Kannada NewsKarnataka NewsLatestPolitics

*ಸರಕಾರ ಬರೆದುಕೊಟ್ಟಿದ್ದ ರಾಜ್ಯಪಾಲರ ಭಾಷಣ ಹೀಗಿತ್ತು…*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಕರೆದಿದ್ದ ವಿಶೇಷ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರ್ಕಾರ ಬರೆದುಕೊಟ್ಟ ಭಾಷಣ ಓದದೇ ತೆರಳಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ರಾಜ್ಯ ಸರ್ಕಾರ ಬರೆದುಕೊಟ್ಟಿದ್ದ ಭಾಷಣದಲ್ಲಿ ಇದ್ದ ಅಂಶಗಳಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಧಾನ  ಪರಿಷತ್ತಿನ  ಸನ್ಮಾನ್ಯ ಸಭಾಪತಿಯವರೆ,

ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರೆ,

Home add -Advt

ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳೆ,

ಕರ್ನಾಟಕ ರಾಜ್ಯದ ಸನ್ಮಾನ್ಯ ಉಪ ಮುಖ್ಯಮಂತ್ರಿಗಳೆ,

ಪ್ರತಿಪಕ್ಷದ ಗೌರವಾನ್ವಿತ ನಾಯಕರುಗಳೆ,

ಕರ್ನಾಟಕ ರಾಜ್ಯದ   ಸನ್ಮಾನ್ಯ  ಮಂತ್ರಿಗಳೆ ಮತ್ತು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ  ಮಾನ್ಯ ಸದಸ್ಯರೆ,

  1. ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ತಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತ. ಈ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ನನಗೆ ಅತೀವ ಸಂತೋಷವಾಗುತ್ತಿದೆ. ನನ್ನ ಸರ್ಕಾರವು ಅಭಿವೃದ್ಧಿ, ಸಾಮಾಜಿಕ ನ್ಯಾಯ, ಹಣಕಾಸಿನ ಶಿಸ್ತು, ಪ್ರಾದೇಶಿಕ ನ್ಯಾಯ, ಜನಸ್ನೇಹಿ ಆಡಳಿತ, ಕಾನೂನು ಸುವ್ಯವಸ್ಥೆ ಮುಂತಾದವುಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಿದೆ. ಪರಿಣಾಮಕಾರಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಹಾಗೂ ಇಂಡಿಯಾ ಜಸ್ಟೀಸ್‌ -2025 ರ ವರದಿ ಪ್ರಕಾರ ಪೊಲೀಸ್‌ ಮತ್ತು ನ್ಯಾಯದಾನ ವ್ಯವಸ್ಥೆ ರೂಪಿಸಿರುವ ದೇಶದ ಮಧ್ಯಮ ಮತ್ತು ದೊಡ್ಡ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಸಾಮಾಜಿಕ ಆರ್ಥಿಕ ಅಭಿವೃದ್ಧಿ, ಜನಸ್ನೇಹಿ ಕಾನೂನುಗಳ ರಚನೆ, ಕೈಗಾರಿಕಾ ಪರವಾದ ನೀತಿಗಳ ರಚನೆ ಮತ್ತು ಅನುಷ್ಠಾನ, ಸುಸಂಬದ್ಧವಾದ ಸಾರಿಗೆ ವ್ಯವಸ್ಥೆ, ಸರ್ಕಾರದ ಅಧೀನದ ಸಂಸ್ಥೆಗಳ ಕಾರ್ಯವೈಖರಿ, ಪೊಲೀಸು, ನ್ಯಾಯ ವ್ಯವಸ್ಥೆ ಮುಂತಾದವುಗಳಲ್ಲಿ ಕರ್ನಾಟಕವು ಇಂದು ದೇಶದಲ್ಲಿ ಹಲವು ಮಾದರಿಗಳನ್ನು ಸೃಷ್ಟಿಸಿದೆ.
  •  ರಾಜ್ಯವು ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಮತ್ತು ನೀತಿಕಾರಕ ವಿಚಾರಗಳಲ್ಲಿ ದಮನಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತೆರಿಗೆ ಪಾಲು, ಕೇಂದ್ರ ಪುರಸ್ಕೃತ ಯೋಜನೆಗಳು, ಕೇಂದ್ರದ ಯೋಜನೆಗಳು, ವಿಶೇಷ ಯೋಜನೆಗಳು ಮುಂತಾದವುಗಳಲ್ಲಿ ಅನ್ಯಾಯಗಳಿಗೆ ತುತ್ತಾಗಿದೆ. ದೇಶದ ಆರ್ಥಿಕತೆಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕವನ್ನು ಆರ್ಥಿಕವಾಗಿ ದಮನಿಸಿದರೆ ಅದರ ಪರಿಣಾಮ ಇಡೀ ದೇಶದ ಮೇಲೆ ಉಂಟಾಗುತ್ತದೆ ಎಂಬುದನ್ನು ಒಕ್ಕೂಟ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಸುಮಾರು 1.25 ಲಕ್ಷ ಕೋಟಿ ರೂಗಳಷ್ಟು ಬೃಹತ್‌ ಪ್ರಮಾಣದ ಸಂಪನ್ಮೂಲಗಳು ರಾಜ್ಯಕ್ಕೆ ಸಿಗದೆ ವಂಚನೆಯಾಗಿದೆ ಎಂಬುದನ್ನು 16ನೇ ಹಣಕಾಸು ಆಯೋಗಕ್ಕೆ   ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅನ್ಯಾಯವು ಸರಿಯಾಗಬಹುದೆಂಬುದು ಸರ್ಕಾರದ ಖಚಿತ ನಂಬುಗೆಯಾಗಿದೆ.
  • ಇಷ್ಟರ ನಡುವೆ “ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ” ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಆ ಮೂಲಕ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ಸಣ್ಣ ರೈತರ, ಮಹಿಳೆಯರ  ಉದ್ಯೋಗದ ಮತ್ತು ನಿರುದ್ಯೋಗ ಭತ್ಯೆಯ ಹಕ್ಕನ್ನು  ಕಸಿದುಕೊಂಡಿದೆ. ಗ್ರಾಮೀಣ ಭಾರತದ ಅಭಿವೃದ್ಧಿ ಪರ್ವದ  ಬೃಹತ್‌  ಅಧ್ಯಾಯವಾಗಿದ್ದ “ಮನರೇಗಾ” ಕಾಯ್ದೆಯ ರದ್ಧತಿಯ ಮೂಲಕ ಭಾರತೀಯ ಗ್ರಾಮೀಣ ಬದುಕನ್ನು ದುರ್ಬಲಗೊಳಿಸಲಾಗಿದೆ.
  • ಗಾಂಧೀಜಿಯವರು, ಗ್ರಾಮಗಳು ಸ್ವತಂತ್ರವಾದ, ಸ್ವಾಯತ್ತವಾದ ಘಟಕಗಳಾಗಬೇಕು ಎಂದು ಆಶಿಸಿದ್ದರು, “ಗ್ರಾಮಗಳು ನಾಶವಾದಲ್ಲಿ ಭಾರತವೂ ನಾಶವಾಗುತ್ತದೆ. ಈ ದೇಶ ಯಾವ ಸಂದೇಶವನ್ನು ಜಗತ್ತಿಗೆ ನೀಡಬೇಕೊ ಅದು ಇಲ್ಲವಾಗುತ್ತದೆ. ಗ್ರಾಮಗಳನ್ನು ಶೋಷಣೆ ಮಾಡುವುದು ಪೂರ್ಣವಾಗಿ ನಿಂತರೆ ಮಾತ್ರವೇ ಗ್ರಾಮ ಪುನರುಜ್ಜೀವನ ಸಾಧ್ಯವಾದೀತು. ಗ್ರಾಮಗಳು ಸ್ವಾವಲಂಬಿಗಳಾಗುವ ಕಡೆಗೆ ನಮ್ಮ ಗಮನವನ್ನೆಲ್ಲ ಕೇಂದ್ರೀಕರಿಸಬೇಕು“ಎಂದಿದ್ದರು. ಗ್ರಾಮಗಳು ಕೊಳಕು ಕೂಪಗಳಾಗಬಾರದು. ಅನ್ನ, ಉದ್ಯೋಗಗಳನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗಬಾರದೆಂಬುದೂ ಸಹ ಗಾಂಧೀಜಿಯವರ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2005 ರಲ್ಲಿ “ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ”ಯನ್ನು ಪ್ರಾರಂಭಿಸಿತ್ತು. ಈ ಯೋಜನೆಯಲ್ಲಿ ರಾಜ್ಯವು ಕಳೆದ 20 ವರ್ಷಗಳಲ್ಲಿ 76.89 ಲಕ್ಷ ಕಾಮಗಾರಿಗಳನ್ನು 61.03 ಸಾವಿರ ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. 182.5 ಕೋಟಿ ಮಾನವ ದಿನಗಳಷ್ಟು ಉದ್ಯೋಗವನ್ನು ಸೃಜಿಸಿದೆ.
  • ಮನರೇಗಾ ಕಾಯ್ದೆಯು   ಖಾತ್ರಿ ಮಾಡಿದ್ದ ಉದ್ಯೋಗದ ಖಾತ್ರಿಯನ್ನು ಹೊಸ                ವಿಬಿ ಗ್ರಾಮ್‌ ಜಿ ಕಾಯ್ದೆಯು ಕಿತ್ತುಕೊಂಡಿದೆ. ಮನರೇಗಾ ಕಾಯ್ದೆಯ ಸೆಕ್ಷನ್‌ 3 ರ ಪ್ರಕಾರ ಯಾವುದೇ ಪಂಚಾಯಿತಿಯಲ್ಲಿ ಉದ್ಯೋಗ ನೀಡಬೇಕೆಂದು ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕೆಂದು ಸ್ಪಷ್ಟವಾಗಿ ನಮೂದಿಸಲಾಗಿದೆ.  ಬೇಡಿಕೆಯನ್ನು ಆಧರಿಸಿ ಉದ್ಯೋಗ ನೀಡಬೇಕೆಂಬ ತತ್ವವನ್ನು ಧ್ವಂಸ ಮಾಡಿ ಪೂರೈಕೆ ಆಧಾರಿತ ಯೋಜನೆ ಮಾಡಲಾಗಿದೆ. ಕಾರ್ಪೊರೇಟ್‌ ಬಂಡವಾಳಿಗರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ, ʼವಿಬಿ ಗ್ರಾಮ್‌ ಜಿʼ ಯೋಜನೆಯನ್ನು ರೂಪಿಸಲಾಗಿದೆ. ಆ ಮೂಲಕ ಗ್ರಾಮೀಣ ಜನರ  ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ. ಇದರಿಂದಾಗಿ ಗ್ರಾಮೀಣ ಆಸ್ತಿ ಸೃಜನೆಯ ಮೇಲೆ ಮತ್ತು ಕೂಲಿಕಾರರು ಅವರು ಇರುವ ಸ್ಥಳಗಳಲ್ಲಿಯೇ ಉದ್ಯೋಗ ಒದಗಿಸಬೇಕೆಂಬ ಘನವಾದ ಉದಾತ್ತ ಉದ್ದೇಶಗಳನ್ನು ತರಗೆಲೆಗಳಂತೆ ಉದುರಿಸಲಾಗಿದೆ. ಇಂತಹ ಪ್ರಗತಿ ವಿರೋಧಿ ಕ್ರಮವನ್ನು ನನ್ನ ಸರ್ಕಾರ ಬಲವಾಗಿ ಖಂಡಿಸುತ್ತದೆ. ಹೆಸರಾಂತ ಮನರೇಗಾ ರಾಷ್ಟ್ರದಾದ್ಯಂತ ಪ್ರಸಿದ್ಧಿ ಪಡೆದಿತ್ತು. ಪ್ರಗತಿಯ ಪ್ರತೀಕವಾಗಿತ್ತು ಎಂಬುದನ್ನು ನೀರಿನಲ್ಲಿ ಹೋಮ ಮಾಡಿದಂತೆ ಕೇಂದ್ರ ಸರ್ಕಾರ ಈ ಯೋಜನೆಗೆ ತಿಲಾಂಜಲಿಯನ್ನಿಟ್ಟಿದೆ.
  • ಮನರೇಗಾ ಯೋಜನೆಯಲ್ಲಿದ್ದ ಗಾಂಧೀಜಿಯವರ ಪ್ರಧಾನ ಆಶಯವಾದ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಹೊಸ ಕಾಯ್ದೆಯು ದುರ್ಬಲಗೊಳಿಸಿದೆ. ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯ ಒದಗಿಸುವ ಪಂಚಾಯತ್‌ ರಾಜ್‌ ಸಂಸ್ಥೆಗಳು ಅಧಿಕಾರ ವಿಕೇಂದ್ರಿಕರಣದ ಸಂಕೇತಗಳು. ಈ ವಿಕೇಂದ್ರಿಕೃತ ವ್ಯವಸ್ಥೆಯ ಅಡಿಪಾಯವನ್ನೇ ಬುಡಮೇಲು ಮಾಡಿ ಕೇಂದ್ರಿಕೃತ ವ್ಯವಸ್ಥೆಗೆ ಕೇಂದ್ರ ಸರ್ಕಾರವು ಬುನಾದಿ ಹಾಕಿದೆ. ಮನರೇಗಾ ಕಾಯ್ದೆಯಲ್ಲಿ ಕಾಮಗಾರಿಗಳನ್ನು ಗ್ರಾಮ ಸಭೆಗಳಲ್ಲಿಟ್ಟು ತೀರ್ಮಾನ ಮಾಡಿ ಅನುಷ್ಠಾನ ಮಾಡಲಾಗುತ್ತಿತ್ತು. ಹೊಸ ಕಾಯ್ದೆಯಲ್ಲಿ ಗ್ರಾಮಸಭೆಗಳಿಗಿದ್ದ ಅಧಿಕಾರವನ್ನು ಕೇಂದ್ರ ಸರ್ಕಾರದ ಮಾನದಂಡಗಳ ಮೂಲಕ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕೇಂದ್ರದ ಈ ಕ್ರಮಗಳು ಕೇವಲ ಪ್ರಜಾಸತ್ತಾತ್ಮಕತೆಗೆ ವಿರೋಧಿ ಮಾತ್ರ ಅಲ್ಲ, ರಾಷ್ಟ್ರದ ಬಹುಪಾಲು ನಾಗರೀಕರ ಬೇಡಿಕೆಗಳನ್ನು ನಿರ್ಲಕ್ಷಿಸುವ ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ವಿನಾಶದ ಅಂಚಿಗೆ ದೂಡುವ  ಪ್ರಗತಿ  ವಿರೋಧಿ  ಕ್ರಮವಾಗಿದೆ.
  • ನರೇಗಾ ಯೋಜನೆಯಿಂದಾಗಿ ಗುಳೆ  ಹೋಗುವ ಸಮಸ್ಯೆ ಕಡಿಮೆಯಾಗಿತ್ತು.  ಆದರೆ ಹೊಸ ಕಾಯ್ದೆಯಲ್ಲಿ  ನಿರ್ಧಾರಗಳನ್ನು ಕೇಂದ್ರದಿಂದ ಹೇರಲಾಗುತ್ತದೆ. ದೆಹಲಿಯಲ್ಲಿ ಅಧಿಕಾರಿಗಳ ಪರಿಷತ್ತನ್ನು ರಚಿಸಲಾಗುತ್ತದೆ. ಈ ಅಧಿಕಾರಿಗಳ ಪರಿಷತ್ತು ಯಾವ ಪಂಚಾಯಿತಿಗಳಲ್ಲಿ ಈ ಯೋಜನೆಗಳನ್ನು ಜಾರಿಗೆ ತರಬೇಕೆಂಬುದನ್ನು ನಿರ್ಣಯಿಸುತ್ತದೆ. ಉದ್ಯೋಗ ಅರಸಿ ದೊಡ್ಡ ದೊಡ್ಡ ಪಟ್ಟಣಗಳಿಗೆ ಗುಳೆ ಹೋಗುವ ಅಥವಾ ವಲಸೆ ಹೋಗುವ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಈ ʼವಿಬಿ ಗ್ರಾಮ್ ಜಿʼ ಯೋಜನೆಯನ್ನು ನನ್ನ ಸರ್ಕಾರ ಅತ್ಯಂತ ಪ್ರಬಲವಾಗಿ ವಿರೋಧಿಸುತ್ತದೆ.‌ ಮನರೇಗಾ ಕಾಯ್ದೆಯು ದಲಿತರು, ಆದಿವಾಸಿಗಳು, ಮಹಿಳೆಯರು, ಹಿಂದುಳಿದವರು, ರೈತಾಪಿ ಸಮುದಾಯಗಳ ಜನರ ಉದ್ಯೋಗದ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ.
