Latest

*ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅಂಗೀಕಾರ; ಕನ್ನಡ ಸಂಘಟನೆಗಳಿಂದ ಸಿಎಂಗೆ ಧನ್ಯವಾದ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ರಾಜ್ಯ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದ್ದು ಕನ್ನಡಕ್ಕೆ ಆನೆಬಲ ಬಂದಂತಾಗಿದೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇಂತಹ ವಿಧೇಯಕವೊಂದನ್ನು ಜಾರಿಗೆ ತರುವಲ್ಲಿ ಐತಿಹಾಸಿಕ
ಹೆಜ್ಜೆಯನ್ನು ಇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಧನ್ಯವಾದ ತಿಳಿಸಿದೆ.

1956 ರಲ್ಲಿ ರಾಜ್ಯವು ಅಸ್ತಿತ್ವಕ್ಕೆ ಬಂದ ನಂತರ ಕನ್ನಡ ಅನುಷ್ಠಾನದಲ್ಲಿ ಹಾಗೂ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವಲ್ಲಿ ಅನೇಕ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಕನ್ನಡಿಗರಿಗೆ,ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಪಡೆಯುವದು ಸಾಧ್ಯವಾಗಿರಲಿಲ್ಲ.ಈ ಉದ್ದೇಶವನ್ನು ಸಾಫಲ್ಯಗೊಳಿಸಲು ಕನ್ನಡಕ್ಕೆ ಕಾನೂನಿನ ಬಲ ತಂದುಕೊಡಬೇಕೆಂಬ ಕನ್ನಡಿಗರ ಆಶಯಕ್ಕೆ ಯಾವ ಸರಕಾರವೂ ಬೆಂಬಲ ನೀಡಿರಲಿಲ್ಲ.

ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಈ ದಿಸೆಯತ್ತ ಸಕಾರಾತ್ಮಕ ಹೆಜ್ಜೆಗಳನ್ನು ಇರಿಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸಹ ವಿಧೇಯಕವನ್ನು ಸಿದ್ಧಪಡಿಸಿತು. ಇದನ್ನು ಬೊಮ್ಮಾಯಿ ಅವರು ಸಂಪೂರ್ಣವಾಗಿ ಬೆಂಬಲಿಸಿದರು.ಕೊನೆಗೆ ರಾಜ್ಯ ವಿಧಾನಸಭೆಯು ವಿಧೇಯಕವನ್ನು ಅಂಗೀಕರಿಸುವ ಮೂಲಕ ಕನ್ನಡಿಗರ ಕನಸನ್ನು ನನಸಾಗಿಸಿದೆ.

ಕರ್ನಾಟಕ ಅಥವಾ ಯಾವದೇ ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಈ ವಿಧೇಯಕವು ಅವಕಾಶ ಕಲ್ಪಿಸಿರುವದು ಅತ್ಯಂತ ಮಹತ್ವದ ಅಂಶವಾಗಿದೆ. ಹೊರನಾಡ ಕನ್ನಡಿಗರಿಗೆ ಇದೊಂದು ವರವಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಹೊರನಾಡ ಕನ್ನಡಿಗರಿಗೆ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಕಳೆದ ಜನೇವರಿ 25 ರಂದು ಬೆಂಗಳೂರಿನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಭೆ ಸೇರಿದ್ದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ,ತಮಿಳುನಾಡು,ಕೇರಳ ಮತ್ತು ಗೋವೆಯ ಕನ್ನಡಿಗರ ಪ್ರಾತಿನಿಧಿಕ ಸಭೆಯು ಮುಖ್ಯಮಂತ್ರಿಗಳನ್ನು ಆಗ್ರಹಿಸಿತ್ತು.ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಹಾಗೂ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರು ಇದೇ ಫೆಬ್ರುವರಿ ಎರಡರಂದು ಮುಖ್ಯಮಂತ್ರಿಗಳಿಗೆ ವರದಿಯೊಂದನ್ನು ಸಲ್ಲಿಸಿದ್ದರು.

ಕನ್ನಡ, ಕನ್ನಡಿಗರ ಶಿಕ್ಷಣ, ಉದ್ಯೋಗದ ಸಂಬಂಧದ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ ಬೊಮ್ಮಾಯಿ ಅವರಿಗೆ ಧನ್ಯವಾದ ಸಲ್ಲಿಸಲು ರಾಜ್ಯದ ಮತ್ತು ನೆರೆಯ ರಾಜ್ಯಗಳ ಕನ್ನಡ ಸಂಘಟನೆಗಳು ಬರುವ ಮಾರ್ಚ ಎರಡನೇ ವಾರದಲ್ಲಿ ಬೆಂಗಳೂರಿಗೆ ತೆರಳಲಿವೆ ಎಂದು ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.

*ಸಿದ್ದರಾಮಯ್ಯ ಕಾರ್ಯವೈಖರಿ ಶ್ಲಾಘಿಸಿದ ಮಾಜಿ ಸಿಎಂ; ದೇವೇಗೌಡರು ನಮಗೆ ಆದರ್ಶ ಎಂದ ಯಡಿಯೂರಪ್ಪ*

https://pragati.taskdun.com/b-s-yedyurappavidhanasabhelast-speech/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button