ಅಧಿಕಾರದಲ್ಲಿದ್ದಾಗ ಜನ ಬದುಕಿದ್ದಾರಾ ಸತ್ತಿದ್ದಾರಾ ಅಂತಾ ನೋಡಲು ಹೋಗಲಿಲ್ಲ

ನೀರಾವರಿ ಖಾತೆ ಮಾಜಿ ಸಚಿವ ಎಂ.ಬಿ.ಪಾಟೀಲ ವಿರುದ್ದ ಶಾಸಕ ನಡಹಳ್ಳಿ ಕಿಡಿ

ಪ್ರಗತಿವಾಹಿನಿ ಸುದ್ದಿ,  ತಾಳಿಕೋಟೆ-  ನೆರೆ ಮತ್ತು ಬರ ಎಂಬುದು ಕೇವಲ ಈ ವರ್ಷಕ್ಕೆ ಸೀಮೀತವಾದುದಲ್ಲ. ಅದು ಸುಮಾರು ೭ ದಶಗಳಿಂದ ಆವರಿಸುತ್ತಾ ಬಂದಿದ್ದಾಗಿದೆ. ಈ ವಿಚಾರವಾಗಿ ಯಾವ ಯಾವ ಸರ್ಕಾರ ಆಡಳಿತದಲ್ಲಿದ್ದಾಗಿ ಎಷ್ಟು ಸ್ಪಂದಿಸುತ್ತಾ ಬಂದಿದ್ದಾರೆಂಬ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಹೇಳಿದರು.
ಸೋಮವಾರ  ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ೨೦೦೪ ರಲ್ಲಿಯೂ ಇಂತಹ ನೆರೆ ಪ್ರವಾಹವನ್ನು ಹಾಗೂ ಬರವನ್ನು ಎದುರಿಸಿದ್ದೇವೆ. ೨೦೦೯ ರಲ್ಲಿಯೂ  ನೆರೆ ಪ್ರವಾಹ ಮತ್ತು ಬರವನ್ನು ಎದುರಿಸಿದ್ದೇವೆ. ಆ ಸಮಯದಲ್ಲಿ ಕೇಂದ್ರದಲ್ಲಿ ಮನಮೋಹನ ಸಿಂಗ್ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಕೇವಲ ೩೦೦ ಕೋಟಿ ಪರಿಹಾರವನ್ನು ರಾಜ್ಯಕ್ಕೆ ನೀಡಿದ್ದಾರೆ. ಆದರೆ ೨೦೦೯ ರಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಬಂದ ೧೬೦ ಗ್ರಾಮಗಳನ್ನು ಸ್ಥಳಾಂತರಿಸಿ ಪುನರ್ವಸತಿ ಗ್ರಾಮಗಳನ್ನಾಗಿ ನಿರ್ಮಾಣಮಾಡಿ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ.

ಈ ನೆರೆ ಪ್ರವಾಹವೆಂಬುದು ಈ ವರ್ಷಕ್ಕೆ ಸೀಮಿತವಾಗಿಲ್ಲ. ೭ ದಶಕಗಳಿಂದ ನೆರೆ ಪ್ರವಾಹವನ್ನು ಎದುರಿಸಿದ್ದೇವೆ. ೬೦ ವರ್ಷಗಳಿಂದ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೇಸ್ಸಿಗರು ನೆರೆ ಪರಿಹಾರ ಎಷ್ಟುಕೊಟ್ಟಿದ್ದಾರೆ ಮತ್ತು ಒಂದೇ ಒಂದು ಹಳ್ಳಿಯನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿದ್ದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನೆರೆ ಬಂದಾಗೊಮ್ಮೆ ರಾಜ್ಯಕ್ಕೆ ೨೦೦ ಕೋಟಿ, ೩೦೦ ಕೋಟಿ, ಕೊನೆಯದಾಗಿ ೪೦೦ ಕೋಟಿ ಕೊಟ್ಟ ದಾಖಲೆ ಇದೆ. ಆದರೆ ಈ ವರ್ಷ ನೆರೆ ಬಂದ ಪ್ರದೇಶದ ಪ್ರತಿಯೊಂದು ಮನೆಯ ಕುಟುಂಬದವರಿಗೆ ರಾಜ್ಯಸರ್ಕಾರ ತಕ್ಷಣ ೧೦ ಸಾವಿರ ರೂ.ಯನ್ನು ನೀಡಿದೆ ಮತ್ತು ಹಾನಿಯಾದ ಮನೆಯ ದುರಸ್ಥಿಗೆ ೧ ಲಕ್ಷ ರೂ. ಸಂಪೂರ್ಣ ಬಿದ್ದ ಮನೆಗಳ ಕಟ್ಟಿಸಿಕೊಳ್ಳಲು ೫ ಲಕ್ಷ ರೂ. ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ವಾಸ್ತವ ಸಂಗತಿ