  •   ಉದ್ಯೋಗ ಖಾತ್ರಿಗೆ ಸಂಬಂಧಿಸಿದ ಕಾಯ್ದೆಯನ್ನು ರದ್ದುಗೊಳಿಸಿ ಹೊಸ ಕಾಯ್ದೆಯನ್ನು ಜಾರಿಗೊಳಿಸುವಾಗ ರಾಜ್ಯಗಳ ಅಭಿಪ್ರಾಯ ಪಡೆಯಬೇಕಾಗಿತ್ತು. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಗಳ ಪಾಲೂ ಇರುತ್ತದೆ. ಹೀಗಿರುವಾಗ ರಾಜ್ಯಗಳನ್ನು ಸಂಪರ್ಕಿಸದೆ  ಜಾರಿಗೊಳಿಸಿರುವುದು   ಸಂವಿಧಾನ ಬಾಹಿರ ನಡೆಯಾಗಿರುತ್ತದೆ.
  • ಮನರೇಗಾದಲ್ಲಿದ್ದ ಕಾರ್ಮಿಕ ಕೇಂದ್ರಿತ ಹಕ್ಕುಗಳನ್ನು ಮೊಟಕುಗೊಳಿಸಿ ಅವರನ್ನು ಗುತ್ತಿಗೆದಾರರ ಅಧೀನಕ್ಕೆ ನೀಡಲಾಗುತ್ತಿದೆ. ಬೆಲೆಯೇರಿಕೆ, ಹಣದುಬ್ಬರಗಳನ್ನು ಆಧರಿಸಿ ಕೂಲಿಯನ್ನು ಪರಿಷ್ಕರಿಸುತ್ತಿದ್ದ ಅವಕಾಶಗಳೂ ಹೊಸ ಕಾಯ್ದೆಯಲ್ಲಿ ಕ್ಷೀಣಿಸಿವೆ. ಇದರಿಂದ  ಬಡ ಕೂಲಿ ಕಾರ್ಮಿಕರ ಸಾಮಾಜಿಕ ಭದ್ರತೆಯು ಇಲ್ಲವಾಗುತ್ತಿದೆ.
  1. ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರದ ನೀತಿಗಳಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರಗಳು ಹೊಸ ಕಾಯ್ದೆಯ ಪ್ರಕಾರ ಶೇ.40 ರಷ್ಟು ಅನುದಾನವನ್ನು ನೀಡಬೇಕಾಗುತ್ತದೆ. ರಾಜ್ಯವು ಅನುದಾನ ನೀಡದಿದ್ದರೆ ಕೇಂದ್ರವು ʼವಿಬಿ ಗ್ರಾಮ್‌ ಜಿʼ ಯೋಜನೆಗೆ ಅನುದಾನಗಳನ್ನು ನೀಡುವುದಿಲ್ಲ. ಹಾಗಾಗಿ ಯೋಜನೆಯು ನಿಧಾನವಾಗಿ ಅವಸಾನದ ಹಾದಿಯ ಕಡೆಗೆ ತೆರಳುತ್ತದೆ.
  1.   ಈ ಎಲ್ಲ ಕಾರಣಗಳಿಂದ ಕೇಂದ್ರ ಸರ್ಕಾರವು ತಂದಿರುವ ಗುತ್ತಿಗೆದಾರ ಕೇಂದ್ರಿತ, ಬೃಹತ್‌ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸುವ “ವಿಬಿ ಗ್ರಾಮ್ ಜಿ” ಕಾನೂನನ್ನು ತಕ್ಷಣ ರದ್ದುಪಡಿಸಿ, ಬಡವರ, ಕೃಷಿ ಕಾರ್ಮಿಕರ, ಗ್ರಾಮೀಣ ಆಸ್ತಿ ಸೃಜನೆಗೆ ಅವಕಾಶ ಕಲ್ಪಿಸುವ, ನಿರುದ್ಯೋಗಿ ಭತ್ಯೆ ಒದಗಿಸುವ ಕಾರ್ಮಿಕರು ಅವರಿರುವ ಸ್ಥಳದಲ್ಲಿಯೇ ಕೆಲಸ ಒದಗಿಸುವ “ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ”ಯನ್ನು ಮರು ಸ್ಥಾಪಿಸಬೇಕೆಂದು ನನ್ನ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತದೆ.
  1. ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ ದೇಶದ ಬಹುತೇಕ ರಾಜ್ಯಗಳ ಜನರ ಕೊಳ್ಳುವ  ಶಕ್ತಿಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವಾಗ ಕರ್ನಾಟಕದ ಜನರ ಕೊಳ್ಳುವ ಶಕ್ತಿಯು ನಿಗಧಿತವಾದ ಆರ್ಥಿಕ ಮಾನದಂಡಗಳಿಗೆ ಅನುಗುಣವಾಗಿದೆ. ಇದಕ್ಕೆ ಮುಖ್ಯ ಕಾರಣ ʼಯೂನಿವರ್ಸಲ್‌ ಬೇಸಿಕ್‌ ಇನ್‌ಕಂʼ ಎಂಬ ತತ್ವವನ್ನಾಧರಿಸಿ ಕ್ರಾಂತಿಕಾರಕ ಮಾದರಿಯಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೇ ಕಾರಣ ಎಂಬುದು ಸಾಬೀತಾಗಿದೆ.
  1. ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಎಂಬ ಐದು ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಇವುಗಳಿಗೆ ಇದುವರೆಗೆ 1,16,706 ಕೋಟಿ ರೂಗಳನ್ನು ವಿನಿಯೋಗಿಸಲಾಗಿದೆ. ಈ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲು FPI ಮೂಲಕ ಕಿಂಗ್ಸ್ ಕಾಲೇಜ್  ಲಂಡನ್, ಜಸ್ಟ್‌ ಜಾಬ್ಸ್ ನೆಟ್‌ವರ್ಕ್, ಎಕ್ಸ್‌ಕೆಡಿಆರ್ ಫೋರಮ್, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಇಂಡಸ್ ಆಕ್ಷನ್ ಹಾಗೂ ಲೋಕನೀತಿ/ಸಿಎಸ್‌ಡಿಎಸ್ ನಂತಹ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಗಳು ವ್ಯಾಪಕವಾಗಿ ನಡೆಸಿರುವ  ಅಧ್ಯಯನಗಳು ರಾಜ್ಯದಲ್ಲಿ ಆಹಾರ ಭದ್ರತೆ, ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿರುವುದನ್ನು ದೃಢಪಡಿಸಿವೆ. ಜನರು ಗ್ಯಾರಂಟಿ ಯೋಜನೆಗಳ ಮೂಲಕ ಪಡೆಯುವ ಹಣವನ್ನು ಪೌಷ್ಠಿಕ ಆಹಾರ, ಔಷಧಗಳು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ.
  1. ಬ್ಯಾಂಕ್‌ ಖಾತೆಗಳಿಗೆ ಸರ್ಕಾರದಿಂದ ನಗದು ವರ್ಗಾವಣೆ ಪಡೆದ ಕುಟುಂಬಗಳ ಪ್ರಮಾಣ 2022 ರಲ್ಲಿ ಶೇ.9.3 ರಷ್ಟಿದ್ದದ್ದು 2024ರ ವೇಳೆಗೆ ಅದು ಶೇ.72.7ಕ್ಕೆ ಏರಿಕೆಯಾಗಿದೆ. ಇದು ಗ್ಯಾರಂಟಿ ಯೋಜನೆಗಳ ಸಾರ್ಥಕತೆಗೆ ಸಾಕ್ಷಿಯಾಗಿದೆ.
  1. ‘ಶಕ್ತಿ’ ಯೋಜನೆಯು ಮಹಿಳೆಯರ ಬದುಕಿನಲ್ಲಿ ಅಪಾರ ಚೈತನ್ಯ ತಂದಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಯನದಂತೆ, ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳೂ ಸೇರಿದಂತೆ ಅನೇಕ ಮಾರ್ಗಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದ್ದು, ಇದು ನಗರದ ಚಲನಶೀಲತೆಯಲ್ಲಿ ಆದ ಪ್ರಮುಖ ಬದಲಾವಣೆಯಾಗಿದೆ. ಈ ಯೋಜನೆಯಿಂದ ಪ್ರತಿ ಮಹಿಳೆಗೆ ಮಾಸಿಕ ಸರಾಸರಿ ರೂ.1,500 ರಿಂದ 2,000 ಉಳಿತಾಯವಾಗುತ್ತಿದೆ. ರಾಜ್ಯದಾದ್ಯಂತ ಶೇ.19 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ.34ರಷ್ಟು ಮಹಿಳೆಯರು ಉತ್ತಮ ಸಂಬಳದ ಕೆಲಸಗಳನ್ನು ಪಡೆಯಲು ಈ ಯೋಜನೆ ನೆರವಾಗಿದೆ. ಶೇ.83 ರಷ್ಟು ಜನರು ಉತ್ತಮ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗಿದೆ.
  1. ʼಹಸಿವು ಮುಕ್ತ ಕರ್ನಾಟಕʼದ ಕನಸನ್ನು ನನಸು ಮಾಡುತ್ತಿರುವ ‘ಅನ್ನಭಾಗ್ಯ’ ಯೋಜನೆಯಿಂದಾಗಿ ಶೇ.83 ರಷ್ಟು ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ಆದ ಉಳಿತಾಯದ ಹಣದಲ್ಲಿ ಬೇಳೆಕಾಳು, ತರಕಾರಿ, ಹಣ್ಣು, ಮೊಟ್ಟೆ ಮತ್ತು ಮಾಂಸ ಮುಂತಾದ ಗುಣ ಮಟ್ಟದ ಆಹಾರ ಪದಾರ್ಥಗಳನ್ನು ಖರೀದಿಸುವ ಮೂಲಕ ಕುಟುಂಬದ ಪೌಷ್ಠಿಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
  1. ʼಗೃಹಲಕ್ಷ್ಮಿʼ ಯೋಜನೆಯಿಂದ ಶೇ.80 ರಷ್ಟು ಮಹಿಳೆಯರು, ತಾವು ಹೆಚ್ಚು ಆರ್ಥಿಕವಾಗಿ ಸ್ವತಂತ್ರರಾಗಿರುವುದಾಗಿ ಹಾಗೂ ಕುಟುಂಬದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಶೇ.37 ರಷ್ಟು ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಹಣವನ್ನು ಕುಟುಂಬದ ಹಳೆಯ ಸಾಲ ಮರುಪಾವತಿಸಲು ಬಳಸುವ ಮೂಲಕ ಸಾಲ ಮುಕ್ತರಾಗುತ್ತಿದ್ದಾರೆ.
  1. ಗ್ಯಾರಂಟಿ ಯೋಜನೆಗಳಿಂದ ಶೇ.89 ರಷ್ಟು ಫಲಾನುಭವಿಗಳು ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆ ಕಂಡಿದ್ದೇವೆ ಎಂದಿದ್ದಾರೆ.
  1. ಸರ್ಕಾರವು ಜಾರಿಗೆ ತಂದಿರುವ ಮಹಿಳಾ ಸಬಲೀಕರಣದ ಯೋಜನೆಗಳಿಂದ  ಕರ್ನಾಟಕವು ಹೊಸ ಮಾದರಿಯನ್ನು ಪ್ರಾರಂಭಿಸಿದೆ. ಈ ಯೋಜನೆಗಳಿಂದ ಕೇವಲ ಆರ್ಥಿಕ ನೆರವು ಮಾತ್ರವಲ್ಲದೆ, ಸಾಮಾಜಿಕ  ಪರಿವರ್ತನೆಯೂ ಕೂಡ ಸಾಧ್ಯವಾಗಿದೆ.
  • ಯುವ ಜನತೆಗೆ ಆಸರೆಯಾಗಿರುವ ‘ಯುವ ನಿಧಿ’ ಯೋಜನೆಯ ಫಲವಾಗಿ ಶೇ.28ರಷ್ಟು ಯುವಕರು ಕೌಶಲ್ಯ ಕಲಿಕೆಯಲ್ಲಿ ತೊಡಗಿಸಿಕೊಂಡರೆ, ಶೇ.20ರಷ್ಟು ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ.
  • ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ‘ಗೃಹಲಕ್ಷ್ಮಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ’ಯನ್ನು ಸ್ಥಾಪಿಸಲಾಗಿದೆ. ಅಪಾಯ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ಒದಗಿಸುವ ಉದ್ದೇಶದಿಂದ 2025-26ನೇ ಸಾಲಿನಲ್ಲಿ ‘ಅಕ್ಕಪಡೆ’ ಯೋಜನೆಯನ್ನು ಜಾರಿಗೊಳಿಸಲಾಗಿದೆ.
  • ರೈತರ ಹಿತಾಸಕ್ತಿಯ ರಕ್ಷಣೆಯನ್ನು ಆದ್ಯತೆಯನ್ನಾಗಿಸಿಕೊಂಡಿರುವ ಸರ್ಕಾರವು ಬೆಲೆ ಕುಸಿತ ಮುಂತಾದ ಕೃಷಿ ಬಿಕ್ಕಟ್ಟುಗಳಿಗೆ ತಕ್ಷಣ ಸ್ಪಂದಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಿಂತು ಹೋಗಿದ್ದ ‘ಕೃಷಿ ಭಾಗ್ಯ’ ಯೋಜನೆಯನ್ನು ಪುನರ್‌ ಚಾಲನೆಗೊಳಿಸಿ ಅದಕ್ಕೆ ರೂ.200 ಕೋಟಿ ಅನುದಾನವನ್ನು ಒದಗಿಸಲಾಗಿದೆ. ಈಗಾಗಲೇ 49 ಕೋಟಿಗಳ ವೆಚ್ಚದಲ್ಲಿ 3735 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.
  • ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉತ್ತೇಜಿಸುವ ಉದ್ದೇಶದಿಂದ ‘ಹೈಟೆಕ್‌  ಹಾರ್ವೆಸ್ಟರ್‌  ಹಬ್’ ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕೃಷಿ  ಯಾಂತ್ರೀಕರಣ  ಸಂಸ್ಕರಣಾ  ಘಟಕಗಳಿಗಾಗಿ 1.31 ಲಕ್ಷ ಫಲಾನುಭವಿಗಳಿಗೆ 286 ಕೋಟಿ  ನೆರವು  ನೀಡಲಾಗಿದೆ. 252 ಕೋಟಿ ರೂ ವೆಚ್ಚದಲ್ಲಿ 1.50 ಲಕ್ಷ ಹೆಕ್ಟೇರ್‌ ಜಮೀನಿನಲ್ಲಿ ಸೂಕ್ಷ್ಮ ನೀರಾವರಿ ಘಟಕಗಳನ್ನು ಅಳವಡಿಸಲಾಗಿದೆ.
  • ಈ ವರ್ಷ ಉಂಟಾದ ಅತಿವೃಷ್ಟಿ ಮತ್ತು ಪ್ರವಾಹದಿಂದ 14.21 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಗೊಳಗಾಗಿತ್ತು. ರಾಜ್ಯದ ಪಾಲಿನ ಎಸ್‌ಡಿಆರ್‌ಎಫ್ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ರೂ.1032 ಕೋಟಿ ಸೇರಿಸಿ ರೂ.2,250 ಕೋಟಿ  ಪರಿಹಾರವನ್ನು 14,21,615 ಸಂತ್ರಸ್ತ ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ನಿಗಧಿ ಪಡಿಸಿರುವ ಮಾನದಂಡಗಳಿಗಿಂತ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರಿಗೆ 8500 ರೂಗಳನ್ನು ರಾಜ್ಯ ಸರ್ಕಾರವು ನೀಡಿದೆ.  ಪ್ರಕೃತಿ ವಿಕೋಪದಿಂದ ಮನೆ, ಜೀವಹಾನಿ ಮತ್ತು ಜಾನುವಾರು ಹಾನಿ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ರೂ.46.5 ಕೋಟಿ ಪರಿಹಾರವನ್ನು ವಿತರಿಸಲಾಗಿದೆ.
