
ಪ್ರಗತಿವಾಹಿನಿ ಸುದ್ದಿ: ಜಿಲ್ಲೆಯ ಕನಕಗಿರಿ ಉತ್ಸವವನ್ನು ಮಾರ್ಚ್ 2 ಮತ್ತು 3 ರಂದು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕನಕಗಿರಿ ಉತ್ಸವ ನಡೆಸುವ ಸಂಬಂಧ ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಶನಿವಾರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಮಾರ್ಚ್ ತಿಂಗಳಿನಲ್ಲಿ ಉತ್ಸವ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಅದೇ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ. ಅದ್ಧೂರಿಯಾಗಿ ಜನ ಮೆಚ್ಚುವ ಹಾಗೇ ಉತ್ಸವ ಇರಲಿದೆ ಎಂದು ತಿಳಿಸಿದರು.
ಈಗಾಗಲೇ ಉತ್ಸವ ಆಚರಣೆಗೆ ರೂ. 2.5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಎರಡು ದಿನ ನಡೆಯುವ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಕವಿಗೋಷ್ಠಿ, ಸ್ತಬ್ಧ ಚಿತ್ರ, ಕುಸ್ತಿ ಪಂದ್ಯಾವಳಿ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆ, ಮನರಂಜನೆ ಕಾರ್ಯಕ್ರಮ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚಿಂತನೆ ಇದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಸಮಿತಿಯೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನವಲಿ ಜಲಾಶಯದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಮನಾಂತರ ಜಲಾಶಯ ನಿರ್ಮಾಣ ಮಾಡುವುದು ಒಂದು ರಾಜ್ಯದ ನಿರ್ಧಾರವಲ್ಲ. ಆಂಧ್ರ ಮತ್ತು ತೆಲಂಗಾಣ ರಾಜ್ಯದ ಜತೆ ಚರ್ಚೆ ನಡೆಸಬೇಕಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ಇದಕ್ಕೆ ಕಾಲಾವಕಾಶ ತೆಗೆದುಕೊಳ್ಳಲಿದೆ ಎಂದು ವಿವರಿಸಿದರು.
ಪ್ರತ್ಯೇಕ ರಾಷ್ಟ್ರಕ್ಕೆ ನಮ್ಮ ಸಹಮತ ಇಲ್ಲ. ಸಂಸದ ಡಿ.ಕೆ.ಸುರೇಶ್ ಅವರು, ನಮ್ಮ ರಾಜ್ಯದ ಪಾಲಿನ ತೆರಿಗೆ ಹಣ ನೀಡದ ಕೇಂದ್ರ ಸರ್ಕಾರದ ವಿರೋಧಿ ಧೋರಣೆ ಹಾಗೂ ನಮ್ಮ ರಾಜ್ಯದ ಸಂಸದರ ನಡೆಗೆ ಆಕ್ರೋಶಗೊಂಡು ಆ ರೀತಿ ಹೇಳಿಕೆ ನೀಡಿದ್ದಾರೆ. ನಮ್ಮ ಪಾಲಿನ ತೆರಿಗೆ ಪಾಲು ಕೇಳುವುದು ನಮ್ಮ ಹಕ್ಕು. ನಮಗೆ ಕೊಡಬೇಕಾದ ಪಾಲು ಕೊಡಲು ಇವರ ಗಂಟು ಏನು ಹೋಗಲಿದೆ. ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ಮಾತನಾಡುವ ಧೈರ್ಯ ಇಲ್ಲ. ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನು ವಿವಾದ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ದಿವಂಗತ ಮಾಜಿ ಮಂತ್ರಿಗಳಾದ ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯದ ಬಗ್ಗೆ ಹೇಳಿಕೆ ನೀಡಿದಾಗ ಬಿಜೆಪಿಗರು ಬಾಯಿಗೆ ಬೀಗ ಹಾಕಿಕೊಂಡಿದ್ದರು. ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಂಸತ್ತಿನಲ್ಲಿ ಡಿ.ಕೆ.ಸುರೇಶ್ ಅವರ ಹೇಳಿಕೆಗೆ ಬೊಬ್ಬೆ ಹೊಡೆಯುತ್ತಿದ್ದಾರೆ. ಅವರಿಗೆ ಧೈರ್ಯ ಇದ್ದರೆ, ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ಬಳಿ ನಿಂತು ನಮ್ಮ ಪಾಲಿನ ತೆರಿಗೆ ಹಣ ಕೊಡಿಸಲಿ ಎಂದು ಸವಾಲು ಹಾಕಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದ ಬಜೆಟ್ ಕೇವಲ ಕಣ್ಣೊರೆಸುವ ತಂತ್ರ. ನಾವು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ನುಡಿದಂತೆ ನಡೆದಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ವಿದೇಶದಲ್ಲಿರುವ ಕಪ್ಪು ಹಣ, ಉದ್ಯೋಗ ಸೃಷ್ಟಿ, ಉಚಿತ ಅಡುಗೆ ಅನಿಲ, ಬಡವರ ಖಾತೆಗೆ ಹಣ ಹಾಕುತ್ತೇವೆ ಎಂದಲ್ಲ ಪುಕ್ಕಟ್ಟೆ ಭರವಸೆ ನೀಡಿದ್ದರು. ಇದೀಗ ಖುದ್ದು ಪ್ರಧಾನಿಯವರೇ ತಮ್ಮ ಭರವಸೆಯ ಭಾಷಣದ ವಿಡಿಯೋ ನೋಡಿದರೆ ಅವರ ವೋಟನ್ನು ಅವರೇ ಅವರಿಗೆ ಹಾಕಿಕೊಳ್ಳುವುದಿಲ್ಲ ಎಂದು ಲೇವಡಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