ಕೇಂದ್ರದಿಂದ ಪ್ರತಿಭಾರಿ ನೇರೆ ಪರಿಹಾರ ಗಮನಿಸಿದರೆ ರಾಜ್ಯದಲ್ಲಿಯ ವಾಸ್ತವ ಸಂಗತಿಯ ವರದಿಯನ್ನು ತರಿಸಿಕೊಂಡು ೭ ದಶಕಗಳಲ್ಲಿ ಕೊಡಲಾರದಂತಹ ಹಣವನ್ನು ಪ್ರಧಾನಿ ಮೋದಿಜಿ ಅವರು ೧೨೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಕರ್ನಾಟಕ ಜನರ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆಂದರು.
ಮುದ್ದೇಬಿಹಾಳ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ೨೦೦೯ ರಲ್ಲಿ ನೆರೆ ಪ್ರವಾಹಕ್ಕೆ ತುತ್ತಾದಾಗ ಯಡಿಯೂರಪ್ಪನವರು ಹಡಗಿನಾಳ, ಬೋಳವಾಡ, ಬೂದಿಹಾಳ, ಸಾತಿಹಾಳ, ನಾಗರಾಳ ಡೋಣ, ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸಗಳನ್ನು ಮಾಡಿದ್ದಾರೆ. ೭ ದಶಕ  ಆಡಳಿತದಲ್ಲಿದ್ದ ಕಾಂಗ್ರೇಸ್ಸಿಗರಿಗೆ ನಾಚಿಕೆಯಾಗಬೇಕು.

ಮಾನಮರ್ಯಾದೆ ಎಂಬುದು ಇದ್ದರೆ ೭ ದಶಕಗಳಲ್ಲಿ ಒಂದೇ ಒಂದು ಹಳ್ಳಿ ಸ್ಥಳಾಂತರ ಮಾಡಿರುವುದನ್ನು ತೋರಿಸಲಿ. ಕೇವಲ ಬೊಗಳೆ ಹೇಳಿಕೆಗಳ ಮೂಲಕ ಚರ್ಚೆ ಮಾಡಲು ಹೊರಟಿರುವ ಕಾಂಗ್ರೇಸ್ಸಿಗರು ತಮ್ಮ ೭ ದಶಕಗಳ ನೆರೆಪ್ರವಾಹಕ್ಕೆ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

೨೦ ಸಾವಿರ ಕೋಟಿ ರೂ

ಯಡಿಯೂರಪ್ಪನವರು ಮೊನ್ನೆ ಆಲಮಟ್ಟಿಯಲ್ಲಿ ಭಾಗಿನ ಅರ್ಪಣೆಗೆ ಬಂದಾಗ ೩ ನೇ ಹಂತದ ನೀರಾವರಿ ಯೋಜನೆಗಳ ಕಾರ್ಯಗತಕ್ಕೆ ಪ್ರತಿವರ್ಷ ೨೦ ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿಟ್ಟು ಕಾರ್ಯಗತಗೊಳಿಸುತ್ತೇನೆಂದು ಈ ಭಾಗದ ಜನರಲ್ಲಿಯ ಆಶಾಭಾವನೆ ಜೀವಕಳೆಯನ್ನು ಕೊಟ್ಟಿದ್ದಾರೆ.