  •  SDMF ಅಡಿಯಲ್ಲಿ ರೂ.235.31 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದುವರೆದು, 2025-26ನೇ ಸಾಲಿನಲ್ಲಿ ಭೂಕುಸಿತ, ಪ್ರವಾಹ ಹಾಗೂ ಬರ ಉಪಶಮನಕ್ಕಾಗಿ ಒಟ್ಟು ರೂ.966.93 ಕೋಟಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ ಉಂಟಾದ ಬೆಳೆಹಾನಿ ಪರಿಹಾರಕ್ಕಾಗಿ ರೂ.615 ಕೋಟಿ ಹಾಗೂ ಮೂಲಭೂತ ಸೌಕರ್ಯಗಳ ಪುನರ್‌ ಸ್ಥಾಪನೆಗಾಗಿ ರೂ.1522 ಕೋಟಿಗಳ ಮೆಮೊರಾಂಡಮನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈವರೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ.
  • ರೈತರಿಗೆ ನೀಡುವ ಬಿತ್ತನೆ ಬೀಜದಿಂದ ಹಿಡಿದು ಮಾರುಕಟ್ಟೆಯವರೆಗಿನ ಸೇವೆಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ಒದಗಿಸಲು ಮಂಡ್ಯ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಮೈಸೂರು ಮತ್ತು ಬಾಗಲಕೋಟೆ, ಈ  6 ಜಿಲ್ಲೆಗಳಲ್ಲಿ “ತೋಟಗಾರಿಕೆ ಕಿಸಾನ್‌ ಮಾಲ್”ಗಳನ್ನು ಸ್ಥಾಪಿಸಲಾಗಿದೆ. ಬೆಳೆಗಾರರ ಅನುಕೂಲಕ್ಕಾಗಿ 14,000 ಮೆಟ್ರಿಕ್ ಟನ್ ಸಾಮರ್ಥ್ಯದ 6 ಶೀತಲ   ಘಟಕಗಳನ್ನು  ನಿರ್ಮಿಸಲಾಗುತ್ತಿದೆ.
  • ತೋಟಗಾರಿಕೆ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡಲು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ನೂತನ ತೋಟಗಾರಿಕೆ ಮಹಾವಿದ್ಯಾಲಯವನ್ನು ಸ್ಥಾಪಿಸಲು ರೂ.40 ಕೋಟಿ ಅನುದಾನ ಒದಗಿಸಲಾಗಿದೆ.
  • ರಾಜ್ಯದ 9.07 ಲಕ್ಷ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವ ಕ್ಷೀರಧಾರೆ ಯೋಜನೆಯಡಿಯಲ್ಲಿ ಲೀಟರಿಗೆ 5 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹಿಂದಿನ ಸರ್ಕಾರ ಬಾಕಿ ಉಳಿಸಿದ್ದ ರೂ.600 ಕೋಟಿ ಸೇರಿ ಒಟ್ಟಾರೆ ರೂ.4,130 ಕೋಟಿಗಳ ಪ್ರೋತ್ಸಾಹಧನವನ್ನು  ಸರ್ಕಾರ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ. ‘ಅನುಗ್ರಹ’ ಯೋಜನೆಯಡಿ ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರು ಮತ್ತು ಕುರಿ/ಮೇಕೆಗಳ ಮಾಲೀಕರಿಗೆ ನಮ್ಮ ಸರ್ಕಾರ ರಚನೆಯಾದಾಗಿನಿಂದ  ರೂ.95.41 ಕೋಟಿ ಪರಿಹಾರ ಧನ ವಿತರಿಸಲಾಗಿದೆ. ಪಶು ವೈದ್ಯಕೀಯ ಸೇವೆಗಳನ್ನು ವಿಸ್ತರಿಸಲು ಮೊದಲ ಹಂತದಲ್ಲಿ 20 ತಾಲೂಕುಗಳಲ್ಲಿ ಪಾಲಿಕ್ಲಿನಿಕ್‌ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.
  • ಸರ್ಕಾರ  ಅಧಿಕಾರಕ್ಕೆ ಬಂದಾಗಿನಿಂದ ಜಾನುವಾರುಗಳ ಆರೋಗ್ಯ ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದ್ದು, ಕಾಲು ಬಾಯಿ ಜ್ವರದ ವಿರುದ್ಧ 379.63 ಲಕ್ಷ ದನಗಳಿಗೆ ಹಾಗೂ ಈ ವರ್ಷ 182.71 ಲಕ್ಷ ದನಗಳಿಗೆ ಲಸಿಕೆ ಹಾಕುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನಗಳಿಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಹಾಗೂ ಬಾಡಿಗೆ ಕಟ್ಟಡದಲ್ಲಿರುವ 200 ಪಶುವೈದ್ಯ ಸಂಸ್ಥೆಗಳಿಗೆ ರೂ.100 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, 381 ಗುತ್ತಿಗೆ ಪಶುವೈದ್ಯರನ್ನು ನೇಮಕ ಮಾಡಿಕೊಳ್ಳುವ  ಮೂಲಕ ವೈದ್ಯರ ಕೊರತೆಯನ್ನು ನೀಗಿಸಲಾಗಿದೆ.
  • ನಾಡ ದೋಣಿ ಮೀನುಗಾರರಿಗೆ ಉಂಟಾಗುತ್ತಿದ್ದ ಇಂಧನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು, ಪ್ರತಿ ದೋಣಿಗೆ 300 ಲೀಟರುಗಳಷ್ಟು ಕೈಗಾರಿಕಾ ಸೀಮೆ ಎಣ್ಣೆಯನ್ನು, ಪ್ರತಿ ಲೀಟರಿಗೆ ರೂ.35 ರಿಯಾಯಿತಿ ದರ ನೀಡಿ ಪೂರೈಸುತ್ತಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಭಾಗವಾಗಿ, ರೂ 440 ಕೋಟಿ ವೆಚ್ಚದಲ್ಲಿ ಮೀನುಗಾರಿಕೆ ಬಂದರುಗಳನ್ನು ಹಾಗೂ ರೂ.72 ಕೋಟಿ ಆಧುನೀಕರಣಕ್ಕಾಗಿ ನೀಡಲಾಗಿದೆ. ಮೀನು ಮಾರಾಟಕ್ಕಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಶೇ.50 ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ.
  • ರಾಷ್ಟ್ರದ ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯವು ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಪಾರದರ್ಶಕತೆ ತರುವ ನಿಟ್ಟಿನಲ್ಲಿ ಪ್ರಮುಖ 15 ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸಂಪೂರ್ಣ ನಗದು ರಹಿತ ಡಿಜಿಟಲ್ ವಹಿವಾಟು, ಇ-ಹರಾಜು, ಇ-ತೂಕಮಾಪನ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ. ಈ ಸಾಧನೆ ಮಾಡಿದ ದೇಶದ ಏಕೈಕ ರಾಜ್ಯ  ಕರ್ನಾಟಕವಾಗಿದೆ.
  • ಏಷ್ಯಾ ಖಂಡದ ದೊಡ್ಡ ರೇಷ್ಮೆ ಮಾರುಕಟ್ಟೆಗಳಾದ ರಾಮನಗರ ಹಾಗೂ ಶಿಡ್ಲಘಟ್ಟಗಳಲ್ಲಿ ರೂ.400 ಕೋಟಿ ವೆಚ್ಚದಲ್ಲಿ ಹೈಟೆಕ್‌ ರೇಷ್ಮೆಗೂಡು ಮಾರುಕಟ್ಟೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮೈಸೂರಿನಲ್ಲಿ ರೂ.20 ಕೋಟಿ ವೆಚ್ಚದಲ್ಲಿ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ  ಕ್ರಮವಹಿಸಲಾಗಿದೆ. ಕಲಬುರಗಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತಲಾ ರೂ.30. ಕೋಟಿ ವೆಚ್ಚದಲ್ಲಿ ನೂತನ ರೇಷ್ಮೆ ಗೂಡು ಮಾರುಕಟ್ಟೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
  • ಮಾವು ಬೆಳೆಗೆ ಬೆಲೆ ಕುಸಿತ ಉಂಟಾದಾಗ ರೈತರ ನೆರವಿಗೆ ನಿಂತ ಸರ್ಕಾರವು ಬೆಲೆ  ವ್ಯತ್ಯಾಸ  ಪಾವತಿ ಯೋಜನೆಯಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 14,917 ರೈತರಿಗೆ  ರೂ.41 ಕೋಟಿಗಳನ್ನು ಪಾವತಿಸಿದೆ.
  • ಕಬ್ಬು ಉತ್ಪಾದನೆಯಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರವು ನಿಗಧಿ ಪಡಿಸಿರುವ ಬೆಲೆ ವಿರುದ್ಧ ಪ್ರತಿಭಟನೆ ನಡೆಸಿದ ರೈತ ಸಂಘಟನೆಗಳ ಮನವಿಯನ್ನು ಪರಿಗಣಿಸಿ, 2025-26ನೇ ಸಾಲಿಗೆ ಶೇ.10.25 ರ ಇಳುವರಿ ನೀಡುವ ಕಬ್ಬಿಗೆ ರೂ.3,200 ಮತ್ತು ಶೇ.11.25ರ ಇಳುವರಿಗೆ ರೂ.3,300 ಬೆಲೆಯನ್ನು ನಿಗಧಿಪಡಿಸಿ ಆದೇಶಿಸಲಾಗಿದೆ. ಇದರಿಂದ ಸರ್ಕಾರವು ಸುಮಾರು 300 ಕೋಟಿ ರೂಗಳಿಗೂ ಹೆಚ್ಚಿನ ನೆರವನ್ನು ರೈತರಿಗೆ ನೀಡುತ್ತಿದೆ.  
  • ತೊಗರಿ ಖರೀದಿ ಕೇಂದ್ರಗಳನ್ನು ಜನವರಿಯ ಬದಲಾಗಿ ಡಿಸೆಂಬರಿನಲ್ಲಿಯೇ ತೆರೆಯಬೇಕೆಂದು ಒತ್ತಡ ಬಂದ ಕಾರಣ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಈಗಾಗಲೇ 33729 ಕ್ವಿಂಟಾಲ್‌ ತೊಗರಿಯನ್ನು ಖರೀದಿಸಲಾಗಿದೆ. 
  • ರಾಜ್ಯದಲ್ಲಿ ಈ ಬಾರಿ 54.31 ಲಕ್ಷ ಮೆಟ್ರಿಕ್‌ ಟನ್‌ ಮುಸುಕಿನ ಜೋಳ ಬೆಳೆಯಲಾಗಿದೆ. ಕೇಂದ್ರ ಸರ್ಕಾರವು ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ಪ್ರತಿ ಕ್ವಿಂಟಾಲಿಗೆ 2400 ರೂಗಳನ್ನು ನಿಗಧಿ ಮಾಡಿದೆ. ಆದರೆ ಪಡಿತರ ವಿತರಣೆಯಲ್ಲಿ ಜನರು ಬಳಸುವಂತಿದ್ದರೆ  ಮಾತ್ರ ಖರೀದಿಸಬೇಕೆಂದು ನಿಬಂಧನೆ ವಿಧಿಸಿದೆ. ಈ ವರ್ಷ ಎಂಎಸ್‌ಪಿಗಿಂತ ಬೆಲೆ ಕಡಿಮೆಯಾಗಿದೆ. ಮುಸುಕಿನ ಜೋಳದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರವು ಎಥೆನಾಲ್‌ ಉತ್ಪಾದಕರು, ಪೌಲ್ಟ್ರಿ ನಡೆಸುವವರು, ಕೆಎಂಎಫ್‌ ಮುಂತಾದವರ ಜೊತೆಯಲ್ಲಿ ಹಲವು ಸಭೆಗಳನ್ನು ನಡೆಸಲಾಯಿತು. ಅವರುಗಳು ಖರೀದಿ ಮಾಡಿದರೂ ಸಹ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಹೋದಾಗ ಸರ್ಕಾರವೇ 100 ಕೋಟಿ ರೂಗಳಿಗೂ ಹೆಚ್ಚಿನ ಹಣವನ್ನು ಒದಗಿಸಿ ಪಿಡಿಪಿಎಸ್‌ ಯೋಜನೆಯಲ್ಲಿ 40 ಲಕ್ಷ ಕ್ವಿಂಟಾಲ್‌ ಮೆಕ್ಕೆಜೋಳ ಖರೀದಿಸಲು ಪ್ರಾರಂಭಿಸಿದೆ.
  • ಕೃಷಿ   ಮಾರುಕಟ್ಟೆಗಳಲ್ಲಿನ   ವ್ಯವಹಾರವನ್ನು  ಸುಗಮಗೊಳಿಸಲು  ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ E-Commerce Platform ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಕೃಷಿ  ಉತ್ಪನ್ನಗಳ ಮಾರುಕಟ್ಟೆಗೆ ಉತ್ತಮ ಮೂಲ ಸೌಕರ್ಯ ಕಲ್ಪಿಸಲು ರಾಯಚೂರು ಮೆಣಸಿನ ಕಾಯಿ ಮಾರುಕಟ್ಟೆ ಹಾಗೂ ಮಂಗಳೂರಿನ ಎಪಿಎಂಸಿ ಮಾರುಕಟ್ಟೆ ಕಾಮಗಾರಿಗಳಿಗೆ 55 ಕೋಟಿ ರೂ ವೆಚ್ಚದ ಟೆಂಡರ್‌ ಕರೆಯಲಾಗಿದೆ. 20 ಮಾರುಕಟ್ಟೆಗಳಲ್ಲಿ ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. 54 ಮಾರುಕಟ್ಟೆಗಳಲ್ಲಿ ವೈಜ್ಞಾನಿಕ ದಾಸ್ತಾನು ಮಾಡಲು 9.24 ಲಕ್ಷ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಉಗ್ರಾಣ ಮಳಿಗೆಗಳನ್ನು ಪೂರ್ಣಗೊಳಿಸಿ ರೈತರ ಅನುಕೂಲಕ್ಕೆ ಒದಗಿಸಲಾಗಿದೆ.
  • ಪ್ರಧಾನ ಮಂತ್ರಿ ಫಸಲ್‌ ಬಿಮಾ   ಯೋಜನೆಯ ಸಮರ್ಥ ಅನುಷ್ಠಾನಕ್ಕಾಗಿ  ಕೇಂದ್ರ ಸರ್ಕಾರವು ರಾಜ್ಯ ಕೃಷಿ ಇಲಾಖೆಗೆ ದ್ವಿತೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 
  • ಸರ್ಕಾರವು  ಕೆಸಿ ವ್ಯಾಲಿ ಮತ್ತು ಎಚ್‌ ಎನ್‌ ವ್ಯಾಲಿಗಳಲ್ಲಿ ಲಭಿಸುವ ನೀರನ್ನು ಸಂಸ್ಕರಿಸಿ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಇನ್ನಷ್ಟು ವಿಸ್ತರಿಸುವುದರ ಜೊತೆಗೆ ವೃಷಭಾವತಿ ವ್ಯಾಲಿಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮೊದಲನೇ ಹಂತದಲ್ಲಿ ರೂ.1081 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ.
  •  2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರಿಗಾಗಿ 9000ಕ್ಕೂ ಹೆಚ್ಚು ಬೋರ್‌ವೆಲ್‌ಗಳನ್ನು ನೀಡಲಾಗಿದೆ.  ಚೆಕ್‌ಡ್ಯಾಂಗಳು ಮತ್ತು ಏತ ನೀರಾವರಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ರೂ.200 ಕೋಟಿ ವೆಚ್ಚದಲ್ಲಿ ಶಿರಪುರ ಮಾದರಿ ಚೆಕ್‌ಡ್ಯಾಂ ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ.
  • ಸರ್ಕಾರವು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡಿದೆ. ಯೋಜನೆಯ ತ್ವರಿತ ಭೂ ಸ್ವಾಧೀನ ಪ್ರಕ್ರಿಯೆಗಾಗಿ ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸಿ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ 75,563 ಎಕರೆ ಜಮೀನನ್ನು ಒಂದೇ ಹಂತದಲ್ಲಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ರೈತರ ಹಿತದೃಷ್ಟಿಯಿಂದ ‘ಒಪ್ಪಂದದ ಐತೀರ್ಪು ದರ’ಗಳಿಗೆ ಅನುಮೋದನೆ ನೀಡಲಾಗಿದೆ. ಮುಳುಗಡೆಯಾಗುವ  ಖುಷ್ಕಿ ಜಮೀನುಗಳಿಗೆ ಪ್ರತಿ ಎಕರೆಗೆ ರೂ.30 ಲಕ್ಷ ಹಾಗೂ ನೀರಾವರಿ ಜಮೀನಿಗೆ ರೂ.40 ಲಕ್ಷ ನಿಗಧಿ ಪಡಿಸಲಾಗಿದೆ. ಕಾಲುವೆ ನಿರ್ಮಾಣದ ಭೂಸ್ವಾಧೀನಕ್ಕಾಗಿ ಖುಷ್ಕಿ ಭೂಮಿಗೆ ಪ್ರತಿ ಎಕರೆಗೆ ರೂ.25.00 ಲಕ್ಷ ಹಾಗೂ ನೀರಾವರಿ ಜಮೀನಿಗೆ ರೂ.30.00 ಲಕ್ಷ ದರವನ್ನು ನಿಗಧಿಪಡಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂದು ಸದನದಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.  ನಮ್ಮ ಹಕ್ಕಿನ ನೀರಿನ ಐತೀರ್ಪನ್ನು ಗೆಜೆಟ್‌ ಅಧಿಸೂಚನೆ ಹೊರಡಿಸುವುದರ ಜೊತೆಯಲ್ಲಿ ಕೃಷ್ಣಾ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ನನ್ನ ಸರ್ಕಾರವು ಒತ್ತಾಯಿಸುತ್ತದೆ.
