*ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಕರವೇ ಕಹಳೆ; ಇಂಗ್ಲೀಷ್ ನಾಮಫಲಕಗಳನ್ನು ಧ್ವಂಸಗೊಳಿಸಿ ಆಕ್ರೋಶ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕನ್ನಡ ನಾಮಫಲಕಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಹಳೆ ಮೊಳಗಿಸಿದ್ದು, ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸಬೇಕು ಎಂದು ಜನಜಾಗೃತಿ ನಿಟ್ಟಿನಲ್ಲಿ ಹೋರಾಟ ಆರಂಭಿಸಿದೆ.
ರಾಜಧಾನಿ ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ರ್ಯಾಲಿ ನಡೆಸಿರುವ ಕರವೇ ಕಾರ್ಯಕರ್ತರು ಇಂಗ್ಲೀಷ್ ನಾಮಫಲಕಗಳನ್ನು ಧ್ವಂಸಗೊಳಿಸಿ, ಜಾಹೀರಾತು ಫಲಕಗಳನ್ನು ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಸಾದಹಳ್ಳಿ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದ ಕರವೇ ನಾರಾಯಣಗೌಡ ನೇತೃತ್ವದ ಕರವೇ ಕಾರ್ಯಕರ್ತರು, ಕನ್ನಡ ನಾಮಫಲಕ ಕಡ್ಡಾಯ ಮಾಡಬೇಕು ಎಂದು ಆಗ್ರಹಿಸಿದರು.
ಸಾದಹಳ್ಳಿ ಬ್ಲೂಮ್ ಹೋಟೆಲ್ ನ ಇಂಗ್ಲೀಷ್ ನಾಮಫಲಕ, ಜಾಹೀರಾತು, ರಸ್ತೆಯಲ್ಲಿದ್ದ ಬೃಹತ್ ಕಟೌಟ್ ಗಳನ್ನು ದ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಕರವೇ ಕಾರ್ಯಕರ್ತರನ್ನು ತಡೆಯಲು ಮುಂದಾಗಿದ್ದಾರೆ. ಇನ್ನೊಂದೆಡೆಸಾದಹಳ್ಳಿ ಗೇಟ್ ಬಳಿಯಿಂದ ಕಬ್ಬನ್ ಪಾರ್ಕ್ ವರೆಗೆ ಕರವೇ ರ್ಯಾಲಿ ಆರಂಭವಾಗಿದೆ.
ಇದೇ ವೇಳೆ ಬೆಂಗಳೂರು ನಗರದಲ್ಲಿ ಕರವೇ ಕಾರ್ಯಕರ್ತರು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯುಬಿಸಿಟಿ ರಸ್ತೆಗಳಲ್ಲಿ ದೊಡ್ಡೆಗಳನ್ನು ಹಿಡಿದು ಇಂಗ್ಲೀಷ್ ನಾಮಫಲಕಗಳಿರುವ ಹೋಟೆಲ್, ಅಂಗಡಿ, ಮಾಲ್ ಗಳ ಬಳಿ ತೆರಳಿ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೀಷ್ ನಾಮಫಲಕಗಳನ್ನು ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ರಾಜ್ಯ ಸರ್ಕಾರ ಸೂಚನೆ ನಿಡಿರುವ ಬೆನ್ನಲ್ಲೇ ಕರವೇ ಕಾರ್ಯಕರ್ತರು ಕನ್ನಡಕ್ಕಾಗಿ ಜನಜಾಗೃತಿ ಚಳುವಳಿ ಆರಂಭಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