಕದಾಸರ ವೇಷಭೂಷಣ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು.
ಹೇಮಂತ ಲಮಾಣಿ ಹಾಗೂ ತಂಡ ದಾಸವಾಣಿಯನ್ನು ಪ್ರಸ್ತುತ ಪಡಿಸಿದರು ಹಾಗೂ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಎಸ್.ವಿ ಜಮಾದಾರ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಎಸ್‌ .ಪಿ ಅಶೋಕ ಸದಲಗಿ, ಯಲ್ಲಪ್ಪ ಕುರಬರ,  ಸಂಗೊಳ್ಳಿ ರಾಯಣ್ಣ ಕಾಲೇಜಿನ ವಿದ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದರು.
ಕನಕದಾಸ ವೃತ್ತದಿಂದ ಕೋಟೆ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರದವರೆಗೂ ಶ್ರೀ  ಭಕ್ತ ಕನಕದಾಸರ ಭಾವ ಚಿತ್ರದ ಮೆರವಣಿಗೆ ನಡೆಯಿತು.
ಶಾಸಕರಾದ ಅಭಯ್ ಪಾಟೀಲ ಹಾಗೂ ಅನಿಲ್ ಬೆನಕೆ ಡೋಲು ಭಾರಿಸುವ ಮೂಲಕ ಮೆರವಣಿಗೆ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಎಸಿಪಿ ಎನ್.ವಿ.ಬರಮನಿ ಹಾಗೂ ಸಮಾಜದ ನೂರಾರು ಜನರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button