  • ರಾಜ್ಯದಲ್ಲಿ ಹೊಸದಾಗಿ   59,181 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಏತ ನೀರಾವರಿ, ಕಾಲುವೆ ಜಾಲಗಳ ಆಧುನೀಕರಣ, ಕೆರೆ ತುಂಬಿಸುವ ಯೋಜನೆಗಳು ಹಾಗೂ ಬ್ರಿಡ್ಜ್-ಕಂ-ಬ್ಯಾರೇಜ್‌ಗಳ ನಿರ್ಮಾಣ ಸೇರಿದಂತೆ ಒಟ್ಟು ರೂ.9,331 ಕೋಟಿ ಮೊತ್ತದ 77 ಹೊಸ ಯೋಜನಾ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಕಂದಾಯ ಆಡಳಿತವನ್ನು ರೈತಸ್ನೇಹಿ ಹಾಗೂ ಪಾರದರ್ಶಕಗೊಳಿಸಲು ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡಿದೆ. ಭೂದಾಖಲೆಗಳ ಪ್ರಮುಖ ಮೂಲವಾಗಿರುವ ಆಕಾರಬಂದ್ ಡಿಜಿಟೈಸೇಷನ್ ಕಾರ್ಯವನ್ನು ಬಹುಪಾಲು ಪೂರ್ಣಗೊಳಿಸಿ ಸಾರ್ವಜನಿಕರ   ವೀಕ್ಷಣೆಗೆ ಲಭ್ಯವಾಗಿಸಿದೆ. ರಾಜ್ಯದ 30,662 ಗ್ರಾಮ ನಕಾಶೆ ಹಾಗೂ ಹಿಸ್ಸಾ ದಾಖಲೆಗಳಿಗೆ ಡಿಜಿಟೈಸ್ ಮತ್ತು ಜಿಯೊ ರೆಫರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಜಮೀನುಗಳ ಅಳತೆ ಕಾರ್ಯಗಳಿಗಾಗಿ ‘ಮೋಜಿಣಿ’ ತಂತ್ರಾಂಶದ ಮೂಲಕ 16.5 ಲಕ್ಷ ಅರ್ಜಿಗಳಲ್ಲಿ 10.89 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
  • ‘ಫೋಡಿ ಮುಕ್ತ ಗ್ರಾಮ ಅಭಿಯಾನ 2.0’ ಅಡಿಯಲ್ಲಿ 3,216 ಗ್ರಾಮಗಳಲ್ಲಿ ಅಳತೆ  ಕಾರ್ಯ  ಕೈಗೊಂಡು, 91.2 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿ ಏಕ ವ್ಯಕ್ತಿ  ಪಹಣಿಗಳನ್ನು ಸೃಜಿಸಲಾಗಿದೆ. ದರಖಾಸ್ತು ಫೋಡಿ ಅಭಿಯಾನದಲ್ಲಿ 1.22 ಲಕ್ಷ ಮಂಜೂರಿದಾರರ  ಅಳತೆ  ಕಾರ್ಯವನ್ನು  ಪೂರ್ಣಗೊಳಿಸಲಾಗಿದೆ. ಸರ್ವೆ ಆಫ್ ಇಂಡಿಯಾ ಸಹಯೋಗದೊಂದಿಗೆ ಡ್ರೋಣ್ ತಂತ್ರಜ್ಞಾನ ಬಳಸಿ 1.14 ಲಕ್ಷ ಚದರ ಕಿ.ಮೀ. ಪ್ರದೇಶದ ಮರುಭೂಮಾಪನ ಕಾರ್ಯವನ್ನು ಕೈಗೊಳ್ಳಲಾಗಿದೆ.
  • ಕಂದಾಯ ಗ್ರಾಮ ಯೋಜನೆಯಲ್ಲಿ 1,11,111 ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಇನ್ನು 1 ಲಕ್ಷ  ಹಕ್ಕುಪತ್ರಗಳು  ವಿತರಣೆಗೆ  ಸಿದ್ಧವಾಗಿದ್ದು, ಸದ್ಯದಲ್ಲೆ ವಿತರಿಸಲಾಗುವುದು.
  • ಕಂದಾಯ ನ್ಯಾಯಾಲಯಗಳ ನಿರ್ವಹಣೆಗೆ RCCMS ತಂತ್ರಾಂಶ ಬಳಸಲಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ 2.7 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಕಂದಾಯ ನ್ಯಾಯಾಲಯಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ವಿಚಾರಣೆ ಪ್ರಕ್ರಿಯೆಗಳ ನೇರ ಪ್ರಸಾರ ಮತ್ತು ವಿಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಉಳಿದ ಕಡೆಗಳಿಗೂ ವಿಸ್ತರಿಸಲಾಗುವುದು.
  • 3,07,225 ಅರ್ಜಿಗಳ ಆಧಾರದ ಮೇಲೆ ‘ಇ-ಪೌತಿ’  ಖಾತೆ ಮಾಡಲಾಗಿದೆ. ಕೈಗಾರಿಕಾ ಸ್ಥಾಪನೆಗೆ ಉತ್ತೇಜನ ನೀಡಲು ಭೂಪರಿವರ್ತನೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಆಡಳಿತ ಸೌಕರ್ಯಕ್ಕಾಗಿ ಅಗತ್ಯವಿರುವ ಕಡೆ ಆದ್ಯತೆಯನ್ನು ಆಧರಿಸಿ ‘ಪ್ರಜಾಸೌಧಗಳನ್ನು ನಿರ್ಮಿಸಲು  ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಸಾಮಾಜಿಕ ಭದ್ರತಾ ಮಾಸಿಕ ಪಿಂಚಣಿ ಯೋಜನೆಗಳನ್ನು ಡಿಸೆಂಬರ್-2023 ರಿಂದ ಡಿಬಿಟಿ ವ್ಯಾಪ್ತಿಗೆ ತರಲಾಗಿದೆ. ಸುಮಾರು 81.79 ಲಕ್ಷ ಫಲಾನುಭವಿಗಳಿಗೆ 10835 ಕೋಟಿ ರೂಗಳನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಮೂಲಕ ನೇರವಾಗಿ ಜಮೆ ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವು ಕೇವಲ 540 ಕೋಟಿಗಳಿಗೂ ಕಡಿಮೆ ಅನುದಾನವನ್ನು ನೀಡುತ್ತಿದೆ.
  • ಧಾರ್ಮಿಕ ದತ್ತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರ ಕ್ಷೇಮಾಭಿವೃದ್ಧಿಗಾಗಿ ನೀಡಲಾಗುವ ತಸ್ತೀಕ್ ಮೊತ್ತವನ್ನು 2025-26ನೇ ಸಾಲಿನಿಂದ ರೂ.60,000 ದಿಂದ ರೂ.72,000 ಕ್ಕೆ ಹೆಚ್ಚಿಸಲಾಗಿದೆ. ಅರ್ಚಕರು ಅಥವಾ ನೌಕರರು ಸೇವಾವಧಿಯಲ್ಲಿ ಮೃತಪಟ್ಟ ಕುಟುಂಬಗಳಿಗೆ ರೂ.2 ಲಕ್ಷ ಗಳಂತೆ ಪರಿಹಾರ ನೀಡಲಾಗುತ್ತಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ‘ಕರ್ನಾಟಕ ಭಾರತ್‌ ಗೌರವ್‌’ ಯೋಜನೆಯಡಿ 23,044 ಯಾತ್ರಾರ್ಥಿಗಳಿಗೆ ರೂ.11.52 ಕೋಟಿ ಸಹಾಯಧನ ನೀಡಲಾಗಿದೆ. ಬೆಂಗಳೂರಿನಲ್ಲಿ ರೂ.27 ಕೋಟಿ ವೆಚ್ಚದಲ್ಲಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ದೇವಾಲಯಗಳ ಆಸ್ತಿ ಸಂರಕ್ಷಣೆಗಾಗಿ ‘ಭೂ ವರಾಹ’ ಯೋಜನೆಯಡಿ ಒತ್ತುವರಿ ತೆರವುಗೊಳಿಸಿ, ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
  • ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ʼಬಿಯಾಂಡ್‌ ಬೆಂಗಳೂರು ಅಭಿವೃದ್ಧಿ ಪರಿಕಲ್ಪನೆಗೆ ‘ಕರ್ನಾಟಕ ಕೈಗಾರಿಕಾ ನೀತಿ 2025-30’ ಅನ್ನು ಜಾರಿಗೆ ತಂದಿದೆ. ಈ ನೀತಿಯಿಂದಾಗಿ   ಅಂದಾಜು  20 ಲಕ್ಷ  ಉದ್ಯೋಗಾವಕಾಶಗಳು  ಸೃಷ್ಟಿಯಾಗಲಿವೆ.
  • 2025-26ನೇ ಸಾಲಿನ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ರೂ.80,997 ಕೋಟಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ರಫ್ತು ವಲಯದಲ್ಲಿ ರಾಜ್ಯವು  ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದು, 99,309 ಮಿಲಿಯನ್ ಯು.ಎಸ್. ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ಇದರ ಜೊತೆಗೆ ಐಟಿ ವಲಯದಲ್ಲೂ ರಾಜ್ಯವು ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
  • ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದ  ಸ್ಥಳದಲ್ಲಿ ಸುರಕ್ಷಿತ ಮತ್ತು ಉತ್ತಮ ವಾತಾವರಣ ಕಲ್ಪಿಸಲು ಕೋಲಾರ ಜಿಲ್ಲೆಯ ನರಸಾಪುರ ಹಾಗೂ ತುಮಕೂರು ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ರೂ.193 ಕೋಟಿ ವೆಚ್ಚದಲ್ಲಿ 6,000 ಸಾಮರ್ಥ್ಯದ ಬೃಹತ್ ಮಹಿಳಾ ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ.
  • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯಕ್ಕೆ ಸರ್ಕಾರವು ಆದ್ಯತೆ ನೀಡಿದೆ. 2025ರ ಡಿಸೆಂಬರ್ ಅಂತ್ಯಕ್ಕೆ ಉದ್ಯಮ್‌ ತಂತ್ರಾಂಶದಲ್ಲಿ 25 ಲಕ್ಷ ಎಂ.ಎಸ್‌.ಎಂ.ಇಗಳು ನೋಂದಣಿಯಾಗಿದ್ದು,235.2 ಲಕ್ಷ ಉದ್ಯೋಗಗಳು ಸೃಜನೆಯಾಗಿವೆ. ಜವಳಿ ವಲಯದಲ್ಲಿ, ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಯನ್ನು ಜಾರಿಗೆ ತರಲಾಗಿದೆ. ನೇಕಾರರ ವಿದ್ಯುತ್ ಸಹಾಯಧನ, ಬಡ್ಡಿ ಸಹಾಯಧನ, ಮಿತವ್ಯಯ ನಿಧಿ ಯೋಜನೆ ಹಾಗೂ ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.
  • ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ‘ಕಲಿಕೆ ಜೊತೆ ಕೌಶಲ್ಯ’ ಕಾರ್ಯಕ್ರಮದಡಿ ಏಳು ವಿಶ್ವವಿದ್ಯಾನಿಲಯಗಳ 37,400 ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗಿದೆ.
  • ಸರ್ಕಾರವು “ಬೆಂಗಳೂರು ಟೆಕ್ ಸಮ್ಮಿಟ್-2025” ವೇದಿಕೆಯಲ್ಲಿ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030, ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030 ಹಾಗೂ ರಾಜ್ಯಾದ್ಯಂತ ನವೋದ್ಯಮಗಳ ಬೆಳವಣಿಗೆಯನ್ನು ಖಾತರಿಪಡಿಸುವ “ಕರ್ನಾಟಕ ನವೋದ್ಯಮ ನೀತಿ 2025–2030” ಗಳನ್ನು ಲೋಕಾರ್ಪಣೆ ಮಾಡಲಾಗಿದೆ.
  • 2025ನೇ ಸಾಲಿನಲ್ಲಿ ಪ್ರತಿಷ್ಠಿತ ELEVATE ಕಾರ್ಯಕ್ರಮದಡಿ 143 ಸ್ಟಾರ್ಟ್‌ಅಪ್‌ಗಳಿಗೆ ರೂ.37.81 ಕೋಟಿಗಳ Grant-in-aid Seed Funding ಅನುದಾನವನ್ನು ಘೋಷಿಸಲಾಗಿದೆ. ನಾವೀನ್ಯತೆಯನ್ನು ಉತ್ತೇಜಿಸುವ ದೃಷ್ಟಿಯಿಂದ 5 ವರ್ಷಗಳಲ್ಲಿ 5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು 1000 ಕೋಟಿ ರೂ ವೆಚ್ಚದಲ್ಲಿ LEAP ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ.
  • ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಸರ್ಕಾರವು ಬದ್ಧವಾಗಿದೆ.  ಬೆಂಗಳೂರು ಮೆಟ್ರೋ ಹಂತ-3 ರ 44.65 ಕಿ.ಮೀ. ಯೋಜನೆಗೆ ಅನುಮೋದನೆ ದೊರೆತಿದ್ದು ಇದರ ಅಂದಾಜು ವೆಚ್ಚ ರೂ.15,611 ಕೋಟಿಗಳಾಗಿದೆ. ಈ ಯೋಜನೆಯ ಭಾಗವಾಗಿ ಹೊಸಹಳ್ಳಿಯಿಂದ  ಕಡಬಗೆರೆವರೆಗಿನ ಕಾರಿಡಾರ್‌ನಲ್ಲಿ ರೂ.9700 ಕೋಟಿ ವೆಚ್ಚದ ದೇಶದ ಮೊಟ್ಟ ಮೊದಲ ರಸ್ತೆ ಮತ್ತು ಮೆಟ್ರೋ ಒಳಗೊಂಡಿರುವ ಡಬಲ್ ಡೆಕ್ಕರ್ ಯೋಜನೆಗೆ ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ. ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.59 ಕಿ.ಮೀ. ಉದ್ದದ ಮೆಟ್ರೋ ಹಂತ-3ಎ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (DPR) ಅನುಮೋದಿಸಿ ಕೇಂದ್ರ ಸರ್ಕಾರಕ್ಕೆ  ಸಲ್ಲಿಸಲಾಗಿದೆ. 
  • ಗ್ರೇಟರ್‌ ಬೆಂಗಳೂರಿನ ವಿಸ್ತೃತ ಅಭಿವೃದ್ಧಿಗಾಗಿ ಮೆಟ್ರೋ, ಬ್ಯುಸಿನೆಸ್‌ ಕಾರಿಡಾರ್‌, ವೈಟ್‌ ಟಾಪಿಂಗ್‌, ಸೇತುವೆ, ಸುರಂಗ ರಸ್ತೆ, ಡಾಂಬರೀಕರಣ, ಬಸ್‌ ನಿಲ್ದಾಣ, ಪಾರ್ಕುಗಳ ಅಭಿವೃದ್ಧಿ, ನೀರು ಸರಬರಾಜು, ಒಳಚರಂಡಿ ಯೋಜನೆ, ತ್ಯಾಜ್ಯ ಶುದ್ಧೀಕರಣ ಘಟಕಗಳು, ಘನತ್ಯಾಜ್ಯ ವಿಲೇವಾರಿ, ಕೆರೆ ತುಂಬಿಸುವ ಯೋಜನೆಗಳು, ಐಟಿ ಮತ್ತು ಇನ್ನೋವೇಟಿವ್‌ ಸಿಟಿ ನಿರ್ಮಾಣ, ಡಬಲ್‌ ಡೆಕರ್‌ ರಸ್ತೆ, ಎಲಿವೇಟೆಡ್‌ ಕಾರಿಡಾರುಗಳು, ರಾಜಕಾಲುವೆ   ಮತ್ತು ಇತರೆ ಚರಂಡಿಗಳ ನಿರ್ಮಾಣ, ಸಬರ್ಬನ್‌ ರೈಲ್ವೆ  ಮುಂತಾದವುಗಳ ನಿರ್ಮಾಣ ಮುಂತಾದವುಗಳಿಗಾಗಿ 1.7 ಲಕ್ಷ ಕೋಟಿ ರೂ.ಗಳ ಕಾಮಗಾರಿಗಳನ್ನು  ಕೈಗೆತ್ತಿಕೊಳ್ಳಲಾಗಿದೆ.
