ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್ 5 ಮತ್ತು 9ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.
ಏಪ್ರಿಲ್ 5ರಂದು ಮೊದಲ ಹಂತದಲ್ಲಿ ಹಾಗೂ ಏಪ್ರಿಲ್9ರಮದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈ ಬಾರಿಯೂ ಮತದಾನಕ್ಕೆ ಇವಿಎಂ ಮತಯಂತ್ರಗಳನ್ನು ಬಳಕೆ ಮಾಡಲು ಆಯೋಗ ನಿರ್ಧರಿಸಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೊದಲ ಹಂತದಲ್ಲಿ, ಅಂದರೆ ಏಪ್ರಿಲ್ 5ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯಲಿವೆ.
ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಎರಡನೇ ಹಂತದ ಚುನಾವಣೆ ನಡೆಸಲು ಆಯೋಗ ಮುಂದಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಕೆಲ ನಿಯಮಗಳನ್ನು ಕೂಡ ವಿಧಿಸಿದೆ.
* ಅಭ್ಯರ್ಥಿಗಳು ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ಗಳನ್ನು ಕರ್ನಾಟಕದಲ್ಲೇ ಹೊಂದಿರಬೇಕು
* ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆರಕ್ಷಕ ದೃಢೀಕರಣ ಪತ್ರ ಹೊಂದಿರಬೇಕು.
* ಅಭ್ಯರ್ಥಿಗಳು ಕನಿಷ್ಠ ಪ್ರೌಢ ಶಿಕ್ಷಣದಲ್ಲಾದರೂ ಉತ್ತೀರ್ಣವಾಗಿರಬೇಕು.
* ಅಭ್ಯರ್ಥಿಗಳ ಪೋಷಕರು ಮತ್ತು ಕುಟುಂಬ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿರಬಾರದು
* ಎರಡು ಸ್ಥಳದಲ್ಲಿ ಚುನಾವಣಾ ಪಟ್ಟಿಯಲ್ಲಿ ಹೆಸರು ನೊಂದಣಿಯಾಗಿರಬಾರದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