Karnataka News

*ಈ ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಮಳೆ ಮುನ್ಸೂಚನೆ | Rain Update*

ಪ್ರಗತಿವಾಹಿನಿ ಸುದ್ದಿ: ಮೈ ಕೊರೆವ ಚಳಿ, ಶೀತಗಾಳಿ ಜೊತೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ದಕ್ಷಿಣ ಒಳಭಾಗ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಅಲ್ಲಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶುಷ್ಕ ಗಾಳಿ ಮುಂದುವರೆಯಲಿದೆ.

ರಾಯಚೂರು, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಚಳಿ ಪ್ರಮಾಣ ಹೆಚ್ಚಲಿದೆ. ಉಳಿದಂತೆ ರಾಜ್ಯದಲ್ಲಿ ಮಂಜು ಕವಿದ ವಾತಾವರಣ, ತುಂತುರು ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಮುಂಜಾನೆಯಿಂದ ಮಳೆ ಸುರಿಯುತ್ತಿದ್ದು, ಮೈ ಕೊರೆವ ಚಳಿ, ಶೀತಗಾಳಿ ಜನರನ್ನು ಹೈರಾಣಾಗಿಸಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ, ಮಂಗಳೂರು ಭಾಗದಲ್ಲಿಯೂ ಮಳೆಯಾಗುತ್ತಿದ್ದು, ಹಲವೆಡೆ ದಟ್ಟವಾದ ಮಂಜು ಕವಿದ ವಾತಾವರಣವಿದೆ.

ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಹಾಗೂ ರಾತ್ರಿ ತುಂತುರು ಹಾಗೂ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಸುಳ್ಯ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತ ಮಧ್ಯಾಹ್ನ ನಂತರ ಆರಂಭವಾಗುವ ಲಕ್ಷಣಗಳಿವೆ. ಉತ್ತರ ಕನ್ನಡ ಅಲ್ಲಲ್ಲಿ ಮೋಡ ಮಾತ್ರ ಇರಬಹುದು.
ಈಗಿನಂತೆ ಜನವರಿ 20ರಂದು ಅಲ್ಲಲ್ಲಿ ಮೋಡ ಇದ್ದು 21ರಿಂದ ಒಣ ಹವೆ ಆವರಿಸುವ ಸಾಧ್ಯತೆಗಳಿವೆ.

ಮಲೆನಾಡು : ಕೊಡಗು ಮಧ್ಯಾಹ್ನ ನಂತರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಧ್ಯಾಹ್ನ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಚಿಕ್ಕಮಗಳೂರಿನ ಮೂಡಿಗೆರೆ, ಬಾಳೆಹೊನ್ನೂರು, ಶಿೃಂಗೇರಿ, ಕುದುರೆಮುಖ, ಆಗುಂಬೆ ಸುತ್ತಮುತ್ತ ಸ್ವಲ್ಪ ಜಾಸ್ತಿ ಇರಬಹುದು.
ಶಿವಮೊಗ್ಗದ ಉಡುಪಿ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಮೋಡ ಮಾತ್ರ ಇರಬಹುದು.
ಈಗಿನಂತೆ ಜನವರಿ 20ರಿಂದ ಒಣಹವೆ ಆವರಿಸುವ ಲಕ್ಷಣಗಳಿವೆ.

ಒಳನಾಡು : ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. ಒಂದೆರಡು ಕಡೆ ಹಗುರ ಮೋಡದ ವಾತಾವರಣದ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ ತುಮಕೂರು, ಬೆಂಗಳೂರು ಭಾಗಗಳಲ್ಲಿ ಮುಂಜಾನೆಯೇ ಮಳೆ ಆರಂಭವಾಗಿದ್ದು, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಧ್ಯಾಹ್ನ ಒಳಗಾಗಿ ಮಳೆಯ ಮುನ್ಸೂಚನೆ ಇದೆ. ರಾತ್ರಿ ವೇಳೆ ಮೈಸೂರು ಸುತ್ತ ಮುತ್ತ ಮತ್ತೆ ಮಳೆಯ ಸಾಧ್ಯತೆ ಇದೆ. ಚಿತ್ರದುರ್ಗ ಮೋಡ ಮಾತ್ರ ಇರಬಹುದು.
ಈಗಿನಂತೆ ಜನವರಿ 20ರಿಂದ ಒಣಹವೆ ಆವರಿಸುವ ಸಾಧ್ಯತೆಗಳಿವೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button