  • ಬೆಂಗಳೂರು ಜಲಮಂಡಳಿಯು ಪೂರೈಸುವ ನೀರಿನ ಗುಣಮಟ್ಟಕ್ಕೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಂದ ಪ್ರಮಾಣೀಕರಣ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇದರ ಜೊತೆಗೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌  ತಂತ್ರಜ್ಞಾನವನ್ನು ಬಳಸಿಕೊಂಡು   ಅಪಾರ ಪ್ರಮಾಣದ ನೀರಿನ ಸೋರಿಕೆಯನ್ನು ತಡೆಗಟ್ಟುತ್ತಿದೆ.
  •  ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ನಗರಗಳಲ್ಲಿ 24×7ನೀರು ಸರಬರಾಜು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
  • ನಗರಾಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರವು, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ರೂ.1594 ಕೋಟಿಗಳನ್ನು ವೆಚ್ಚ ಮಾಡಿದೆ.  ಹಸಿವು ಮುಕ್ತ ರಾಜ್ಯದ ಸಂಕಲ್ಪದೊಂದಿಗೆ ಇಂದಿರಾ ಕ್ಯಾಂಟೀನ್ ಹಂತ-2 ರ ಅಡಿಯಲ್ಲಿ 173 ಹೊಸ ಕ್ಯಾಂಟೀನ್‌ಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. ಪೌರಕಾರ್ಮಿಕರ ಕಲ್ಯಾಣಕ್ಕಾಗಿ ‘ಗೃಹಭಾಗ್ಯ ಯೋಜನೆ’ಯಡಿ 5436 ಮನೆಗಳನ್ನು ನಿರ್ಮಿಸಲಾಗಿದೆ. ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 11722 ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ.
  • ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. 2025-26ನೇ ಸಾಲಿನ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರೂ.5,000 ಕೋಟಿಗಳನ್ನು ಒದಗಿಸಿ ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಲಾಗುತ್ತಿದೆ.
  • 2025-26 ರಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 8,000 ಕೋಟಿ ರೂ.ಗಳನ್ನು ಒದಗಿಸಿ  ಕಾರ್ಯ ಕ್ರಮಗಳ ಅನುಷ್ಠಾನ ಪ್ರಾರಂಭಿಸಲಾಗಿದೆ.
  • ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯದ 259 ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ. ಮಕ್ಕಳ ರಕ್ಷಣೆಯ ವಿಷಯದಲ್ಲಿ ಕಠಿಣ ನಿಲುವು ತಳೆದಿರುವ ಸರ್ಕಾರವು, ಬಾಲ್ಯವಿವಾಹಕ್ಕೆ ಪ್ರಯತ್ನ, ಸಿದ್ಧತೆ ಮತ್ತು ನಿಶ್ಚಿತಾರ್ಥಗಳನ್ನು ಅಪರಾಧವನ್ನಾಗಿಸಲು ‘ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ 2025’ ರ ಜಾರಿಗೆ ತಂದಿದೆ.
  • ಬಹುವಿಧ ಅಂಗವಿಕಲತೆಯಿಂದ ಬಳಲುತ್ತಿರುವ ವ್ಯಕ್ತಿಗಳ  ಆರೈಕೆದಾರರಿಗೆ ಪ್ರತಿ ತಿಂಗಳು ರೂ.1000/-ಗಳ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
  • ರಾಜ್ಯದ ಸರ್ಕಾರಿ ಹಾಗೂ ನೋಂದಾಯಿತ ಕೈಗಾರಿಕೆ ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ಎಲ್ಲಾ ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ಮಹಿಳಾ ನೌಕರರಿಗೆ ಅವರ ಋತು ಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದಂತೆ, ವಾರ್ಷಿಕ 12 ದಿನಗಳ ವೇತನ ಸಹಿತ ರಜೆ ಸೌಲಭ್ಯವನ್ನು ಒದಗಿಸುವ  ಕ್ರಾಂತಿಕಾರಕ  ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಳ್ಳುವ ಮೂಲಕ ಹೊಸ ಮಾದರಿಗೆ ಸಾಕ್ಷಿಯಾಗಿದೆ.
  • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ 14.34 ಲಕ್ಷ ಫಲಾನುಭವಿಗಳಿಗೆ ವಿವಿಧ ಸಾಮಾಜಿಕ ಭದ್ರತಾ ಸೌಲಭ್ಯಗಳಡಿ ರೂ.1115 ಕೋಟಿಗಳ ಸಹಾಯಧನವನ್ನು ವಿತರಿಸಿದೆ. ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ರಾಜ್ಯಾದ್ಯಂತ ಇರುವ 100 ಸಂಚಾರಿ ಆರೋಗ್ಯ ಕ್ಲಿನಿಕ್‌ಗಳಿಂದ 6.75 ಲಕ್ಷ ಕಾರ್ಮಿಕರು ಇದರ ಪ್ರಯೋಜನ ಪಡೆದಿದ್ದಾರೆ. ವಲಸೆ ಕಾರ್ಮಿಕರಿಗೆ ಸುರಕ್ಷಿತ ವಸತಿ ಕಲ್ಪಿಸಲು 5 ಜಿಲ್ಲೆಗಳಲ್ಲಿ 6 ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಕಾರ್ಮಿಕರ ಮಕ್ಕಳಿಗೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡಲು ರಾಜ್ಯಾದ್ಯಂತ 42 ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ.
  • ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ‘ಅಂಬೇಡ್ಕರ್‌ ಕಾರ್ಮಿಕರ ಸಹಾಯಹಸ್ತ’ ಯೋಜನೆಯಡಿ 91,638 ಕಾರ್ಮಿಕರನ್ನು ಹಾಗೂ ‘ಕರ್ನಾಟಕ ರಾಜ್ಯ ಗಿಗ್‌ ಕಾರ್ಮಿಕರ ವಿಮಾ ಯೋಜನೆ’ಯಡಿ 10,468 ಫಲಾನುಭವಿಗಳನ್ನು ನೋಂದಾಯಿಸಲಾಗಿದೆ. ದಿನಪತ್ರಿಕೆ ಮತ್ತು ಹಾಲು ವಿತರಣಾ ಕಾರ್ಮಿಕರು ಹಾಗೂ ಮೋಟಾರು ಸಾರಿಗೆ ಮಂಡಳಿಯ 51,933 ಕಾರ್ಮಿಕರನ್ನು ನೋಂದಾಯಿಸಿಕೊಂಡು ಸೌಲಭ್ಯ ಒದಗಿಸಲಾಗುತ್ತಿದೆ.
  • ‘ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ (ಕಲ್ಯಾಣ) ಸುಂಕ ಅಧಿನಿಯಮ-2024’ ಹಾಗೂ ‘ಕರ್ನಾಟಕ ಫ್ಲಾಟ್‌ ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ) ಅಧಿನಿಯಮ, 2025’ ರ ನಿಯಮಾವಳಿಗಳನ್ನು ತಂದಿದೆ. ಗಿಗ್‌ ಕಾರ್ಮಿಕರಿಗೆ 4 ಲಕ್ಷ ರೂ.ಗಳವರೆಗೆ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.
  • ಸರ್ಕಾರವು ಕಾರ್ಮಿಕರ ಸಾಮಾಜಿಕ ಭದ್ರತೆಗೆ ಆದ್ಯತೆ ನೀಡಿದ್ದು, ಕಾರ್ಮಿಕ ರಾಜ್ಯ ವಿಮಾ ಯೋಜನೆಯಡಿ 36.5 ಲಕ್ಷ ವಿಮಾದಾರರು ಹಾಗೂ ಅವರ 141.62 ಲಕ್ಷ ಕುಟುಂಬ ಸದಸ್ಯರಿಗೆ 10 ಆಸ್ಪತ್ರೆಗಳು, 125 ಚಿಕಿತ್ಸಾಲಯಗಳು ಮತ್ತು 2 ರೋಗ ಪತ್ತೆ ಕೇಂದ್ರಗಳ ಮೂಲಕ ಸಮಗ್ರ ವೈದ್ಯಕೀಯ ಸೇವೆ ಒದಗಿಸುತ್ತಿದೆ. ದೊಡ್ಡಬಳ್ಳಾಪುರದಲ್ಲಿ ನೂತನ ಆಸ್ಪತ್ರೆ ಮತ್ತು ಅರೆ ವೈದ್ಯಕೀಯ ಕಾಲೇಜು ಸ್ಥಾಪನೆ ಹಾಗೂ ರಾಜ್ಯದ ಹಲವು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನೂತನ ಚಿಕಿತ್ಸಾಲಯಗಳನ್ನು ಆರಂಭಿಸಲಾಗುತ್ತಿದೆ. ಹಾಸನದಲ್ಲಿ ಹೊಸ ಆಸ್ಪತ್ರೆ ಸ್ಥಾಪನೆ ಹಾಗೂ ದಾವಣಗೆರೆ ಮತ್ತು ಹುಬ್ಬಳ್ಳಿ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯವನ್ನು 50 ರಿಂದ 100 ಕ್ಕೆ ಹೆಚ್ಚಿಸಲಾಗುತ್ತಿದೆ.
  • ರಾಜ್ಯವು ಪರಿಸರಸ್ನೇಹಿಯಾದ ಮತ್ತು ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ 4,032 ಮೆಗಾವ್ಯಾಟ್‌ಗಳಷ್ಟು ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಿದೆ.
  • ರಾಜ್ಯದಲ್ಲಿ ಹಲವಾರು ವಿದ್ಯುತ್‌ ಉತ್ಪಾದನಾ ಯೋಜನೆಗಳು ಅನುಷ್ಠಾನವಾಗುತ್ತಿವೆ. ಈ ಆರ್ಥಿಕ ವರ್ಷದ 10 ತಿಂಗಳುಗಳಲ್ಲಿ 28,000 ಮಿಲಿಯನ್‌ ಯೂನಿಟ್‌ಗಳಷ್ಟು ವಿದ್ಯುತ್ತನ್ನು ಉತ್ಪಾದಿಸಲಾಗಿದೆ.  ಈ ವರ್ಷ 41,208 ವಿತರಣಾ ಪರಿವರ್ತಕಗಳನ್ನು ಹಾಗೂ 10,943 ಕಿಲೋಮೀಟರುಗಳಷ್ಟು ಹೈ ಟೆನ್ಷನ್‌ ಲೈನುಗಳು, 6382 ಕಿಲೋಮೀಟರ್‌ ಎಲ್‌.ಟಿ ಲೈನುಗಳನ್ನು ಅಳವಡಿಸಲಾಗಿದೆ. ಖಾಸಗಿ ಕಂಪೆನಿಗಳಿಂದ  3704  ಮೆಗಾವ್ಯಾಟ್‌ ಅನ್ನು  ಪಿಪಿಪಿ ಹಾಗೂ ಇನ್ನಿತರೆ  ಮಾದರಿಗಳ ಮೂಲಕ  ಉತ್ಪಾದಿಸಲು  ಹಾಗೂ  ಖರೀದಿಸಲು ಒಪ್ಪಂದ  ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಸರ್ಕಾರಿ ಸ್ವಾಮ್ಯದ ಕಂಪೆನಿಗಳೇ ಸುಮಾರು 4794 ಮೆಗಾವ್ಯಾಟ್‌ ವಿದ್ಯುತ್ತನ್ನು ಹೊಸದಾಗಿ ಉತ್ಪಾದನೆ   ಮಾಡಲು ಕಾರ್ಯ ಯೋಜನೆ ರೂಪಿಸಿವೆ. ಇಂಧನ ಇಲಾಖೆ ವತಿಯಿಂದ ‘ಗಂಗಾ ಕಲ್ಯಾಣ’ ಯೋಜನೆಯಡಿ 11,727 ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ.   ರೈತರಿಗೆ ಹಗಲಿನ ವೇಳೆ ವಿಶ್ವಾಸಾರ್ಹ ವಿದ್ಯುತ್ ಒದಗಿಸಲು ಪಿಎಂ-ಕುಸುಮ್ (ಬಿ) ಯೋಜನೆಯಡಿ 1,230 ಜಾಲಮುಕ್ತ ಸೌರ ಪಂಪ್‌ ಸೆಟ್‌ಗಳನ್ನು ಅಳವಡಿಸಿದೆ.
  • ಕನ್ನಡ ಚಲನಚಿತ್ರೋದ್ಯಮ ಹಾಗೂ ಪತ್ರಿಕಾರಂಗದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ.  ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದ ಬಳಿ ಮಹತ್ವಾಕಾಂಕ್ಷೆಯ ‘ಚಿತ್ರನಗರಿ’ಯನ್ನು ಸ್ಥಾಪಿಸುತ್ತಿದೆ. ಡಿಜಿಟಲ್ ಯುಗದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ‘ಡಿಜಿಟಲ್ ಜಾಹೀರಾತು ಮಾರ್ಗಸೂಚಿ-2024’ ಅನ್ನು ಜಾರಿಗೆ ತರಲಾಗಿದೆ. ಇದಲ್ಲದೆ, ಪತ್ರಿಕಾರಂಗದ ಹಿತಕಾಯುವ ದೃಷ್ಟಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ’ ಯೋಜನೆಯಡಿ ಆರೋಗ್ಯ ಸುರಕ್ಷತೆಯನ್ನು ಒದಗಿಸಲಾಗಿದೆ. ಗ್ರಾಮೀಣ ಭಾಗದ ಪತ್ರಕರ್ತರು ವೃತ್ತಿ ನಿಮಿತ್ತ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್‍ ಪಾಸ್‍ ಸೌಲಭ್ಯವನ್ನು ಕಲ್ಪಿಸಲಾಗಿದೆ.
  • ಸಾರಿಗೆ ನಿಗಮಗಳ ಬಲವರ್ಧನೆಗಾಗಿ ಪ್ರಸಕ್ತ ಸಾಲಿನಲ್ಲಿ 489   ಹಾಗೂ ಸರ್ಕಾರವು ಒಟ್ಟಾರೆ 5339 ಹೊಸ ಬಸ್ಸುಗಳನ್ನು ಖರೀದಿಸಿ ಸೇರ್ಪಡೆಗೊಳಿಸಲಾಗಿದೆ. 5809 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.  ದೇಶದ ರಸ್ತೆ ಸಾರಿಗೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಿಬ್ಬಂದಿಗಳ ಕರ್ತವ್ಯ ನಿರತ ಹಾಗೂ ಕರ್ತವ್ಯದ ಮೇಲಿಲ್ಲದ ಅವಧಿಯ ಅಪಘಾತಗಳಿಗೆ ರೂ.1.00 ಕೋಟಿ ಮೊತ್ತದ ವಿಮಾ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಪ್ರಯಾಣಿಕರ ಸ್ನೇಹಿಯಾಗಿ ಯುಪಿಐ ಮತ್ತು Auto Refund ವ್ಯವಸ್ಥೆಯುಳ್ಳ ಆಂಡ್ರಾಯ್ಡ್‌ ಆಧಾರಿತ ಸ್ಮಾರ್ಟ್‌ ಇಟಿಎಂಗಳನ್ನು ಅಳವಡಿಸಲಾಗಿದೆ. ರಾಜ್ಯದ ಸಾರಿಗೆ ನಿಗಮಗಳ ಉತ್ತಮ ಕಾರ್ಯವೈಖರಿಗೆ ಈ ವರ್ಷ 69 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ  ಪ್ರಶಸ್ತಿಗಳು ಲಭಿಸಿವೆ.
  • ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಷಯವನ್ನು ಬಗೆಹರಿಸಲಾಗಿದೆ.  ರಾಜ್ಯದ ಜನರ ಜಾತಿವಾರು ಸಮೀಕ್ಷೆಯನ್ನು ನಡೆಸಿ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಾನಮಾನಗಳ ಸ್ಥಿತಿಗಳನ್ನು ಅಧ್ಯಯನ ಮಾಡಿ ನೀಡಿದ ವರದಿಯ ಆಧಾರದ ಮೇಲೆ ದಮನಿತ ಸಮುದಾಯಗಳ ಕಲ್ಯಾಣಗಳಿಗೆ ಬೇಕಾದ ಕ್ರಮಗಳನ್ನು ಸರ್ಕಾರವು ಕೈಗೊಂಡಿದೆ.   ಪರಿಶಿಷ್ಟ ಜಾತಿಗಳಲ್ಲಿ ಸಮಾನ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಜಾರಿ ಮಾಡಲಾಗುತ್ತಿರುವ ಒಳಮೀಸಲಾತಿ ಕುರಿತ ತೀರ್ಮಾನಕ್ಕೆ  ಐತಿಹಾಸಿಕ ಮಹತ್ವವಿದೆ.
  • 2025-26ನೇ ಸಾಲಿನಲ್ಲಿ SCSP-TSP ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಒಟ್ಟು ರೂ.42,018 ಕೋಟಿಗಳ ಅನುದಾನವನ್ನು ಒದಗಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ತಡೆಗಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ 33 ವಿಶೇಷ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗಿದೆ.
  • 2025-26ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕಾಗಿ 8.16 ಲಕ್ಷ ವಿದ್ಯಾರ್ಥಿಗಳಿಗೆ ರೂ.100.58 ಕೋಟಿ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ 2.82 ಲಕ್ಷ ವಿದ್ಯಾರ್ಥಿಗಳಿಗೆ ರೂ.239.69 ಕೋಟಿ ಪಾವತಿಸಲಾಗಿದೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ 1.02 ಲಕ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ.177.24 ಕೋಟಿ ಪ್ರೋತ್ಸಾಹಧನ ವಿತರಿಸಲಾಗಿದೆ. ದೇಶದ 100 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ MBBS ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆಯನ್ನು ಆರಂಭಿಸಲಾಗಿದೆ. ಬಾಡಿಗೆ ಕಟ್ಟಡದಲ್ಲಿರುವ ಶಾಲೆ/ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ರೂ.930 ಕೋಟಿ ಅನುದಾನ ಒದಗಿಸಲಾಗಿದೆ.
  • ಇಲಾಖೆಯ ವ್ಯಾಪ್ತಿಯಲ್ಲಿರುವ 119 ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು ಹಾಗೂ 304 ವಿದ್ಯಾರ್ಥಿ ನಿಲಯಗಳು ಸೇರಿದಂತೆ ಒಟ್ಟು 423 ಸಂಸ್ಥೆಗಳಲ್ಲಿ 52,409 ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿವೇತನಕ್ಕಾಗಿ ರೂ.226.11 ಕೋಟಿ ಮೀಸಲಿಟ್ಟಿದ್ದು, ಮೆಟ್ರಿಕ್‌ ಪೂರ್ವ ಮತ್ತು ನಂತರದ 3.24 ಲಕ್ಷ ವಿದ್ಯಾರ್ಥಿಗಳಿಗೆ ರೂ.226 ಕೋಟಿ ವಿದ್ಯಾರ್ಥಿವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ.
  • ಎಸ್.ಎಸ್.ಎಲ್.ಸಿ ಮತ್ತು ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ 29,924 ವಿದ್ಯಾರ್ಥಿಗಳಿಗೆ ರೂ.53.04 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ. ಐ.ಎ.ಎಸ್, ಕೆ.ಎ.ಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 1,028 ಅಭ್ಯರ್ಥಿಗಳಿಗೆ ರೂ.5.50 ಕೋಟಿ ವೆಚ್ಚದಲ್ಲಿ ತರಬೇತಿ ನೀಡಲಾಗಿದೆ. ‘ಪ್ರಬುದ್ಧ’ ಯೋಜನೆಯಡಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ 53 ವಿದ್ಯಾರ್ಥಿಗಳಿಗೆ ರೂ.11.21 ಕೋಟಿ ಸಹಾಯಧನ ಬಿಡುಗಡೆ ಮಾಡಲಾಗಿದೆ.
  • ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರ ಪೌಷ್ಠಿಕ ಆಹಾರ ಯೋಜನೆಯಡಿ 12 ಬುಡಕಟ್ಟು ಸಮುದಾಯಗಳ 47,982 ಕುಟುಂಬಗಳಿಗೆ ರೂ.120 ಕೋಟಿ ವೆಚ್ಚದಲ್ಲಿ ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಗೆ ರೂ.200 ಕೋಟಿ ನಿಗದಿಪಡಿಸಿದ್ದು, ‘ಮುಖ್ಯಮಂತ್ರಿಗಳ ಆದಿವಾಸಿ ಗೃಹಭಾಗ್ಯ’ ಯೋಜನೆಯಡಿ ವಸತಿ ರಹಿತ 6,856 ಕುಟುಂಬಗಳಿಗೆ ತಲಾ ರೂ.4.50 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲು ರೂ.160 ಕೋಟಿ ಮಂಜೂರು ಮಾಡಲಾಗಿದೆ. ಪರಿಶಿಷ್ಟ ಪಂಗಡದವರು ಹೆಚ್ಚಿರುವ ಪ್ರದೇಶಗಳಲ್ಲಿ ‘ಪ್ರಗತಿ ಕಾಲೋನಿ’ ಯೋಜನೆಯಡಿ ಮೂಲಸೌಕರ್ಯ ಕಲ್ಪಿಸಲು ರೂ.70 ಕೋಟಿ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ರೂ.25 ಕೋಟಿ ಅನುದಾನ ನಿಗಧಿಪಡಿಸಲಾಗಿದೆ.
  • ಆರ್ಥಿಕ ಸ್ವಾವಲಂಬನೆಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೂಲಕ ಸ್ವಯಂ ಉದ್ಯೋಗ, ಉದ್ಯಮಶೀಲತಾ ಅಭಿವೃದ್ಧಿ, ಮೈಕ್ರೋ  ಕ್ರೆಡಿಟ್‌ (ಪ್ರೇರಣಾ), ಭೂ ಒಡೆತನ ಹಾಗೂ ಗಂಗಾ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಒಟ್ಟು ರೂ.202 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
  • ಸರ್ಕಾರವು ಎಲ್ಲಾ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಸತಿ ಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ,   ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ 502 ವಸತಿ ನಿಲಯ ಹಾಗೂ ವಸತಿ ಶಾಲೆಗಳನ್ನು ಹೊಸದಾಗಿ ಮಂಜೂರು ಮಾಡಲಾಗಿದೆ. ರಾಜ್ಯದಲ್ಲಿ 5306 ವಸತಿ ನಿಲಯ ಹಾಗೂ 1127 ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು 8.5 ಲಕ್ಷ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗುಣ ಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿಚಾರದಲ್ಲಿ ರಾಜ್ಯವು ವಿನೂತನ ಕರ್ನಾಟಕ ಮಾದರಿಯನ್ನೆ ನಿರ್ಮಿಸಿದೆ.
  • ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿವೇತನಕ್ಕಾಗಿ ರೂ.985 ಕೋಟಿ ಅನುದಾನ ನಿಗಧಿಪಡಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ, ಕಟ್ಟಡಗಳ ನಿರ್ಮಾಣಕ್ಕೆ ರೂ.278 ಕೋಟಿ ಒದಗಿಸಲಾಗಿದೆ.
  •  ಹಿಂದುಳಿದ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ಇಲಾಖೆಯ ವ್ಯಾಪ್ತಿಯಲ್ಲಿರುವ 11 ಅಭಿವೃದ್ಧಿ ನಿಗಮಗಳಿಗೆ 2025-26ನೇ ಸಾಲಿನಲ್ಲಿ ರೂ.1,263 ಕೋಟಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ನಿಗಮಗಳ ಮೂಲಕ ಜನರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸ್ವಯಂ ಉದ್ಯೋಗ, ವಾಣಿಜ್ಯ ಬ್ಯಾಂಕುಗಳ ಹಾಗೂ ಅರಿವು ಶೈಕ್ಷಣಿಕ ಸಾಲಗಳನ್ನು ಮತ್ತು ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ ಯೋಜನೆ, ಆಹಾರ ಕಿಯೋಸ್ಕ್‌ಗಳಂತಹ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
  •  ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ 2025-26ನೇ ಸಾಲಿನಲ್ಲಿ 100 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಗಳನ್ನು ಎಲ್.ಕೆ.ಜಿಯಿಂದ ಪಿ.ಯು.ಸಿವರೆಗೆ ಉನ್ನತೀಕರಿಸಲಾಗಿದೆ. ಹೆಚ್ಚು ದಾಖಲಾತಿಯಿರುವ 100 ಉರ್ದು ಮಾಧ್ಯಮದ ಶಾಲೆಗಳನ್ನು ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ರೂ.100 ಕೋಟಿ ಅನುದಾನ ಒದಗಿಸಲಾಗಿದೆ.
  • ಸರ್ವರ ಅಭಿವೃದ್ಧಿಯ ಆಶಯದಂತೆ, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಗಳ ಅಭಿವೃದ್ಧಿಗಾಗಿ ರೂ.100 ಕೋಟಿ ಹಾಗೂ  ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ  ರೂ. 250 ಕೋಟಿಗಳನ್ನು ಒದಗಿಸಿ ಅವರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತಿದೆ. ಅಲ್ಪಸಂಖ್ಯಾತ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಸಮುದಾಯ ಆಧಾರಿತ ತರಬೇತಿ ಮತ್ತು ‘ಸ್ಟಾರ್ಟ್ ಅಪ್’ ಯೋಜನೆಗಳನ್ನು ರೂ.10 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
  • ಆರ್ಥಿಕ ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ, ಗುತ್ತಿಗೆಗಳಲ್ಲಿ , ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತರಲು ‘ಕಾಂಟ್ಟ್ರ್ಯಾಕ್ಟ್ ಮ್ಯಾನೇಜ್‌ಮೆಂಟ್ ಮಾಡ್ಯೂಲ್’ ಮೂಲಕ ಆನ್‌ಲೈನ್   ಬಿಲ್ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ.
  • ರಾಜ್ಯದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ವಿವಿಧ ಬಡ್ಡಿ ಸಹಾಯಧನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಎಂ.ಎಸ್.ಎಂ.ಇ ಬಡ್ಡಿ ಸಹಾಯಧನ ಯೋಜನೆಯಡಿ 1,777 ಉದ್ದಿಮೆದಾರರಿಗೆ ರೂ.2,076 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಸಾಮಾಜಿಕ ನ್ಯಾಯದ ಹಾದಿಯಲ್ಲಿ, ಪರಿಶಿಷ್ಟ ಜಾತಿ- ಪಂಗಡದ  4415 ಉದ್ದಿಮೆದಾರರಿಗೆ 3057 ಕೋಟಿ ಸಾಲದ ನೆರವು ನೀಡಲಾಗಿದೆ. ಮಹಿಳಾ ಸಬಲೀಕರಣದ ಭಾಗವಾಗಿ, 1,678 ಮಹಿಳಾ ಉದ್ಯಮಿಗಳಿಗೆ ಶೇ.4 ರ ಬಡ್ಡಿ ದರದಲ್ಲಿ ರೂ.1,657 ಕೋಟಿ ನೆರವು ಒದಗಿಸಲಾಗಿದೆ.
  • ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ  ಲೋಕೋಪಯೋಗಿ ಇಲಾಖೆಯಲ್ಲಿ  ರೂ.23,784 ಕೋಟಿ ಮೊತ್ತದಲ್ಲಿ 14,014 ಕಿಮೀ ರಸ್ತೆಗಳು,  389 ಸೇತುವೆಗಳು, 605 ಕಟ್ಟಡಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವುಗಳಲ್ಲಿ 20,193 ಕೋಟಿ ರೂ.ಗಳನ್ನು ವೆಚ್ಚ ಮಾಡಿ 10,736 ಕಿ.ಮೀ ಉದ್ದದ ರಸ್ತೆಗಳು, 237 ಸೇತುವೆಗಳು, 457 ಕಟ್ಟಡಗಳು ಪೂರ್ಣಗೊಳಿಸಲಾಗಿರುತ್ತದೆ. ಇದರ ಜೊತೆಗೆ ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲೂ ಹೆಚ್ಚುವರಿ ಅನುದಾನ ಲಭ್ಯವಾಗಿದೆ. ಈ ವರ್ಷದ ಮುಂಗಾರು ಪ್ರಾರಂಭವಾಗುವ ಮೊದಲು ಲೋಕೋಪಯೋಗಿ ಇಲಾಖೆಯ ರಸ್ತೆಗಳನ್ನು ಜನರ ಓಡಾಟಕ್ಕೆ ಪೂರಕವಾಗಿ ನಿರ್ಮಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
  • ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ‘ಜಲ್‌ ಜೀವನ್‌ ಮಿಷನ್’‌ ಯೋಜನೆಯಡಿಯಲ್ಲಿ 87.63 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕವನ್ನು ಒದಗಿಸಿದೆ. 137 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ  ಪೈಕಿ 8 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ಆಯವ್ಯಯದಲ್ಲಿ ರೂ.6,050 ಕೋಟಿ ಅನುದಾನ ಒದಗಿಸಿದೆ. ಕೇಂದ್ರ ಸರ್ಕಾರದಿಂದ ಸುಮಾರು ರೂ.13,000 ಕೋಟಿ ಅನುದಾನ ಬಿಡುಗಡೆಯಾಗಲು ಬಾಕಿ ಇದೆ. ನೀರಿನ ಗುಣಮಟ್ಟ ಕಾಪಾಡಲು 79 ಪ್ರಯೋಗಾಲಯಗಳನ್ನು ನಿರ್ವಹಿಸಲಾಗುತ್ತಿದ್ದು 2,26,391 ಮಾದರಿಗಳನ್ನು ಪರೀಕ್ಷಿಸಲಾಗಿದೆ. 1,51,063 ಗ್ರಾಮೀಣ ಮಹಿಳೆಯರಿಗೆ ‘ಫೀಲ್ಡ್ ಟೆಸ್ಟ್ ಕಿಟ್’ ತರಬೇತಿ ನೀಡಿ, ಅವರ ಮೂಲಕ 4,20,071 ನೀರಿನ ಮಾದರಿಗಳನ್ನು ಪರೀಕ್ಷಿಸಿ, ಕಲುಷಿತ ನೀರಿನ ಮೂಲಗಳಿರುವ ಕಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
  • ಗ್ರಾಮೀಣ ಸಂಪರ್ಕಕ್ಕಾಗಿ ‘ರೈತ ಪಥ’ ಯೋಜನೆಯಡಿ 1,425 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದ್ದು, ‘ಪ್ರಗತಿ ಪಥ’ ಯೋಜನೆಯಡಿ ರೂ.5,190 ಕೋಟಿ ವೆಚ್ಚದಲ್ಲಿ 7,110 ಕಿ.ಮೀ ರಸ್ತೆ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ.
  • ಆಡಳಿತದಲ್ಲಿ ಪಾರದರ್ಶಕತೆ ಮತ್ತು ಡಿಜಿಟಲೀಕರಣ ಮಾಡುವುದರ ಮೂಲಕ ಗ್ರಾಮೀಣ ಭಾಗದ 1.48 ಕೋಟಿ ಆಸ್ತಿಗಳ ಪೈಕಿ 53.10 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ನಿಯಮಗಳು-2025 ರನ್ವಯ ‘ಇ-ಸ್ವತ್ತು 2.0’ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ದಿನಾಂಕ: 01.12.2025 ರಂದು ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಇದರಿಂದ ಸಾರ್ವಜನಿಕರು ಆನ್‌ಲೈನ್ ಮೂಲಕ ನಮೂನೆ 11ಎ ಮತ್ತು 11ಬಿ ಪಡೆಯಲು ಸಾಧ್ಯವಾಗಿದೆ.
  • ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಉತ್ತಮವಾಗಿದೆ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಸ್ಥಾಪಿಸಲಾದ ‘ವಿಶೇಷ ಕಾರ್ಯಪಡೆ’ಯು ಕೋಮು ಸಂಘರ್ಷಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಯುವಜನತೆಯನ್ನು ಬಾಧಿಸುತ್ತಿರುವ ಮಾದಕ ದ್ರವ್ಯಜಾಲವನ್ನು ಮಟ್ಟಹಾಕಲು ʼಡ್ರಗ್ಸ್‌ ನಿಗ್ರಹ ಕಾರ್ಯಪಡೆ’ಯನ್ನು ಸ್ಥಾಪಿಸಿ, ಎ.ಡಿ.ಜಿ.ಪಿ ಹಂತದ ಅಧಿಕಾರಿಯ ನೇತೃತ್ವದಲ್ಲಿ 56 ಹುದ್ದೆಗಳನ್ನು ಸೃಜಿಸಲಾಗಿದೆ. ಇದಲ್ಲದೆ, ಪೊಲೀಸ್‌ ಸಿಬ್ಬಂದಿಯ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಐತಿಹಾಸಿಕ ನಿರ್ಧಾರದ ಭಾಗವಾಗಿ ಸ್ಲೋಚ್‌ ಹ್ಯಾಟ್‌ಗಳ ಬದಲಿಗೆ ‘ಪೀಕ್‌ ಕ್ಯಾಪ್‌’ಗಳನ್ನು ಸಮವಸ್ತ್ರದಲ್ಲಿ ಅಳವಡಿಸಲಾಗಿದೆ.