೨೦೦೯ ರಲ್ಲಿ ಹೊಸಪೇಟೆಯಿಂದ-ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿದ ಕಾಂಗ್ರೇಸ್ ನಾಯಕರು ಗುಡಿಯಲ್ಲಿ ತೆಂಗಿನಕಾಯಿ ಇಟ್ಟು ಆಣೆ ಪ್ರಮಾಣ ಮಾಡಿ ಈ ಭಾಗದ ನೀರಾವರಿ ಯೋಜನೆಗೆ ಪ್ರತಿವರ್ಷ ೧೦ ಸಾವಿರ ಕೋಟಿ ಕೊಡ್ತೇವೆ ಎಂದು ಹೇಳಿ ಈ ಭಾಗದ ಜನರಿಗೆ ವಂಚಿಸಿರುವುದು ಈ ಭಾಗದ ಜನರು ಇನ್ನೂ ಮರೆತಿಲ್ಲ ಎಂದ ಅವರು, ಬ್ರಿಜೇಶ್ ಕುಮಾರ ವರದಿಬಂದ ಮೇಲೆ ಕೃಷ್ಣಾಕೊಳ್ಳದ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಕೊಟ್ಟು ಚಿಮ್ಮಲಗಿ ಮತ್ತು ಮುಳವಾಡ ಏತನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಮಂಜೂರಾತಿ ನೀಡಿ ೨೦೧೨ ರಲ್ಲಿ ಚಿಮ್ಮಲಗಿಗೆ ೮೦೦ ಕೋಟಿ, ಮುಳವಾಡಕ್ಕೆ ೧೦೦೦ ಕೋಟಿ ಅಪ್ರೂವಲ್ ಮಾಡಿ ನೀರಾವರಿ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದು ಯಡಿಯೂರಪ್ಪನವರ ಸರ್ಕಾರವಾಗಿದೆ.

ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ಆಡಳಿತಾತ್ಮಕ ಮಂಜೂರಾತಿ ಸಿಕ್ತು. ಸದಾನಂದ ಗೌಡ್ರು ಮುಖ್ಯಮಂತ್ರಿಯಾದಾಗ ಫೈನಾನ್ಸಿಯಲ್ ಅಪ್ರೂಲ್ ಕೊಟ್ಟು ಟೆಂಡರ್ ಕರೆದು ಭೂಮಿಪೂಜೆ ನೆರವೇರಿಸಿದರು.
ಈಗ ಯಾರ‍್ಯಾರೋ ಭಗೀರಥರಾಗುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಅಪ್ರೂವಲ್ ಕೊಟ್ಟವರ‍್ಯಾರು? ಅದಕ್ಕೆ ಹಣ ಬಿಡುಗಡೆ ಮಾಡಿದವರ‍್ಯಾರು? ನಿಜವಾದ ಭಗೀರಥರ‍್ಯಾರು? ಎಂಬುದು ಇಲ್ಲಿಯ ಜನಕ್ಕೆ ಗೊತ್ತಿದೆ.

