*ಈ ಜಿಲ್ಲೆಗಳಲ್ಲಿ ಇನ್ನಷ್ಟು ಹೆಚ್ಚಲಿದೆ ತಾಪಮಾನ; ಬಿಸಿಗಾಳಿ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ*
ಪ್ರಗತಿವಾಹಿನಿ ಸುದ್ದಿ: ರಣಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಬೆನ್ನಲ್ಲೇ ಇನ್ನು ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಲಿದೆ ಎಂದು ಹಲಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೇ ರಾಜಧಾನಿ ಬೆಂಗಳೂರು, ಕಲಬುರ್ಗಿ, ಯಾದಗಿರಿ, ಬೆಳಗಾವಿ, ಉತ್ತರಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ 37-44 ಡಿಗ್ರಿ ಸೆಲ್ಸಿಯಸ್ ವರೆಗೂ ಉಷ್ಣಾಂಶ ದಾಖಲಾಗಿದೆ. ರಾಜ್ಯದಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಹೀಟ್ ಸ್ಟ್ರೋಕ್ ಉಂಟಾಗುವ ಭೀತಿ ಎದುರಾಗಿದೆ.
ಬೆಂಗಳೂರು, ಕಲಬುರ್ಗಿ, ಯಾದಗಿರಿ ಸೇರಿದಂತೆ ಹಲವೆಡೆಗಳಲ್ಲಿ ಮಧ್ಯಾಹ್ನವಾಗುತ್ತಿದ್ದಂತೆ ರಣಬಿಸಿಲು ಏರುತ್ತಿದ್ದು, ಭೂಮಿ ಕಾದಕಾವಲಿಯಂತಾಗುತ್ತಿದೆ. ಅಲ್ಲದೇ ಬಿಸಿಗಾಳಿ ಶುರುವಾಗಿದ್ದು, ಉಸಿರಾಡುವುದೂ ಕಷ್ಟಕರವಾಗುತ್ತಿದೆ. ಇನ್ನು ಎರಡು ದಿನಗಳಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ.
ರಾಯಚೂರು, ಕಲಬುರ್ಗಿ, ಕೊಪ್ಪಳ, ಹಾವೇರಿ, ಗದಗ, ಯಾದಗಿರಿ, ವಿಜಯಪುರ, ವಿಜಯನಗರ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಬೆಂಗಳೂರು ಜಿಲ್ಲೆಗಳಲ್ಲಿ ಉಷ್ಣ ಅಲೆ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