Politics

*ಕರ್ನಾಟಕ ದಿವಾಳಿಯ ಕಡೆ ಹೆಜ್ಜೆ ಹಾಕುತ್ತಿದೆ: ಆರ್. ಅಶೋಕ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಯಾವ ರೀತಿ ಹಿಮಾಚಲ ಪ್ರದೇಶ ಹಾಗೂ ಕೇರಳ ರಾಜ್ಯಗಳು ದಿವಾಳಿಯ ದಿಕ್ಕಿನಲ್ಲಿ ಹೋಗುತ್ತಿದೆಯೋ ಅದೇ ರೀತಿ ಕರ್ನಾಟಕ ಕೂಡಾ ದಿವಾಳಿಯ ಕಡೆ ಹೆಜ್ಜೆ ಹಾಕುತ್ತಿದೆ. ಇನ್ನು ಮೂರು ತಿಂಗಳು ಹೋದರೆ ಕಾಂಗ್ರೆಸ್ 65% ಕಮಿಷನ್ ಸರ್ಕಾರ ಆಗುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಸಂಸದ ಹೆಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ 60% ಸರ್ಕಾರ ಎಂದಿದ್ದರು. ಆದರೆ ನಾನು ಇಂದು ಅವರಿಗೆ ದೂರವಾಣಿ ಕರೆ ಮಾಡಿ ಹೇಳಿದ್ದೇನೆ, ನೀವು ಇದನ್ನು ತುಂಬಾ ತಡ ಮಾಡಿ ಹೇಳಿದ್ದೀರಿ, 6 ತಿಂಗಳ ಹಿಂದೆಯೇ 60% ಆಗಿದೆ. ಮೊದಲು 40% ಇತ್ತು, ಈಗ 60% ಆಗಿದೆ. ಇನ್ನು ಮೂರು ತಿಂಗಳಲ್ಲಿ 65% ಹೆಚ್ಚಳ ಮಾಡಬೇಕು ಎಂದು ಮಂತ್ರಿಮಂಡಲದಲ್ಲಿ ಚರ್ಚೆ ನಡೆಯುತ್ತಿರುವ ಬಗ್ಗೆ ನಾನು ಕುಮಾರಣ್ಣ ಬಳಿ ಹೇಳಿದೆ. ಅವರು ಕೂಡಾ ಇಲ್ಲ ಬ್ರದರ್, ನಾನು ಹೇಳಿದ್ದು ತುಂಬಾ ಲೇಟ್ ಆಯ್ತು ಎಂದಿದ್ದಾರೆ ಎಂದು ವ್ಯಂಗ್ಯವಾಗಿ ಅಶೋಕ್ ತಿಳಿಸಿದ್ದಾರೆ.

ಅಂದರೆ ಈ ಕಾಂಗ್ರೆಸ್ ಪಕ್ಕಾ 60% ಕಮಿಷನ್ ಅನ್ನು ವಸೂಲಿ ಮಾಡುತ್ತಿದೆ. ಇದಕ್ಕೆ ಉದಾಹರಣೆ ಕೊಡುವುದಾದರೆ ನೀವು ಬೆಂಗಳೂರಲ್ಲಿ ಯಾರನ್ನಾದರೂ ಮನೆ ಕಟ್ಟುವವರ ಬಳಿ ಕೇಳಿ, 30*40 ಸೈಟ್‌ಗೆ 10 ಲಕ್ಷ ರೂ. ಕಮಿಷನ್ ಕೊಡಬೇಕು. ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ. ಇನ್ನು 40*60 ಸೈಟ್‌ಗೆ 20 ಲಕ್ಷ ರೂ. ಕಮಿಷನ್ ಕೊಡಬೇಕು. ಅದಕ್ಕಿಂತಲೂ ಹೆಚ್ಚಾದರೆ ಅಥವಾ 50*80 ರೀತಿ ಸೈಟ್ ಇದ್ದರೆ 40 ಲಕ್ಷ ರೂ. ಕಮಿಷನ್ ಕೊಡಬೇಕು ಎಂದು ಅಶೋಕ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button