ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಹಾಗೂ ಕಾರ್ಯಕಾರಿ ಮಂಡಳಿಯ ಚುನಾವಣೆಯ ವೇಳಾಪಟ್ಟಿಯನ್ನು ನಿಗದಿಪಡಿಸಿ ಕೇಂದ್ರ ಚುನಾವಣಾಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರಿಂದ ಮಾರ್ಚ್ 20 ರಂದು ಬಿಡುಗಡೆಗೊಳಿಸಲಾಗಿದೆ.
ವೇಳಾಪಟ್ಟಿಯಂತೆ ಬೆಳಗಾವಿ ಜಿಲ್ಲೆಯ ಹಾಗೂ ಇತರ ತಾಲ್ಲೂಕುಗಳ ತಹಸೀಲದಾರರನ್ನು ಸಹಾಯಕ ಚುನಾವಣಾ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಂತಿಮ ಮತದಾರರ ಪಟ್ಟಿ ಗುರುವಾರ 25 ರಂದು ಪ್ರಕಟವಾಗಲಿದ್ದು, ನಾಮಪತ್ರ ಸ್ವೀಕೃತಿ ಸೋಮವಾರ 29 ರಂದು ಪ್ರಾರಂಭವಾಗಲಿದೆ.
ನಾಮಪತ್ರಗಳ ಸ್ವೀಕೃತಿಯ ಯಾದಿ ಪ್ರಕಟಣೆ ಮಾರ್ಚ್ 29 ರಿಂದ ಏಪ್ರಿಲ್ 7 ರವರಿಗೆ ಹಾಗೂ ನಾಮಪತ್ರ ಸಲ್ಲಿಕೆ ಬುಧವಾರ ಏಪ್ರಿಲ್ 7 ರಂದು ಕಡೆಯ ದಿನಾಂಕವಾಗಿದೆ. ಕ್ರಮಬದ್ಧವಾಗಿ ನಾಮನಿರ್ದೇಶಿತರಾದ ಅಭ್ಯರ್ಥಿಗಳ ಪಟ್ಟಿ ಹಾಗೂ ನಾಮಪತ್ರಗಳ ಪರಿಶೀಲನೆ ಗುರುವಾರ ಏಪ್ರಿಲ್ 8 ರಂದು ನಡೆಯಲಿದೆ.
ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಸೋಮವಾರ ಏಪ್ರಿಲ್ 12 ರಂದು ಮಧ್ಯಾಹ್ನ 3 ಗಂಟೆವರೆಗೆ ಕಾಲಾವಕಾಶ ನೀಡಲಾಗಿದ್ದು, ನಂತರ ನಾಮಪತ್ರ ಹಿಂಪಡೆದವರ ಸೂಚನೆ ಪ್ರಕಟಿಸಲಾಗುವುದು. ಅಂತಿಮ ಉಮೇದುವಾರರ ಪಟ್ಟಿ ಸೋಮವಾರ 12 ರಂದು 3 ಗಂಟೆಯವರೆಗೆ ಪ್ರಕಟಿಸಲಾಗುವುದು ಹಾಗೂ ಮತದಾನ ಮೇ 9 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಮತದಾನ ಮುಗಿದ ನಂತರ ಮತಗಳ ಎಣ ಕೆ ನಡೆಯಲಿದೆ.
ಕೇಂದ್ರ ಅಧ್ಯಕ್ಷರ ಆಯ್ಕೆಯ ಬಗ್ಗೆ ಮಾಹಿತಿಯನ್ನು ಕ್ರೋಡೀಕರಣ ಮಾಡಿ ಕೇಂದ್ರ ಚುನಾವಣಾ ಅಧಿಕಾರಿಗಳಿಗೆ ಮೇ 9 ರಂದು ಸಲ್ಲಿಸಲಾಗುವುದು. ಜಿಲ್ಲಾ ಅಧ್ಯಕ್ಷರಾಗಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಚುನಾವಣಾ ದಿನಾಂಕದ 5 ವರ್ಷಗಳ ಹಿಂದಿನಿಂದ ಸತತವಾಗಿ ಪರಿಷತ್ತಿನ ಸದಸ್ಯರಾಗಿರಬೇಕು, ಪರಿಷತ್ತಿನ ಸಿಬ್ಬಂದಿ, ಸರ್ಕಾರಿ/ಅರೆ ಸರ್ಕಾರಿ, ಸರ್ಕಾರಿ ಅನುದಾನಿತ ಸಂಸ್ಥೆಗಳ ಅಧಿಕಾರಿಗಳು/ನೌಕರರು ಅಭ್ಯರ್ಥಿಗಲಾಗಳು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪತ್ರ ಹಾಜರುಪಡಿಸಬೇಕು.
ಪರಿಷತ್ತಿಗೆ ಯಾವುದೇ ಬಾಕಿ ಇಲ್ಲ ಎಂದು ಕೇಂದ್ರ ಕಚೇರಿಯಿಂದ ಪ್ರಮಾಣಪತ್ರ ಹಾಜರುಪಡಿಸಬೇಕು. ಕೋರ್ಟಿನಿಂದ ಶಿಕ್ಷೆಗೆ ಒಳಪಟ್ಟಿಲ್ಲವೆಂದು ಅಫಿಡವಿಟ್ ಸಲ್ಲಿಸಬೇಕು ಹಾಗೂ ಗರಿಷ್ಠ 4 ನಾಮಪತ್ರ ಸಲ್ಲಿಸಬಹುದು, ನಾಮಪತ್ರ ಬೆಲೆ 10 ರೂಪಾಯಿ ಆಗಿದ್ದು ಠೇವಣ ಮೊತ್ತ 500 ರೂಪಾಯಿ ಆಗಿರುತ್ತದೆ.
ಅಂತಿಮ ಮತದಾರರ ಪಟ್ಟಿಯನ್ನು ಮಾರ್ಚ್ 25 ರಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಆಯಾ ತಾಲೂಕಿನ ಸಹಾಯಕ ಚುನಾವಣಾಧಿಕಾರಿಗಳಾದ ತಹಶಿಲ್ದಾರ್ ಅವರ ಕಚೇರಿಯಲ್ಲಿ ಪ್ರಕಟಿಸಲಾಗುವುದು.
ಬೆಳಗಾವಿ ಜಿಲ್ಲೆಯ ಒಟ್ಟು 14 ತಾಲೂಕು ಕೇಂದ್ರಗಳಲ್ಲಿ ಹಾಗೂ 500 ಅಥವಾ ಅದಕ್ಕಿಂತ ಹೆಚ್ಚಿನ ಮತದಾರರು ಇರುವ ಹೋಬಳಿ ಕೇಂದ್ರಗಳಾದ ಬೈಲಹೊಂಗಲ ತಾಲೂಕಿನ ನೇಸರಗಿ, ರಾಮದುರ್ಗ ತಾಲೂಕಿನ ಕೆ. ಚಂದರಗಿ ಸೇರಿದಂತೆ ಮತದಾನದ ಸಲುವಾಗಿ ಒಟ್ಟು 29 ಮತಗಟ್ಟೆಗಳನ್ನು ರಚಿಸಲಾಗಿದೆ ಎಂದು ಬೆಳಗಾವಿ ತಹಸೀಲದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