  • ಪೊಲೀಸ್‌ ವಸತಿ ಗೃಹ 2025′ ಯೋಜನೆಯಡಿ ರೂ.2000 ಕೋಟಿ ವೆಚ್ಚದಲ್ಲಿ 10,034 ವಸತಿಗೃಹಗಳ ನಿರ್ಮಾಣ ಮಾಡಲಾಗುತ್ತಿದೆ. 8 ನೂತನ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. ಕಾರಾಗೃಹ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ರೂ.100 ಕೋಟಿ ಅನುದಾನ ಒದಗಿಸಿದ್ದು, ಬೀದರ್‌, ವಿಜಯಪುರ, ದೇವನಹಳ್ಳಿ ಮತ್ತು ಬೆಂಗಳೂರು ಗರಿಷ್ಠ ಭದ್ರತಾ ಕಾರಾಗೃಹಗಳ ಕಾಮಗಾರಿಗೆ ರೂ.51.95 ಕೋಟಿ ಬಿಡುಗಡೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ 7 ಪ್ರಮುಖ ಕಾರಾಗೃಹಗಳಲ್ಲಿನ ಮೊಬೈಲ್ ಜಾಮರ್‌ಗಳನ್ನು ರೂ.43.76 ಕೋಟಿ ವೆಚ್ಚದಲ್ಲಿ 4G/5G ತಂತ್ರಜ್ಞಾನಕ್ಕೆ ಮೇಲ್ದರ್ಜೆಗೇರಿಸಲಾಗಿದೆ.
  • ವಿಪತ್ತು ನಿರ್ವಹಣೆಯಲ್ಲಿ ದಕ್ಷತೆ ಮೆರೆದಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಕಳೆದ ಸಾಲಿನಲ್ಲಿ 2,336 ಜೀವಗಳನ್ನು ರಕ್ಷಿಸಿ, ರೂ.1,452 ಕೋಟಿ ಮೌಲ್ಯದ ಆಸ್ತಿಯನ್ನು ಉಳಿಸಿದೆ. ‘ಕೆ-ಸೇಫ್’ ಯೋಜನೆಯಡಿ 5 ಹೊಸ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಲಾಗಿದೆ.‌
  • ಖಾಸಗಿ ಸಂಸ್ಥೆಯೊಂದು ಇತ್ತೀಚೆಗೆ ನಡೆಸಿರುವ ಸಮೀಕ್ಷೆ ಪ್ರಕಾರ ಬೆಂಗಳೂರು ನಗರವು   ಮಹಿಳೆಯರ ಪಾಲಿಗೆ ಇಡೀ ದೇಶದಲ್ಲಿಯೇ ಸುರಕ್ಷಿತ ನಗರ ಎಂದು ಗುರ್ತಿಸಲಾಗಿರುವುದು  ಹೆಮ್ಮೆಯ  ಸಂಗತಿಯಾಗಿದೆ.
  • ರಾಜ್ಯದ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ‘ಪ್ರವಾಸೋದ್ಯಮ ನೀತಿ 2024–2029’ ಅನ್ನು ಜಾರಿಗೆ ತಂದಿದೆ. ಪ್ರವಾಸಿ ತಾಣಗಳಲ್ಲಿ ‘ಕರ್ನಾಟಕ ಪ್ರವಾಸೋದ್ಯಮ ರೋಪ್‌-ವೇಗಳ ಮಸೂದೆ-2024’ ಅನ್ನು ಸಹ ಜಾರಿಗೆ ತಂದಿದೆ. ರಾಜ್ಯದ 12 ಪ್ರವಾಸಿ ತಾಣಗಳಲ್ಲಿ ರೋಪ್-‌ವೇಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಪರಿಸರ ಸ್ನೇಹಿ ಬೀಚ್‌ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಇಲಾಖೆಯ ಕಾರ್ಯಚರಣೆಯನ್ನು ಸುಗಮಗೊಳಿಸಲು ‘ಪ್ರವಾಸಿ ಸೌಧ’ ಸಂಕೀರ್ಣದ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ.
  • ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಸ್ತಪ್ರತಿಗಳ ದಾಖಲೀಕರಣ, ಸಂರಕ್ಷಣೆ ಮತ್ತು ಡಿಜಿಟಲೀಕರಣಕ್ಕಾಗಿ The Karnataka Jnana Bhandar Manuscripts and Digitilisation Bill 2025 ಹಾಗೂ ಕರ್ನಾಟಕ ಹಸ್ತಪ್ರತಿಗಳ ಪ್ರಾಧಿಕಾರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸ್ಮಾರಕ ಮತ್ತು ಪ್ರಾಚ್ಯಾವಶೇಷಗಳನ್ನು ದಾಖಲೀಕರಣಗೊಳಿಸುವಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸಂರಕ್ಷಣಾ ಯೋಜನೆಯಡಿ 82 ತಾಲ್ಲೂಕುಗಳ 11,289 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ, 7,903 ದೇವಾಲಯಗಳು, 5,091 ಶಾಸನಗಳು, 12,502 ಶಿಲಾಶಿಲ್ಪ/ವೀರಗಲ್ಲುಗಳು, 153 ಕೋಟೆಗಳು ಹಾಗೂ 780 ಕಲ್ಯಾಣಿಗಳು ಸೇರಿದಂತೆ ಒಟ್ಟಾರೆ 29,792 ಸ್ಮಾರಕ ಮತ್ತು ಪುರಾತತ್ವ ನೆಲೆಗಳನ್ನು ಯಶಸ್ವಿಯಾಗಿ ದಾಖಲೀಕರಿಸಲಾಗಿದೆ.
  • ಸರ್ಕಾರವು  ಜನರ ಕಲ್ಯಾಣಕ್ಕಾಗಿ  ಶಾಸನಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸುವ ಹಾಗೂ ಜನ ಸ್ನೇಹಿಯಾದ ಆಡಳಿತವನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ 2025ನೇ ಸಾಲಿನಲ್ಲಿ ಹೊಸ 119 ಕಾನೂನುಗಳನ್ನು ಶಾಸನ ಸಭೆಯು ರೂಪಿಸಿದೆ.
  • 2025-26ನೇ ಸಾಲಿನಲ್ಲಿ 900 ಶಾಲೆಗಳನ್ನು ಕೆ.ಪಿ.ಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಪ್ರತಿ ಶಾಲೆಗೆ ರೂ.2 ರಿಂದ 4 ಕೋಟಿ ವೆಚ್ಚದಲ್ಲಿ ಎಲ್.ಕೆ.ಜಿ ಯಿಂದ 12ನೇ ತರಗತಿಯವರೆಗೆ ಒಂದೇ ಆವರಣದಲ್ಲಿ ಶಿಕ್ಷಣ, ದ್ವಿಭಾಷಾ ಮಾಧ್ಯಮ, ಕಂಪ್ಯೂಟರ್ ಮತ್ತು ವೃತ್ತಿ ಶಿಕ್ಷಣ ನೀಡಲು ಕ್ರಮವಹಿಸಲಾಗುತ್ತಿದೆ.
  • ಮಾತೃಭಾಷೆಯ ಜೊತೆಗೆ ಆಂಗ್ಲಭಾಷಾ ಕೌಶಲ್ಯ ಬೆಳೆಸಲು ಒಟ್ಟು 9,522 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. 74 ಆದರ್ಶ ವಿದ್ಯಾಲಯಗಳನ್ನು ವಿಜ್ಞಾನ ಮತ್ತು ವಾಣಿಜ್ಯ ಸಂಯೋಜನೆಯ ಪದವಿ ಪೂರ್ವ ಕಾಲೇಜುಗಳನ್ನಾಗಿ  ಉನ್ನತೀಕರಿಸಿ, ಗಣಕ ವಿಜ್ಞಾನ ಲ್ಯಾಬ್‌ಗಳನ್ನು ಸ್ಥಾಪಿಸಲಾಗುತ್ತಿದೆ.  7 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ 2,200 ಹೆಚ್ಚುವರಿ ಕೊಠಡಿ ಮತ್ತು ಶೌಚಾಲಯಗಳ ನಿರ್ಮಾಣಕ್ಕೆ ರೂ.821 ಕೋಟಿ ಹಾಗೂ ಪೀಠೋಪಕರಣಗಳಿಗೆ ರೂ.50 ಕೋಟಿ ಅನುದಾನವನ್ನು ಒದಗಿಸಲಾಗಿದೆ.
  • ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರ ನೇಮಕಾತಿಗೆ ಒತ್ತು ನೀಡಲಾಗಿದೆ. 2025-26ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 5,267 ಹಾಗೂ ಇತರೆ ಜಿಲ್ಲೆಗಳಲ್ಲಿ 5,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 814 ಉಪನ್ಯಾಸಕರು ಹಾಗೂ 247 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ತಂತ್ರಜ್ಞಾನ ಆಧಾರಿತ ಕಲಿಕೆಗೆ ಪುಷ್ಟಿ ನೀಡಲು 100 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ರೂ.10 ಕೋಟಿ ವೆಚ್ಚದಲ್ಲಿ ಗಣಕ ವಿಜ್ಞಾನ ವಿಭಾಗ ಮತ್ತು ಲ್ಯಾಬ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಮಕ್ಕಳ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ರೂ.5.00 ಕೋಟಿ ವೆಚ್ಚದಲ್ಲಿ Face Recognition ತಂತ್ರಜ್ಞಾನ ಆಧಾರಿತ ‘ನಿರಂತರ’ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.
  • ಮಹಿಳಾ ಸಬಲೀಕರಣ ಮತ್ತು ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ, ಬ್ರಿಟಿಷ್ ಸರ್ಕಾರದ ಎಫ್.ಸಿ.ಡಿ.ಒ. ಸಹಭಾಗಿತ್ವದಲ್ಲಿ 2025–26ನೇ ಸಾಲಿನಲ್ಲಿ ‘ಚೆವೆನಿಂಗ್‌ ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನ’ವನ್ನು ಸ್ಥಾಪಿಸಲಾಗಿದೆ. ಇದರ ಮೂಲಕ ಮಹಿಳಾ ಪದವೀಧರರಿಗೆ   ಬ್ರಿಟನ್ನಿನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಲು ಸಂಪೂರ್ಣ ವಿದ್ಯಾರ್ಥಿ ವೇತನವನ್ನು ಒದಗಿಸಲಾಗುತ್ತಿದೆ. ಸರ್ಕಾರಿ   ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಶಿಕ್ಷಣ ಮುಂದುವರಿಸುತ್ತಿರುವ ವಿದ್ಯಾರ್ಥಿನಿಯರಿಗೆ ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರತಿ ವಿದ್ಯಾರ್ಥಿನಿಗೆ ವಾರ್ಷಿಕ ರೂ.30,000 ಗಳನ್ನು ನೀಡುವ ಮಹತ್ವದ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.
  • ತಾಂತ್ರಿಕ ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ, 2025–26ನೇ ಶೈಕ್ಷಣಿಕ ಸಾಲಿನಲ್ಲಿ ಅರಸೀಕೆರೆ ಮತ್ತು ಕೊಲ್ಹಾರದಲ್ಲಿ 2 ಹೊಸ ಸರ್ಕಾರಿ ಪಾಲಿಟೆಕ್ನಿಕ್‌ಗಳನ್ನು, ಹಲವು ಜಿಟಿಟಿಸಿ, ಎಮ್‌ಎಸ್‌ಡಿಸಿಗಳನ್ನು ಪ್ರಾರಂಭಿಸಲಾಗಿದೆ. ಹಾಗೂ ಅರಸೀಕೆರೆಯಲ್ಲಿ ಒಂದು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜನ್ನು ಪ್ರಾರಂಭಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಇಂಜಿನಿಯರಿಂಗ್‌ ಕಾಲೇಜನ್ನು ಆರಂಭಿಸಲಾಗಿದ್ದು, ಅಂದಾಜು ರೂ.150 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ.
  • ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಬಹುಮುಖ ಅಭಿವೃದ್ಧಿಗಾಗಿ ಸರ್ಕಾರವು ಪ್ರಮುಖ ಕೈಗಾರಿಕಾ ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡಿದೆ. ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದಲ್ಲಿ ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ‘ಹೋಲೊಲೆನ್ಸ್ ಮತ್ತು ಕೃತಕ ಬುದ್ಧಿಮತ್ತೆ ಪ್ರಯೋಗಾಲಯಗಳನ್ನು ಹಾಗೂ ಹೆಚ್.ಪಿ. ಸಂಸ್ಥೆಯ ಸಿ.ಎಸ್.ಆರ್. ನಿಧಿಯಡಿ GSKSJTI ಆವರಣದಲ್ಲಿ ‘AI ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಲಿಮಿಟೆಡ್‌ನ ಸಹಯೋಗದಲ್ಲಿ 5 ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ.
  • ರಾಜ್ಯದ ಮೂಲೆ ಮೂಲೆಗೂ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ತಲುಪಿಸಲು ಸರ್ಕಾರ ಬದ್ಧವಾಗಿದೆ. ಬೆಳಗಾವಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಯುರಾಲಜಿ, ನೆಫ್ರೋಲಜಿ, ಕಾರ್ಡಿಯಾಲಜಿ ಸೇರಿದಂತೆ ವಿವಿಧ ವಿಭಾಗಗಳೊಂದಿಗೆ ಪ್ರಾರಂಭಿಸಲಾಗಿದೆ. ಗುಲ್ಬರ್ಗಾದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ 371 ಹಾಸಿಗೆ ಸಾಮರ್ಥ್ಯದ ಘಟಕವನ್ನು ಹಾಗೂ 315 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಕೆ.ಹೆಚ್‌.ಪಾಟೀಲ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೂ.10 ಕೋಟಿ ವೆಚ್ಚದ ಕ್ಯಾಥ್ ಲ್ಯಾಬ್‌ ಸಹಿತ ಕಾರ್ಡಿಯಾಕ್ ಘಟಕವನ್ನು ಹಾಗೂ ಬೀದರ್‌ ಸಂಸ್ಥೆಯಲ್ಲಿ 75 ಹಾಸಿಗೆಯ ಕಾರ್ಡಿಯಾಕ್‌ ಯೂನಿಟ್‌ ಅನ್ನು ಲೋಕಾರ್ಪಣೆ ಮಾಡಲಾಗಿದೆ. ಬಳ್ಳಾರಿಯ ಬಿಎಂಸಿಆರ್‌ಐನಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು, ವಿವಿಧ ಹೊರರೋಗಿ ವಿಭಾಗಗಳನ್ನು ಆರಂಭಿಸಲಾಗಿದೆ. ರಾಯಚೂರಿನ ರಾಜೀವ್‌ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್ ಉದ್ಘಾಟಿಸಲಾಗಿದೆ.
