ನಾಡಿನಲ್ಲಿ ಬರದ ಹಿನ್ನೆಲೆ: ಮಂಡ್ಯದಲ್ಲಿ ನಿಯೋಜಿತ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ – ನಾಡೋಜ ಡಾ. ಮಹೇಶ ಜೋಶಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಸದಾ ನಾಡಿನ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಕನ್ನಡ-ಕನ್ನಡಿಗ-ಕರ್ನಾಟಕದ ಹಿತವನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನಲ್ಲಿ ಈ ಬಾರಿ ಬರ ಫೋಷಣೆಯಾಗಿರುವ ಹಿನ್ನೆಲೆಯಲ್ಲಿ, ಅದ್ಧೂರಿತನದ ಸಮ್ಮೇಳನಗಳಿಗೆ ಕಡಿವಾಣಹಾಕಲು ತಿರ್ಮಾನಿಸಿದೆ. ರೈತ ಸಂಕಟದಲ್ಲಿರುವಾಗ ಸಂತಸ ಆಚರಿಸುವ ಸಮ್ಮೇಳನಕ್ಕೆ ಅರ್ಥವೇ ಇಲ್ಲ. ʻಅನ್ನ ಇದ್ದಾಗ ಸಂತಸ, ಸಂತಸ ಇದ್ದಾಗ ಸಂಭ್ರಮ, ಸಂಭ್ರಮ ಇದ್ದಾಗ ಸಾಹಿತ್ಯʼ ಎನ್ನುವುದನ್ನು ನಾವು ಅರಿತುಕೊಂಡು ಈ ಬಾರಿ ಮಂಡ್ಯದಲ್ಲಿ ನಡೆಯಬೇಕಿದ್ದ ೮೭ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.
ಈಗಾಗಲೆ ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ರಾಜ್ಯದಲ್ಲಿ ಭೂಮಿ ನೀರಿಲ್ಲದೆ ಬಾಯ್ದೆರೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಕನ್ನಡದ ಅಕ್ಷರ ಜಾತ್ರೆಯನ್ನು ನಡೆಸುವುದು ಸಮರ್ಪಕವಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆಯಬೇಕಿದ್ದ ೮೭ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲು ತಿರ್ಮಾನಿಸಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಸರ್ಕಾರ ಫೋಷಣೆ ಮಾಡಿದೆ. ಅದರಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಪೋಷಣೆ ಮಾಡಲಾಗಿದೆ. ಕನ್ನಡಿಗರ ಹಿತವನ್ನು ಕಾಪಾಡುವ ಜವಾಬ್ಧಾರಿ ಇರುವ ಕನ್ನಡ ಸಾಹಿತ್ಯ ಪರಿಷತ್ತು ಬರಗಾಲದ ಕಾಲದಲ್ಲಿ ಅದ್ಧೂರಿತನದ ಸಮ್ಮೇಳನಗಳನ್ನು ಮಾಡುವ ಅವಶ್ಯಕತೆ ಇಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವುದು ಕನ್ನಡಿಗರ ನುಡಿ ಜಾತ್ರೆಯಾಗಿದೆ. ಕನ್ನಡಿಗರು ಕನ್ನಡವನ್ನು ಹಲವು ರೀತಿಯಲ್ಲಿ ಆನಂದಿಸಿ, ಅನುಭವಿಸುವ ಹಬ್ಬವಾಗಬೇಕು. ಪ್ರಕೃತಿಯೇ ಅನೂಕೂಲ ಇಲ್ಲವಾದಾಗ ನಡೆಸುವ ಸಮ್ಮೇಳನಗಳು ಅರ್ಥ ಕಳೆದುಕೊಳ್ಳುತ್ತವೆ ಎನ್ನುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.
ವಿಶ್ವವಿಖ್ಯಾತ ಹಂಪಿ ಉತ್ಸವನ್ನು ಸರ್ಕಾರ ೨೦೨೪ರ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ ಮಾಡಿದೆ. ಈ ಸರ್ಕಾರದ ತಿರ್ಮಾನವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತದೆ. ರಾಜ್ಯದ ಬಹುತೇಕ ಜಿಲ್ಲೆಗಳ ಹೆಚ್ಚಿನ ಸಂಖ್ಯೆಯ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ಉತ್ಸವ ನಡೆಸುವುದು ಸರಿಯಲ್ಲ. ಫೆಬ್ರವರಿ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಉತ್ಸವ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸರ್ಕಾರವೂ ವ್ಯಕ್ತಪಡಿಸಿದೆ. ೨೦೨೪ರ ಜನವರಿ ತಿಂಗಳಲ್ಲಿ ಮಂಡ್ಯದಲ್ಲಿ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನವನ್ನು ನಡೆಸಲು ನಿರ್ಧರಿಸಲಾಗಿತ್ತು. ಈ ಸಮ್ಮೇಳನವನ್ನು ಅರ್ಥಗರ್ಭಿತವಾಗಿ ನಡೆಸಬೇಕು ಎನ್ನುವುದು ಸಮಸ್ತ ಕನ್ನಡಿಗರ ಕನಸಾಗಿದೆ. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಸಹಯೋಗದೊಂದಿಗೆ ಮತ್ತು ಮಂಡ್ಯ ಜಿಲ್ಲಾಡಳಿತ ಜೊತೆಗೂಡಿ ಅರ್ಥಪೂರ್ಣ ಸಮ್ಮೇಳನ ಮಾಡಬೇಕು ಎನ್ನುವ ಉದ್ದೇಶ ಹೊಂದಲಾಗಿದೆ.
ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ವಿಶ್ವ ಮೆಚ್ಚುವಂತಹ ಪಾರಂಪರಿಕ ಕನ್ನಡದ ಜಾತ್ರೆಯನ್ನು ಮಂಡ್ಯದಲ್ಲಿ ವೈಭವದಲ್ಲಿ ಆಚರಿಸಬೇಕು. ಆ ಕನ್ನಡದ ಹಬ್ಬವನ್ನು ಸಮಸ್ತ ಕನ್ನಡಿಗರು ಸೇರಿದಂತೆ ಎಲ್ಲರೂ ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಲ್ಲಿ ಇರುವ ಕನ್ನಡಿಗರನ್ನು ಪರಿಷತ್ತು ಆಹ್ವಾನಿಸುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಬರಗಾಲ ಇದ್ದಾಗ ಅದ್ಧೂರಿತನಕ್ಕೆ ಅರ್ಥವಿಲ್ಲ ಎನ್ನುವ ಕಾರಣಕ್ಕೆ ಮಂಡ್ಯದಲ್ಲಿ ಹಮ್ಮಿಕೊಂಡ ೮೭ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.
ಕನ್ನಡಿಗರ ನೋವು ನಲಿವುಗಳಿಗೆ ಸ್ಪಂದಿಸುವ ಕನ್ನಡಿಗರ ಏಕ ಮಾತ್ರ ಸಂಸ್ಥೆ ಎಂದು ಗುರುತಿಸಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರು ಸಂತೋಷದಲ್ಲಿ ಇದ್ದಾಗ ಸಂತಸವನ್ನು ಹಾಗೂ ಕನ್ನಡಿಗರು ಕಷ್ಟದಲ್ಲಿದ್ದಾಗ ಸ್ಪಂದಿಸಿ ಕನ್ನಡಿಗರ ಪರವಾಗಿದೆ. ಇಂದು ಪ್ರಕೃತಿಯ ಮುನಿಸಿನಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಕನ್ನಡಿಗರ ಜೀವನಾಡಿಯಾಗಿದ್ದ ನದಿಯಲ್ಲಿ ನೀರಿನ ಮಟ್ಟ ತಳಮುಟ್ಟಿವೆ. ಜಲಾಶಯಗಳು ಖಾಲಿಯಾಗಿವೆ. ಇಂಥಹ ಸಂದರ್ಭದಲ್ಲಿ ರೈತನ ಮೊಗದಲ್ಲಿ ಕಳವಳ ಮನೆ ಮಾಡಿದೆ. ಕನ್ನಡದ ಅನ್ನದಾತ ಕಂಗಾಲಾಗಿರುವ ಕಾಲದಲ್ಲಿ ಸಮ್ಮೇಳನವನ್ನು ನಡೆಸಿದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಅನ್ನದಾತ ನಲಿಯುತ್ತಿದ್ದಾಗ ಸಮಸ್ತ ಕನ್ನಡಿಗರು ಅಕ್ಷರದ ತೇರನ್ನು ಎಳೆಯಬೇಕು ಎನ್ನುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಈ ತೀರ್ಮಾನವನ್ನು ತೆಗೆದುಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಟಣೆಯಲ್ಲಿ ತಿಳಿಸಿದ್ದಾರೆ.
ಸರಳ ಮೈಸೂರು ದಸರಾಕ್ಕೆ ಆಗ್ರಹ
ರಾಜ್ಯದಲ್ಲಿ ಬರ ಬಂದಿರುವ ಕಾರಣದಿಂದ ಮೈಸೂರು ದಸರಾ ಸೇರಿದಂತೆ ಎಲ್ಲಾ ಉತ್ಸವಗಳನ್ನು ಸಾಂಕೇತಿಕವಾಗಿ ನಡೆಸಬೇಕು. ಉತ್ಸವಗಳು ಅದ್ಧೂರಿತನವನ್ನು ತೊರೆದು ಸರಳವಾಗಿ ಆಚರಿಸುವ ಮೂಲಕ ಅರ್ಥಪೂರ್ಣವಾಗಿ ಜನರ ನೋವಿಗೆ ಸ್ಪಂದಿಸುವಂತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಬರ ಪರಸ್ಥಿತಿಯನ್ನು ಸರಕಾರ ಮತ್ತು ನಾಡಿನ ಜನತೆ ಸಮರ್ಥವಾಗಿ ಎದುರಿಸಬೇಕು. ಈ ಹಿನ್ನೆಲೆಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯಲ್ಲಿ ನಾಡಿನ ಬರ ಪರಸ್ಥಿತಿಯನ್ನು ಕಳೆದು ಸಮೃದ್ಧಿಯನ್ನು ನಾಡಿಗೆ ನೀಡುವಂತೆ ಪ್ರಾರ್ಥಿಸುವುದರ ಮೂಲಕ ಸಮಸ್ತ ಕನ್ನಡಿಗರ ಅಭ್ಯುದಯಕ್ಕೆ ಕಾರಣವಾಗಬೇಕು ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