Kannada NewsLatest

*ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆ: ಭಾಷಾವಾರು ಪ್ರಾಂತಗಳ ರಚನೆಯೇ ಅಂತಿಮ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ಗಡಿ ವಿಚಾರದಲ್ಲಿ ನಾಡಿನ ಹಿತಕಾಪಾಡುವ ನಿಲುವು ಅಚಲವಾಗಿದೆ.ಈ ನಿಲುವಿನಿಂದ ಒಂದಿಂಚೂ ಕೂಡ ಹಿಂದೆ ಸರಿಯುವುದಿಲ್ಲ. ಈ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಸ್ವೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿಂದು  ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಮಂಡಿಸಿದ ನಿಲುವಳಿ ಸೂಚನೆಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾತನಾಡಿದರು.

ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವ್ಯಾಜ್ಯ ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿದೆ.ಗಡಿ ವ್ಯಾಜ್ಯಗಳು ಸಂವಿಧಾನಬದ್ಧವಾಗಿ ಸಂಸತ್ತಿನಲ್ಲಿಯೇ ಪರಿಹಾರವಾಗಬೇಕಾಗಿರುವದರಿಂದ,ನ್ಯಾಯಾಲಯದಲ್ಲಿ  ಮಹಾರಾಷ್ಟ್ರ ಸರ್ಕಾರ ದಾಖಲಿಸಿರುವ ಪ್ರಕರಣ ನಿರ್ವಹಣೆಯಾಗಬೇಕೆ(Maintainability) ಎಂಬುದರ ಬಗ್ಗೆಯೇ ಈಗ ವಿಚಾರಣೆ ನಡೆಯುತ್ತಿದೆ. ಪ್ರಕರಣದ ನಿರ್ವಹಣೆ ಸಮರ್ಥನೀಯವಲ್ಲ.ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಂದ ಕೂಡಲೇ ಮಹಾರಾಷ್ಟ್ರ ಮುಖ್ಯಮಂತ್ರಿಗಳು ನೀಡಿದ ಪ್ರತಿಕ್ರಿಯೆಗೆ ತಾವು ಕೂಡ ತೀಕ್ಷ್ಣ ಉತ್ತರ ನೀಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯಕ್ಕೆ ಮಹಾರಾಷ್ಟ್ರದ ಮಂತ್ರಿಗಳು,ಸಂಸದರು ಪ್ರವೇಶಿಸದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರಕ್ಕೆ ಬರೆದಿರುವ ಪತ್ರ ಮಹತ್ವದ ದಾಖಲೆಯಾಗಲಿದೆ. ಮಹಾರಾಷ್ಟ್ರದ ರಾಜಕಾರಣಿಗಳು, ಸಂಘಟನೆಗಳು ಪ್ರಚೋದನಕಾರಿ ಹೇಳಿಕೆ ನೀಡಿ ಉದ್ವಿಗ್ನ ವಾತಾವರಣ ಉಂಟು ಮಾಡಲು ಪ್ರಯತ್ನಿಸಿದರೂ ಕೂಡ , ನಮ್ಮ ರಾಜ್ಯದ ಆಡಳಿತ ಪಕ್ಷವಾಗಲಿ, ಪ್ರತಿಪಕ್ಷಗಳಾಗಲಿ , ಸಂಘಟನೆಗಳಾಗಲಿ ಇಂತಹ ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದೇ ಸಂಯಮ , ಜವಾಬ್ದಾರಿ ತೋರಿಸಿವೆ.

ಗಡಿ ಭಾಗದ ಜನಸಾಮಾನ್ಯರಿಗೆ,ವ್ಯಾಪಾರಿಗಳಿಗೆ ತೊಂದರೆಯಾಗಬಾರದು ಎರಡೂ ಕಡೆ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಕೇಂದ್ರ ಗೃಹ ಸಚಿವರು ಕರೆದ ಸಭೆಗೆ ಹಾಜರಾಗಿ, ರಾಜ್ಯದ ಹಿತ ಕಾಯುವ ನಿಲುವನ್ನು ಸ್ಪಷ್ಟಪಡಿಸಿ ಬಂದಿದ್ದೇನೆ. ಅನಧಿಕೃತ ಟ್ವಿಟರ್  ಖಾತೆಯಿಂದ ವ್ಯಕ್ತವಾಗಿದ್ದ ಪ್ರಚೋದನಕಾರಿ ಅಭಿಪ್ರಾಯ ತಮ್ಮದಲ್ಲ ಎಂದು ಆ ಸಭೆಯಲ್ಲಿ ಸ್ಪಷ್ಟಪಡಿಸಿದ್ದೇನೆ. ಸಭೆಯ ನಂತರ ಮಾಧ್ಯಮಗಳಿಗೂ ಈ ವಿವರ ನೀಡಿದ್ದೇನೆ.  ಸಮಯದ ಅಭಾವದ ಕಾರಣ ಸರ್ವಪಕ್ಷ ಕರೆದು ಅಭಿಪ್ರಾಯಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಮುಂದೆಯೂ ಈ ಕುರಿತು ಸರ್ವಪಕ್ಷ ಸಭೆ ನಡೆಸಲಾಗುವುದು. ಶಿಕ್ಷಣ, ಆರೋಗ್ಯ,ವ್ಯಾಪಾರ ಸೇರಿದಂತೆ ಅನೇಕ ಕಾರಣಗಳಿಗಾಗಿ ಪ್ರತಿನಿತ್ಯದ ಒಡನಾಟ ಗಡಿ ಭಾಗದ ಪ್ರದೇಶಗಳಲ್ಲಿರುತ್ತವೆ. ಅವುಗಳಿಗೆ ಸಮಸ್ಯೆಯಾಗದಂತೆ ರಾಜ್ಯಗಳ ಹಂತದಲ್ಲಿಯೇ ಕ್ರಮವಹಿಸಲು ಕೇಂದ್ರ ಸಚಿವರು ಸೂಚನೆ ನೀಡಿದ್ದಾರೆ.

ಗಡಿ ಆಚೆಗಿರುವ ಕನ್ನಡಿಗರ ಹಿತರಕ್ಷಣೆಗೂ ಸರ್ಕಾರ ಬದ್ಧವಾಗಿದೆ. ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆ ಹಾಗೂ ಭಾಷಾವಾರು ಪ್ರಾಂತಗಳ ರಚನೆಯಡಿ ನಿರ್ಧಾರವಾಗಿರುವ ಗಡಿಗಳೇ ಅಂತಿಮ ಈ ವಿಷಯದಲ್ಲಿ ಅನಗತ್ಯ ತಂಟೆ, ತಗಾದೆಗಳಿಗೆ ರಾಜ್ಯ ಕಿವಿಗೊಡುವುದಿಲ್ಲ ಮುಖ್ಯಮಂತ್ರಿಗಳು  ವಿವರಿಸಿದರು.

ಶಾಸಕರಾದ ಬಂಡೆಪ್ಪ ಕಾಶೆಂಪೂರ,ಹೆಚ್.ಕೆ.ಪಾಟೀಲ,ಶಿವಾನಂದ ಪಾಟೀಲ ಮತ್ತಿತರರು ಮಾತನಾಡಿದರು.

 

*ವಿಧಾನಸಭೆಯಲ್ಲಿ 4 ವಿಧೇಯಕಗಳ ಮಂಡನೆ*

https://pragati.taskdun.com/belagavi-sessionvidhanasabhe4-bills-pass/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button