  • ಕ್ಯಾನ್ಸರ್ ಚಿಕಿತ್ಸೆಯನ್ನು ಇನ್ನಷ್ಟು ಸಮರ್ಪಕಗೊಳಿಸಲು ಮೈಸೂರು ಹಾಗೂ ತುಮಕೂರುಗಳಲ್ಲಿ ಪೆರಿಫೆರಲ್‌   ಕ್ಯಾನ್ಸರ್‌ ಸೆಂಟರ್‌ಗಳನ್ನು ಉದ್ಘಾಟಿಸಲಾಗಿದೆ. ಬೀದರ್‌ ಮತ್ತು ರಾಯಚೂರುಗಳಲ್ಲಿ ರೂ.86 ಕೋಟಿ ವೆಚ್ಚದಲ್ಲಿ ಹೊಸ ಕ್ಯಾನ್ಸರ್‌ ಸೆಂಟರ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಮಾನಸಿಕ ಆರೋಗ್ಯ ಮತ್ತು ನರರೋಗ ಚಿಕಿತ್ಸೆಗಾಗಿ ಮೈಸೂರು ಮತ್ತು ಕಲಬುರಗಿಯಲ್ಲಿ ತಲಾ ರೂ.100 ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್‌ ಮಾದರಿಯ ಸಂಸ್ಥೆಗಳನ್ನು ಹಾಗೂ ಇದೇ ಸ್ಥಳಗಳಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಎಂಡೋಕ್ರೈನಾಲಜಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಪ್ಪಳದಲ್ಲಿ ರೂ.100 ಕೋಟಿ ವೆಚ್ಚದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಮತ್ತು ಜಯದೇವ ಸಂಸ್ಥೆಯ ಘಟಕಗಳಿಗೆ ರೂ.126 ಕೋಟಿ ವೆಚ್ಚದ ಉಪಕರಣ ಖರೀದಿಗೆ ಹಾಗೂ ಬೆಂಗಳೂರು ದಂತ ಕಾಲೇಜಿನ ನವೀಕರಣಕ್ಕೆ ರೂ.40 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ‘ಗೃಹ ಆರೋಗ್ಯ’ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದ್ದು, ಆಶಾ ಕಾರ್ಯಕರ್ತೆಯರ ಮೂಲಕ 30 ವರ್ಷ ಮೇಲ್ಪಟ್ಟ 62.37 ಲಕ್ಷ ಜನರಿಗೆ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಮತ್ತು ಹದಿಹರೆಯದವರ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ’ ಯೋಜನೆಯಡಿ 52.25 ಲಕ್ಷ ಮಕ್ಕಳನ್ನು ತಪಾಸಣೆಗೊಳಪಡಿಸಿ, ರಕ್ತಹೀನತೆ ಇರುವವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ‘ಆಶಾಕಿರಣ’ ಯೋಜನೆಯಡಿ 393 ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಿ, 2.68 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ ಹಾಗೂ 3.34 ಲಕ್ಷ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದೆ. ಮಾನಸಿಕ ಆರೋಗ್ಯಕ್ಕೆ ವಿಶೇಷ ಒತ್ತು ನೀಡಿ, ನಿಮ್ಹಾನ್ಸ್ ಸಹಯೋಗದೊಂದಿಗೆ 31 ಜಿಲ್ಲಾ ಆಸ್ಪತ್ರೆಗಳಲ್ಲಿ ‘ಬ್ರೈನ್ ಹೆಲ್ತ್ ಕ್ಲಿನಿಕ್’ಗಳನ್ನು ಸ್ಥಾಪಿಸಲಾಗಿದೆ.
  • ಬಡವರಿಗೂ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗಬೇಕೆಂಬ ಉದ್ದೇಶದಿಂದ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯಡಿ 3,514 ಆಸ್ಪತ್ರೆಗಳನ್ನು ನೋಂದಾಯಿಸಲಾಗಿದ್ದು, ಬೆನ್ನು ಮೂಳೆ ದೋಷ, ಮೊಣಕಾಲು ಕೀಲು ಬದಲಾವಣೆ ಹಾಗೂ ಮಂಗನ ಕಾಯಿಲೆಯಂತಹ ಚಿಕಿತ್ಸೆಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಹೃದಯಾಘಾತದ ಸಂದರ್ಭದಲ್ಲಿ ಅಮೂಲ್ಯ ಜೀವ ಉಳಿಸಲು ‘ಸ್ಟೆಮಿ’ ಯೋಜನೆಯಡಿ 7,668 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ‘ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ’ ಯೋಜನೆಯಡಿ 1,355 ರೋಗಿಗಳಿಗೆ ಜೀವ ರಕ್ಷಕ ಚುಚ್ಚುಮದ್ದು ನೀಡಲಾಗಿದೆ. 16 ಜಿಲ್ಲಾ ಆಸ್ಪತ್ರೆಗಳಲ್ಲಿ ‘ಡೇ ಕೇರ್ ಕಿಮೋಥೆರಪಿ’ ಕೇಂದ್ರಗಳನ್ನು ಸ್ಥಾಪಿಸಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ಆಂಬ್ಯುಲೆನ್ಸ್  ಸೇವೆಯನ್ನು ಬಲಪಡಿಸಲು ಕೇಂದ್ರೀಕೃತ ಕಮಾಂಡ್ ಸೆಂಟರ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಅಂಗಾಂಗ ದಾನದಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದ್ದು, ಒಂದೇ ವರ್ಷದಲ್ಲಿ 198 ದಾನ ಪ್ರಕ್ರಿಯೆಗಳ ಮೂಲಕ 564 ಅಂಗಾಂಗಗಳನ್ನು ದಾನ ಮಾಡಲಾಗಿದೆ.
  • ಸಾರ್ವಜನಿಕರ ಆರೋಗ್ಯ ಸುರಕ್ಷತೆಯನ್ನು ಖಾತ್ರಿಪಡಿಸಲು ಆಹಾರ ಮತ್ತು ಔಷಧ ಆಡಳಿತ ಇಲಾಖೆಯನ್ನು ಬಲಪಡಿಸಲಾಗಿದೆ. ಔಷಧ ವಿಭಾಗದಲ್ಲಿ ಮಾದರಿ ಸಂಗ್ರಹಣೆಯನ್ನು ಶೇ.200 ರಷ್ಟು ಹೆಚ್ಚಿಸಿ, ರೂ.1.97 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಔಷಧಗಳನ್ನು ಜಪ್ತಿ ಮಾಡಲಾಗಿದೆ. ಕಾಂತಿವರ್ಧಕಗಳು, ಕೆಮ್ಮಿನ ಸಿರಪ್ ಮತ್ತು ರಕ್ತ ಬ್ಯಾಂಕ್‌ಗಳ ಮೇಲೆ ವಿಶೇಷ ಅಭಿಯಾನಗಳನ್ನು ನಡೆಸಿ ಕಠಿಣ ಕ್ರಮ ಜರುಗಿಸಲಾಗಿದೆ. ಆಹಾರ ಸುರಕ್ಷತೆಗಾಗಿ 32 ವಿಶೇಷ ಅಭಿಯಾನಗಳನ್ನು ನಡೆಸಿ, 42,228 ಆಹಾರ ಮಾದರಿಗಳನ್ನು ವಿಶ್ಲೇಷಿಸಲಾಗಿದೆ. ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ತಡೆಯಲು ‘ರುಕೋ’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ.
  • ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನದ ಸಹಯೋಗದಲ್ಲಿ ಬೆಂಗಳೂರಿನ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ ಬಳಿಯಲ್ಲಿನ 10 ಎಕರೆ ಜಾಗದಲ್ಲಿ 1000  ಹಾಸಿಗೆ ಸಾಮರ್ಥ್ಯದ  ಬಹು ಅಂಗಾಂಗ ಕಸಿ ಚಾರಿಟಬಲ್‌ ಆಸ್ಪತ್ರೆಯನ್ನು ಸ್ಥಾಪಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
  • ರಾಜ್ಯದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಸುಭದ್ರ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ, ಒಲಿಂಪಿಕ್ಸ್, ಏಷಿಯನ್‌ ಗೇಮ್ಸ್ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತರಿಗೆ ವಿವಿಧ ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಈ ಯೋಜನೆಯನ್ನು ಇನ್ನಷ್ಟು ಸಶಕ್ತಗೊಳಿಸಿ ಪೊಲೀಸ್‌, ಅರಣ್ಯ ಮುಂತಾದ ಇಲಾಖೆಗಳ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿಯನ್ನು ನೀಡಲು ಪ್ರಾರಂಭಿಸಲಾಗಿದೆ. ವಿಶ್ವ ಕ್ರೀಡಾ ವೇದಿಕೆಯಲ್ಲಿ ರಾಜ್ಯದ ಹಿರಿಮೆ ಹೆಚ್ಚಿಸಲು ‘ಒಲಿಂಪಿಕ್ಸ್‌ ಪದಕ ಕಾರ್ಯಕ್ರಮ’ವನ್ನು ರೂಪಿಸಿದ್ದು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಸಿದ್ಧತೆಗಾಗಿ 60 ಪ್ರತಿಭಾವಂತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ರೂ.10 ಲಕ್ಷ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
  • ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಡಿಸೆಂಬರ್-‌2025ರ ಅಂತ್ಯಕ್ಕೆ ವಿವಿಧ ಯೋಜನೆಗಳಡಿ 4,19,454 ಮನೆಗಳನ್ನು ಪೂರ್ಣಗೊಳಿಸಿದೆ ಮತ್ತು ಇದಕ್ಕಾಗಿ ರೂ.6,948 ಕೋಟಿಗಳನ್ನು ವೆಚ್ಚ ಮಾಡಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು  ಪ್ರಾರಂಭಿಸಿರುವ 1,29,986 ಮನೆಗಳ ಪೈಕಿ 86,651 ಮನೆಗಳು ಪೂರ್ಣಗೊಂಡಿವೆ. ಸಧ್ಯದಲ್ಲೇ 2ನೇ ಹಂತದ 42,345 ಮನೆಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಬಡವರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು, ಫಲಾನುಭವಿಗಳಿಂದ ಗರಿಷ್ಠ ರೂ.1 ಲಕ್ಷವನ್ನಷ್ಟೇ ಪಡೆದು ಉಳಿಕೆ ಹಣವನ್ನು ಸರ್ಕಾರವೇ ಭರಿಸುತ್ತಿದೆ.  ಈ ಯೋಜನೆಯಲ್ಲಿ ರೂ.767 ಕೋಟಿ ಮೂಲಸೌಕರ್ಯ ವೆಚ್ಚ ಸೇರಿ ಒಟ್ಟು ರೂ.6,170 ಕೋಟಿಗಳನ್ನು ಸರ್ಕಾರವೇ ಭರಿಸುತ್ತಿದೆ.
  • ಕೊಳಗೇರಿ ನಿವಾಸಿಗಳಿಗೆ ಸಾಮಾಜಿಕ ಭದ್ರತೆ ಮತ್ತು ನೆಮ್ಮದಿಯ ಜೀವನ ಕಲ್ಪಿಸುವ ನಿಟ್ಟಿನಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 1,66,867 ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಪ್ರಸ್ತುತ 20,394 ಅರ್ಹ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
  • ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ತರುವ ಉದ್ದೇಶದಿಂದ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಒಳಾಡಳಿತ, ಕಂದಾಯ, ಅಬಕಾರಿ, ಸಮಾಜ ಕಲ್ಯಾಣ, ಉನ್ನತ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯಂತಹ ಪ್ರಮುಖ ಇಲಾಖೆಗಳ ಗ್ರೂಪ್‌-ಬಿ ಮತ್ತು ಗ್ರೂಪ್‌-ಸಿ ಹುದ್ದೆಗಳನ್ನು 2025-26 ರಲ್ಲಿ 7640 ಸಂಖ್ಯೆಯ ವರ್ಗಾವಣೆಗಳನ್ನು ಕೌನ್ಸೆಲಿಂಗ್‌ ಮೂಲಕ ನಡೆಸಲಾಗಿದೆ.
  • ಬಳಸಿದ ನೀರನ್ನು ಸಂಸ್ಕರಿಸಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು ಭರ್ತಿ ಮಾಡುವ ಮೂಲಕ   ರಾಜ್ಯವು ಹೊಸ ಮಾದರಿಯನ್ನು ಸೃಷ್ಟಿಸಿದೆ. ಈ ಮಾದರಿಯನ್ನು ವಿಶ್ವಸಂಸ್ಥೆಯ ಮುಖ್ಯಸ್ಥರು ಶ್ಲಾಘಿಸಿದ್ದಾರೆ.
  • ಅರಣ್ಯ ಇಲಾಖೆ ವತಿಯಿಂದ ಅಪ್ಸರಕೊಂಡ–ಮುಗಳಿ ಸಮುದ್ರ ವನ್ಯಜೀವಿ ಅಭಯಾರಣ್ಯವನ್ನು ಅಧಿಸೂಚಿಸಲಾಗಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ಪರಿಹರಿಸಲು, ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ 11 ಜಿಲ್ಲಾ ಮಟ್ಟದ ಕೇಂದ್ರಗಳೊಂದಿಗೆ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗಿದೆ.
  • ಶ್ರೀಮತಿ ಬಾನು ಮುಷ್ತಾಕ್ ಮತ್ತು ಶ್ರೀಮತಿ ದೀಪಾ ಭಸ್ತಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದಿದ್ದು, ತಲಾ ₹10 ಲಕ್ಷದೊಂದಿಗೆ   ಗೌರವಿಸಲಾಯಿತು. ಶ್ರೀ ಎಸ್. ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲಾಗುತ್ತಿದೆ. ಐತಿಹಾಸಿಕ ದಾಖಲೆಗಳು ಮತ್ತು ರಾಜ್ಯ ಗೆಜೆಟ್‌ಗಳ ಡಿಜಿಟಲ್ ಆರ್ಕೈವಿಂಗ್ ಮತ್ತು ಸಂರಕ್ಷಣೆ  ಕಾರ್ಯ ಮುಂದುವರೆದಿದೆ. 
  • ಇದರ ಜೊತೆಗೆ ಆರ್‌‌.ವಿ ದೇಶಪಾಂಡೆಯವರ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗವು ನೀಡಿರುವ ವರದಿಯಲ್ಲಿನ ಹಲವಾರು   ಶಿಫಾರಸ್ಸುಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಅನುಷ್ಠಾನ ಮಾಡುತ್ತಿದೆ.
  • ಈ ಭಾಷಣದಲ್ಲಿನ ಬಹುತೇಕ ಅಂಕಿ ಅಂಶಗಳು ಡಿಸೆಂಬರ್‌ 2025 ರವರೆಗಿನ ಸರ್ಕಾರದ ಸಾಧನೆಗಳನ್ನು ಬಿಂಬಿಸುತ್ತದೆ.
  • ಕಳೆದ ವರ್ಷ ಜಾರಿಗೆ ತಂದ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳನ್ನು ನಿಯಂತ್ರಿಸುವ ಕಾಯ್ದೆಯಿಂದ ಸಾಲ ಪಡೆದವರ ಮೇಲಿನ ಕಿರುಕುಳ ನಿಯಂತ್ರಣಕ್ಕೆ ಬಂದಿದೆ. ಈ ಕಾಯ್ದೆಯಡಿ ಅಪರಾಧವೆಸಗುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಕನಿಷ್ಠ 10 ವರ್ಷಗಳ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಈ ವರ್ಷ ಕರ್ನಾಟಕ ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ಕಾಯ್ದೆ ಸೇರಿದಂತೆ ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಒಳ ಮೀಸಲಾತಿ ವಿಷಯದ ಕಾರಣಕ್ಕೆ ಸರ್ಕಾರವು ನಡೆಸುವ ನೇಮಕಾತಿಗಳಿಗೆ ತುಸು ಹಿನ್ನಡೆಯಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಮುಂದಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆಗಳಿಗೆ ಇನ್ನಷ್ಟು ವೇಗ ನೀಡಲಾಗುವುದು.
  • ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವು ಹಲವು ರೀತಿಯ ದಮನಗಳಿಗೆ ತುತ್ತಾಗಿದ್ದರೂ ಸಹ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ರಚಿಸಿದ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದೆ. ಅಭಿವೃದ್ಧಿಯಲ್ಲಿ ಕರ್ನಾಟಕದ್ದೇ ಆದ ಮಾದರಿಗಳನ್ನು ಸೃಷ್ಟಿಸಿದೆ.  ಜನ  ಕಲ್ಯಾಣ, ನಾಡ ಕಲ್ಯಾಣ ಹಾಗೂ ಸೌಹಾರ್ದ ಕರ್ನಾಟಕದ ನಿರ್ಮಾಣದಲ್ಲಿ ತೊಡಗಿದೆ. ಜನರ ಬದುಕಿಗೆ ನೆರವಾಗುವ ಸರ್ಕಾರವನ್ನು ಜನಪರ ಸರ್ಕಾರವೆಂದೇ ಕರೆಯಬೇಕಾಗುತ್ತದೆ. ಒಟ್ಟಾರೆ ರಾಜ್ಯದ ಆರ್ಥಿಕ, ಸಾಮಾಜಿಕ ಹಾಗೂ ಭೌತಿಕ ಅಭಿವೃದ್ಧಿಯ ವೇಗವನ್ನು ದ್ವಿಗುಣಗೊಳಿಸಲು ನನ್ನ   ಸರ್ಕಾರವು ಕಂಕಣ ಬದ್ಧವಾಗಿದೆ.

ಜೈ ಹಿಂದ್‌ – ಜೈ ಕರ್ನಾಟಕ- ಜೈ ಸಂವಿಧಾನ್

Related Articles

Back to top button