CrimeKannada NewsKarnataka NewsLatestNationalPolitics

*ವಿಧಾನ ಪರಿಷತ್ ಮಾಜಿ ಸದಸ್ಯನ ಅಪಹರಣ: 3  ಕೋಟಿಗೆ ಡಿಮ್ಯಾಂಡ್*

ಪ್ರಗತಿವಾಹಿನಿ ಸುದ್ದಿ:ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ ಅವರನ್ನು ಅಪಹರಿಸಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟು, 2 ಕೋಟಿಗೆ ಡೀಲ್ ಮಾಡಿಕೊಂಡಿರುವ ದುಷ್ಕರ್ಮಿಗಳು ಅವರನ್ನು ಬಿಟ್ಟು ಕಳುಹಿಸಿರುವ ಘಟನೆ ತಡರಾತ್ರಿ ಬೆಂಗಳೂರಿನ ಆನೇಕಲ್ ಬಳಿ ನಡೆದಿದೆ.

ತಡರಾತ್ರಿ 12:15ರ ಸುಮಾರಿಗೆ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಹೊರಟಿದ್ದ ಮಾಜಿ ಎಂಎಲ್‌ಸಿ ದಯಾನಂದರೆಡ್ಡಿ ಅವರ ಕಾರನ್ನು ಹಿಲಲಿಗೆ ಗ್ರಾಮದ ಸಮೀಪ ಬೈಕ್‌ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿದ್ದಾರೆ. ನಿಮಗೆ ಗಿಫ್ಟ್ ಬಂದಿದೆ ಎಂದು ಹೇಳಿ ಕಾಟನ್ ಬಾಕ್ಸ್ ತೋರಿಸಿದ್ದಾರೆ. 

Home add -Advt

ಕಾರಿನ ಡೋರ್ ಲಾಕ್ ತೆರೆದ ತಕ್ಷಣ ಓರ್ವ ವ್ಯಕ್ತಿ ಕಾರಿನೊಳಗೆ ನುಗ್ಗಿದ್ದಾನೆ. ಬಳಿಕ ಗನ್ ತೋರಿಸಿ ತಾನು ಹೇಳಿದ ಕಡೆಗೆ ಕಾರು ಚಲಾಯಿಸುವಂತೆ ಸೂಚಿಸಿದ್ದಾನೆ. ಈ ವೇಳೆ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಹಿಂಬಾಲಿಸಿದ್ದಾರೆ. ಬಳಿಕ ಅತ್ತಿಬೆಲೆ ಕೆಹೆಚ್‌ಬಿ ಬಡಾವಣೆ ಸಮೀಪ ಕರೆದೊಯ್ದು ಬೆದರಿಕೆ ಹಾಕಲಾಗಿದೆ. ನಿನ್ನನ್ನು ಕೊಲ್ಲಲು 10 ಕೋಟಿ ರೂ. ಸುಪಾರಿ ನೀಡಿದ್ದಾರೆ ಎಂದು ಹೇಳಿ ಕುತ್ತಿಗೆಗೆ ಗನ್ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ.

ಈ ವೇಳೆ ಹಣ ನಾನೇ ಕೊಡುತ್ತೇನೆ, ಕೊಲ್ಲಬೇಡಿ ಎಂದು ದಯಾನಂದ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ. ಮೊದಲು 3 ಕೋಟಿ ರೂ. ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಬಳಿಕ 2 ಕೋಟಿ ರೂ.ಗೆ ಒಪ್ಪಿಕೊಂಡಿದ್ದಾರೆ. ಸದ್ಯ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ತೆರೆದ ಬಳಿಕ ಹಣ ನೀಡುವುದಾಗಿ ದಯಾನಂದರೆಡ್ಡಿ ಮನವಿ ಮಾಡಿದ್ದಾರೆ. ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ಸೂಚಿಸಿ ಆರೋಪಿಗಳು ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಈ ಸಂಬಂಧ ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದರೆಡ್ಡಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

Related Articles

Back to top button