Kannada NewsKarnataka NewsLatest

*ಬಿಸಿಲ ಝಳದ ನಡುವೆ ಆಲಿಕಲ್ಲು ಮಳೆ ಮುನ್ಸೂಚನೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಉಷ್ಣ ಅಲೆಯಿಂದ ಜನರು ಕಂಗೆಟ್ಟು ಹೋಗಿದ್ದು, ಬದುಕೇ ದುಸ್ಥರವಾಗುತ್ತಿದೆ. ನಿನ್ನೆ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಕೊಂಚ ತಂಪೆರೆದಂತಾಗಿದೆ. ಆದರೆ ರಾಜ್ಯದ ಹಲವೆಡೆ ಉಷ್ಣ ಅಲೆ ಮತ್ತಷ್ಟು ಹೆಚ್ಚಿದೆ.

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಕೆಲ ಭಾಗಗಳಲ್ಲಿ ಗುಡುಗು ಮಳೆಯಾಗಿದೆ. ಆದರೆ ಮತ್ತೆ ಹಲವೆಡೆ ಮಳೆಯೂ ಇಲ್ಲ ತಂಪು ಗಾಳಿಯೂ ಇಲ್ಲ. ಬಿಸಿ ಗಾಳಿಯಿಂದಾಗಿ ಜನರು ಹೈರಾಣಾಗಿದ್ದಾರೆ. ಇಂದು ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Home add -Advt

ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ 2-3 ದಿನಗಳ ಕಾಲ ಆಲಿಕಲ್ಲು ಮಳೆಯಾಗುವ ಸಂಭವವಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಳೆದ ಹಲವು ದಿನಗಳಿಂದ ಹೀಟ್ ವೇವ್ ಅಲರ್ಟ್​ ಇತ್ತು. ಅದರ ಜೊತೆಗೆ ಸಾಧಾರಣ ಮಳೆಯೂ ಅಲ್ಲಲ್ಲಿ ಕಂಡು ಬರುತ್ತಿತ್ತು. ಆದರೆ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ರಾಯಚೂರು, ಬಾಗಲಕೋಟೆ, ಯಾದಗಿರಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದ ಗಾಳಿಯ ಜೊತೆಗೆ ಗುಡುಗು ಸಹಿತ ಆಲಿಕಲ್ಲು ಮಳೆ ರಭಸದಿಂದ ಸುರಿಯಲಿದೆ . ಉಳಿದಂತೆ ಎಲ್ಲೆಡೆ ಶುಷ್ಕ ಹವಾಮಾನ ಇರಲಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ ವೇಗವಾದ ಗಾಳಿ 40-50 ಕಿ.ಮೀ ಬೀಸುವ ಸಾಧ್ಯತೆಯಿದೆ.


Related Articles

Back to top button