೧ ರೂ. ಹಣ ಕೊಡಲಿಲ್ಲ

ಹಿಂದಿನ ಸರ್ಕಾರದಲ್ಲಿ ನಮ್ಮ ಜಿಲ್ಲೆಯವರೆ ನೀರಾವರಿ ಸಚಿವರಾಗಿದ್ದರೂ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಪ್ರತಿವರ್ಷವೂ ಗ್ರಾಮಗಳು ಮುಳಗಡೆಯಾಗುತ್ತವೆ. ಒಂದು ದಿನವೂ ಬೆಟ್ಟಿಕೊಟ್ಟು ಜನರ ಕಷ್ಟವನ್ನು ಕೇಳಲಿಲ್ಲಾ. ೧ ರೂ. ಹಣ ಕೊಡಲಿಲ್ಲಾ. ನಾಗಬೇನಾಳ, ಬಿಜ್ಜೂರ ಪಂಚಾಯ್ತಿಗಳಲ್ಲಿಯ ೧೬ ಗ್ರಾಮಗಳು ಬಾದಿತವಾಗಿವೆ. ಆ ಗ್ರಾಮಗಳಿಗೆ ಇಲ್ಲಿಯವರೆಗೂ ಮೂಲಭೂತ ಸೌಕರ್ಯಗಳಿಲ್ಲಾ. ೨೫ ವರ್ಷ ಅಲ್ಲಿಯ ಜನರು ಆಶಿರ್ವಾದ ಮಾಡಿದ್ದರು.

ನಮ್ಮ ಜಿಲ್ಲೆಯವರೆ ನೀರಾವರಿ ಸಚಿವರಿದ್ದರೂ ಒಂದು ದಿನವೂ ಬದುಕಿದ್ದಾರಾ ಸತ್ತಿದ್ದಾರಾ ಅಂತಾ ನೋಡಲು ಹೋಗಲಿಲ್ಲಾ. ಈಗ ಯಡಿಯೂರಪ್ಪನವರ ರಾಜೀನಾಮೆ ಕೇಳ್ತಾರೆ ಅಧಿಕಾರ ಹೋದ ಮೇಲೆ. ಕರ್ನಾಟಕಕ್ಕೆ ೧೨೦೦ ಕೋಟಿ ರೂ.ಕೊಟ್ಟು ಕನ್ನಡ ನಾಡಿನ ಜನರ ಮೇಲಿನ ಅಭಿಮಾನ ಪ್ರೀತಿಯನ್ನು ಪ್ರಧಾನಿ ಮೋದಿಜಿ ತೋರಿಸಿದ್ದಾರೆ. ಅದರ ಜೊತೆಗೆ ಪ್ರತಿವರ್ಷದ ಬಜೆಟ್‌ನಲ್ಲಿ ೨೦ ಸಾವಿರ ಕೋಟಿ ತೆಗೆದಿಡ್ತಿನಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿರುವುದನ್ನು ಸ್ವಾಗತಿಸುತ್ತೇನೆಂದು ಶಾಸಕ ನಡಹಳ್ಳಿ  ಹೇಳಿದರು.
ಈ ಸಮಯದಲ್ಲಿ ಭಾಜಪ ಯುವ ಘಟಕದ ತಾಲೂಕಾ ಅಧ್ಯಕ್ಷ ರಾಘವೇಂದ್ರ ಚವ್ಹಾಣ, ಪುರಸಭಾ ಸದಸ್ಯರುಗಳಾದ ವಾಸುದೇವ ಹೆಬಸೂರ, ಜಯಸಿಂಗ್ ಮೂಲಿಮನಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಬಸವರಾಜ ಹೊಟ್ಟಿ, ನಿಂಗು ಕುಂಟೋಜಿ, ಮಹಾಂತೇಶ ಇಂಗಳಗಿ, ಮುದಕಣ್ಣ ಬಡಿಗೇರ, ನಿರಂಜನಶಾ ಮಕಾಂದಾರ, ಎಪಿಎಂಸಿ ಸದಸ್ಯ ಬಿಜ್ಜು ನೀರಲಗಿ, ವಿಠ್ಠಲ ಮೋಹಿತೆ, ಮಾನಸಿಂಗ್ ಕೊಕಟನೂರ, ಚಿತ್ತರಗಿ, ಸನಾ ಕೇಂಭಾವಿ, ಮೊದಲಾದವರು ಇದ್ದರು.